ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ತೀವ್ರ

ಕೇರಳ–ಮಹಾರಾಷ್ಟ್ರದಿಂದ ಬಂದವರ ಮೇಲೆ ನಿಗಾ
Last Updated 26 ಫೆಬ್ರುವರಿ 2021, 21:26 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇರಳ, ಮಹಾರಾಷ್ಟ್ರ ಸೇರಿದಂತೆ ಹೊರರಾಜ್ಯಗಳಿಂದ ಬಂದಿರುವ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಕೋವಿಡ್ ಪರೀಕ್ಷೆ ಕಾರ್ಯವನ್ನು ತೀವ್ರಗೊಳಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಗರದಲ್ಲಿರುವ ಎಲ್ಲ ವಿದ್ಯಾಸಂಸ್ಥೆಗಳಲ್ಲಿ ಪ್ರಮುಖವಾಗಿ ನರ್ಸಿಂಗ್ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ಕೇರಳ, ಮಹಾರಾಷ್ಟ್ರದಿಂದ ಬಂದಿರುವ ವಿದ್ಯಾರ್ಥಿಗಳನ್ನು ಪ್ರಮುಖವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ’ ಎಂದರು.

‘ಯಲಹಂಕ ವಲಯದಲ್ಲಿನ ಅಟ್ಟೂರಿನಲ್ಲಿರುವ ಸಂಭ್ರಮ್ ಕಾಲೇಜಿನಲ್ಲಿ ಕಳೆದ ಎರಡು–ಮೂರು ದಿನಗಳಲ್ಲಿ 1,156 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ 9 ಜನರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಪ್ರತ್ಯೇಕವಾಗಿ ಇರಿಸಲಾಗಿದೆ. ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ’ ಎಂದರು.

‘ಇದೇ ವಲಯದ ಎಂ.ಎಸ್. ಪಾಳ್ಯದಲ್ಲಿರುವ ಅಗ್ರಗಾಮಿ ಕಾಲೇಜಿನಲ್ಲಿ 217 ಜನರ ಪರೀಕ್ಷೆ ಮಾಡಲಾಗಿದ್ದು, ಐವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ’ ಎಂದು ತಿಳಿಸಿದರು.

‘ಕಾಲೇಜುಗಳಲ್ಲದೆ, ಪಿ.ಜಿ ಕಟ್ಟಡ ಅಥವಾ ವಸತಿ ನಿಲಯಗಳಲ್ಲಿ ಇರುವ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೊರರಾಜ್ಯಗಳಿಂದ ಬರುತ್ತಿರುವ ವಿದ್ಯಾರ್ಥಿಗಳ ಮೇಲೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ನಿಗಾ ಇಟ್ಟಿದ್ದಾರೆ’ ಎಂದು ಹೇಳಿದರು.

‘ಯಾವುದೇ ಶೈಕ್ಷಣಿಕ ಸಂಸ್ಥೆ ಅಥವಾ ವಸತಿ ಸಮುಚ್ಚಯದಲ್ಲಿ ಐದಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದರೆ ಅದನ್ನು ಒಂದು ಕ್ಲಸ್ಟರ್ ಎಂದು ಗುರುತಿಸಲಾಗುತ್ತದೆ. ಸದ್ಯ ನಗರದಲ್ಲಿ ಐದು ಕ್ಲಸ್ಟರ್‌ಗಳಿವೆ. ಬೊಮ್ಮನಹಳ್ಳಿ –ಮಹದೇವಪುರದಲ್ಲಿ ವಸತಿ ಕ್ಲಸ್ಟರ್‌ಗಳಿದ್ದರೆ, ಕಾವಲ್‌ ಬೈರಸಂದ್ರ, ಅಟ್ಟೂರು, ಎಂ.ಎಸ್. ಪಾಳ್ಯ ಶೈಕ್ಷಣಿಕ ಸಂಸ್ಥೆ ಕ್ಲಸ್ಟರ್‌ಗಳಾಗಿವೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT