ಮಂಗಳವಾರ, ಮೇ 11, 2021
24 °C
600 ಹಾಸಿಗೆ ಲಭ್ಯ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಸ್ಪಷ್ಟನೆ

ಕೋವಿಡ್ ಚಿಕಿತ್ಸೆಗಾಗಿ ಹಾಸಿಗೆ ಒದಗಿಸಲು ಬಿಬಿಎಂಪಿ ಹರಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ನಿತ್ಯ ಹೆಚ್ಚೂ ಕಡಿಮೆ 10 ಸಾವಿರ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ. ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಕೋವಿಡ್ ರೋಗಿಗಳ ಚಿಕಿತ್ಸೆಗೆ ನಗರದಲ್ಲಿ ಹಾಸಿಗೆಗಳ ತೀವ್ರ ಕೊರತೆ ಎದುರಾಗಿದೆ. ಈ ಸಮಸ್ಯೆ ನೀಗಿಸಲು ಬಿಬಿಎಂಪಿ ಹರಸಾಹಸ ಪಡುತ್ತಿದೆ.

‘ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ನೋಂದಾಯಿಸಿರುವ ಖಾಸಗಿ ಆಸ್ಪತ್ರೆಗಳು ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಹಾಸಿಗೆಗಳು ಸೇರಿ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 4,300 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಈಗಲೂ 600 ಹಾಸಿಗೆಗಳು ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಲಭ್ಯ ಇವೆ. ಹಾಸಿಗೆಗಳ ಕೊರತೆ ಸದ್ಯಕ್ಕಂತೂ ಇಲ್ಲ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ತಿಳಿಸಿದರು.

‘ಪಾಲಿಕೆ ಕೇಂದ್ರ ಕಚೇರಿಯ ‘ಕೇಂದ್ರೀಕೃತ ವಾರ್ ರೂಂ’ ಹಾಗೂ ಎಲ್ಲಾ ವಲಯಗಳಲ್ಲಿನ ವಿಕೇಂದ್ರಿಕೃತ ವಾರ್ ರೂಂಗಳ ಮೂಲಕ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಹಾಸಿಗೆ ಹಂಚಿಕೆ ಮಾಡಲಾಗುತ್ತಿದೆ. ಐಸಿಎಂಆರ್ ಪೋರ್ಟಲ್‌ನಲ್ಲಿ ಸೋಂಕಿತರ ಮಾಹಿತಿ ಲಭ್ಯವಾದ ಬಳಿಕ ಇಂಡೆಕ್ಸ್ ತಂತ್ರಾಂಶದ ಮೂಲಕ ಸೋಂಕಿತರ ಮಾಹಿತಿ ಪಡೆದು ಸೋಂಕಿತರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ತಿಳಿದುಕೊಂಡು ಅವಶ್ಯಕತೆಗೆ ತಕ್ಕಂತೆ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಕೋವಿಡ್‌ ಚಿಕಿತ್ಸೆಗೆ ಹಾಸಿಗೆ ಅಗತ್ಯ ಇರುವವರು ಸಹಾಯವಾಣಿ (1912) ಮೂಲಕ ಸಂಪರ್ಕ ಮಾಡಬಹುದು. ನೇರವಾಗಿ ಆಸ್ಪತ್ರೆಗೆ ಹೋಗುವುದರಿಂದ ಪ್ರಯೋಜನವಾಗುವುದಿಲ್ಲ. ಸರ್ಕಾರದ ವತಿಯಿಂದ ನಡೆಸುವ ಹಾಸಿಗೆ ಹಂಚಿಕೆ ವ್ಯವಸ್ಥೆಯನ್ನು ಬಳಸಿಕೊಳ್ಳಿ’ ಎಂದು ಮುಖ್ಯ ಆಯುಕ್ತರು ತಿಳಿಸಿದರು.

‘1912ಕ್ಕೆ ಕರೆ ಮಾಡಿದರೂ ಹಾಸಿಗೆ ಲಭಿಸುತ್ತಿಲ್ಲ. ಹಾಸಿಗೆ ವ್ಯವಸ್ಥೆ ಕಲ್ಪಿಸುವುದಾಗಿ ಬಿಬಿಎಂಪಿ ಸಿಬ್ಬಂದಿ ಭರವಸೆ ನೀಡುತ್ತಾರೆ, ಆದರೆ ದಿನವಿಡೀ ಕಾದರೂ ಹಾಸಿಗೆ ಲಭಿಸುತ್ತಿಲ್ಲ’ ಎಂದು ಕೋವಿಡ್‌ ರೋಗಿಗಳ ಬಂಧುಗಳು ದೂರುತ್ತಿದ್ದಾರೆ.

ತಾತ್ಕಾಲಿಕ ಆಸ್ಪತ್ರೆ ರಚನೆ

‘ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹಾಸಿಗೆ ಸಾಮರ್ಥ್ಯವನ್ನು 150 ಹಾಸಿಗೆಗಳಿಂದ 500ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ದೊಡ್ಡ ಆಸ್ಪತ್ರೆಗಳ ಮೇಲುಸ್ತುವಾರಿಯಲ್ಲಿ ತಾತ್ಕಾಲಿಕ ಆಸ್ಪತ್ರೆಗಳಿಗೆ ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಕಾಯಿಲೆಯ ಗಂಭೀರತೆ ಕಡಿಮೆ ಇರುವವರಿಗೆ ಇಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ’ ಎಂದೂ ಅವರು ತಿಳಿಸಿದರು.

ಎಲ್ಲ ಆಸ್ಪತ್ರೆಗಳಲ್ಲಿ ಲಭ್ಯ ಇರುವ ಶೇ 50ರಷ್ಟು ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಮೀಸಲಿಡುವಂತೆ ಸರ್ಕಾರ ಸೂಚನೆ ನೀಡಿ ಬಳಿಕವೂ ಕೆಲವು ಆಸ್ಪತ್ರೆಗಳು ಈ ಆದೇಶ ಪಾಲಿಸುತ್ತಿಲ್ಲ. ಇಂತಹ ಆಸ್ಪತ್ರೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂ‍ಪಿ ಎಚ್ಚರಿಕೆ ನೀಡಿದೆ.

ರೋಗ ಲಕ್ಷಣ ಗಂಭೀರವಾಗಿಲ್ಲದವರು ಕೂಡಾ ಅಪಾಯ ತಂದೊಡ್ಡಿಕೊಳ್ಳುವುದು ಬೇಡ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಇದರಿಂದಾಗಿ ಯಾರಿಗೆ ತುರ್ತು ಅಗತ್ಯವಿದೆಯೋ ಅವರ ಚಿಕಿತ್ಸೆಗೆ ಹಾಸಿಗೆಗಳು ಲಭಿಸುತ್ತಿಲ್ಲ ಎಂಬ ದೂರುಗಳಿವೆ.

‘ಕೋವಿಡ್ ಸೋಂಕು ದೃಢಪಟ್ಟವರೆಲ್ಲರೂ ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆಯಿಲ್ಲ. ರೋಗ ಲಕ್ಷಣಗಳಿಲ್ಲದ ಕೋವಿಡ್ ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗಿ ಆರೈಕೆ ಪಡೆಯಬಹುದು. ಕೋವಿಡ್‌ ಸೋಂಕಿತರಲ್ಲಿ ಶೇ 80 ರಷ್ಟು ಮಂದಿ ಮನೆಯಲ್ಲೇ ಆರೈಕೆಗೆ ಒಳಗಾಗುತ್ತಿದ್ದಾರೆ. ಮನೆಯಲ್ಲಿ ಪ್ರತ್ಯೇಕ ವಾಸಕ್ಕೆ ಒಳಗಾಗುವಂತಹ ಸೌಕರ್ಯ ಇಲ್ಲದವರು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಉಳಿದುಕೊಳ್ಳಬಹುದು’ ಎಂದು ಗೌರವ ಗುಪ್ತ ತಿಳಿಸಿದರು.

‘ಖಾಸಗಿ ಆಸ್ಪತ್ರೆಗಳಲ್ಲಿ ಹಾಗೂ ಹೋಟೆಲ್‌ಗಳಲ್ಲಿಯೂ ಕೋವಿಡ್ ಆರೈಕೆ ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ. ನಗರದಲ್ಲಿ ಇನ್ನೂ 10 ಕಡೆ ಹೊಸ ಕೋವಿಡ್ ಆರೈಕೆ ಕೇಂದ್ರಗಳನ್ನು ತೆರೆಯಲು ಕ್ರಮವಹಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಚರಕ ಆಸ್ಪತ್ರೆಯಲ್ಲಿ 150 ಐಸಿಯು ಹಾಸಿಗೆ

‘ಐಸಿಯು ಹಾಗೂ ವೆಂಟಿಲೇಟರ್‌ ಸೌಲಭ್ಯದ ಇರುವ ಹಾಸಿಗೆಗಳೂ ಕೋವಿಡ್‌ ರೋಗಿಗಳ ಚಿಕಿತ್ಸೆಗೆ ಲಭ್ಯ ಇವೆ. ಶಿವಾಜಿನಗರದ ಚರಕ ಆಸ್ಪತ್ರೆಯಲ್ಲಿ ಐಸಿಯು  ಮತ್ತು ವೆಂಟಿಲೇಟರ್‌ ಸೌಕರ್ಯ ಹೊಂದಿರುವ 150 ಹಾಸಿಗೆಗಳನ್ನು ಕೋವಿಡ್‌ ಚಿಕಿತ್ಸೆಗೆ ಶನಿವಾರದಿಂದ ಒದಗಿಸಲಾಗುತ್ತದೆ.  ಹಾಸಿಗೆ ಹಂಚಿಕೆ ವ್ಯವಸ್ಥೆ ಮೂಲಕವೇ ಇವುಗಳ ಹಂಚಿಕೆ ಮಾಡಲಾಗುತ್ತದೆ’ ಎಂದು ಗೌರವ ಗುಪ್ತ ಮಾಹಿತಿ ನೀಡಿದರು.

60 ಹೊಸ ಆಂಬುಲೆನ್ಸ್‌

ಶುಕ್ರವಾರದಿಂದ 60 ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಾರ್ಡ್‌ನಲ್ಲಿ ತಲಾ ಎರಡು ಆಂಬುಲೆನ್ಸ್‌ ಲಭ್ಯ ಇರುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು. 

ನಗರದಲ್ಲಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದೆ. ಕೋವಿಡ್‌ನಿಂದ ಸತ್ತವರ ಅಂತ್ಯ ಸಂಸ್ಕಾರಕ್ಕೆ ಸಮಸ್ಯೆ ಆಗಬಾರದು. ಈ ಕಾರಣಕ್ಕೆ ನಗರದ 7 ವಿದ್ಯುತ್ ಚಿತಾಗಾರಗಳಲ್ಲಿ ಕೋವಿಡ್‌ನಿಂದ ಸತ್ತವರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಶವ ಸಾಗಿಸುವ ವಾಹನಗಳನ್ನೂ ಹೆಚ್ಚಳ ಮಾಡಲಾಗಿದೆ ಎಂದು ಮುಖ್ಯ ಆಯುಕ್ತರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು