ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಲಸಿಕೆ: ಶೇ 73 ರಷ್ಟು ಮಂದಿ ಹಾಜರ್

Last Updated 16 ಜನವರಿ 2021, 19:25 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕೋವಿಡ್‌ ಲಸಿಕೆ ವಿತರಣಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೊದಲ ದಿನ ಗುರುತಿಸಲಾದ ಫಲಾನುಭವಿಗಳಲ್ಲಿ ಶೇ 73 ರಷ್ಟು ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಕ್ಟೋರಿಯಾ ಸೇರಿದಂತೆ 9 ಆಸ್ಪತ್ರೆಗಳಲ್ಲಿ ಲಸಿಕೆ ಅಭಿಯಾನಕ್ಕೆ ಚಾಲನೆ ದೊರೆತಿದೆ. ಈ ಆಸ್ಪತ್ರೆಗಳಲ್ಲಿ ಶನಿವಾರ 816 ಮಂದಿಗೆ ಲಸಿಕೆ ಹಾಕುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಅನಾರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರು ಗೈರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ನಿಮ್ಹಾನ್ಸ್‌ ಸೇರಿದಂತೆ 5 ಕಡೆ ಲಸಿಕೆ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಈ ಕೇಂದ್ರಗಳಿಂದ 437 ಮಂದಿಯನ್ನು ಗುರುತಿಸಲಾಗಿತ್ತು. ಅದರಲ್ಲಿ ಶೇ 62.4ರಷ್ಟು ಮಂದಿ ಹಾಜರಾಗಿದ್ದರು. ನಗರದಲ್ಲಿ ಒಟ್ಟು 637 ಮಂದಿ ಮೊದಲ ದಿನ ಲಸಿಕೆ ಪಡೆದಿಕೊಂಡಿದ್ದಾರೆ.

‘ಕೋವಿನ್ ಆ್ಯಪ್‌’ ಕಾರ್ಯನಿರ್ವಹಿಸದ ಪರಿಣಾಮ ಫಲಾನುಭವಿಗಳಿಗೆ ದೂರವಾಣಿ ಸಂದೇಶ ರವಾನೆಯಾಗಿರಲಿಲ್ಲ. ಇದರಿಂದಾಗಿ ಕೆ.ಸಿ. ಜನರಲ್ ಸೇರಿದಂತೆ ಕೆಲವೆಡೆ ಆಸ್ಪತ್ರೆ ಸಿಬ್ಬಂದಿ ದೂರವಾಣಿ ಕರೆ ಮಾಡಿ, ಲಸಿಕೆ ಪಡೆಯಲು ಬರುವಂತೆ ಸೂಚಿಸಿದರು. ಲಸಿಕೆ ಪಡೆಯುವ ಆರೋಗ್ಯ ಕಾರ್ಯಕರ್ತರ ಗುರುತಿನ ಚೀಟಿಗಳನ್ನು ಪರಿಶೀಲಿಸಿ, ದಾಖಲಾತಿ ಪುಸ್ತಕದಲ್ಲಿ ನಮೂದಿಸಿಕೊಳ್ಳಲಾಯಿತು. ವಿಕ್ಟೋರಿಯಾ ಸೇರಿದಂತೆ ಕೆಲವೆಡೆ 11 ಗಂಟೆಯ ಬಳಿಕ ಪ್ರಾರಂಭವಾದ ಕಾರಣ ನಿಗದಿಪಡಿಸಿದಷ್ಟು ಫಲಾನುಭವಿಗಳಿಗೆ ಲಸಿಕೆ ನೀಡಲು ಸಾಧ್ಯವಾಗಲಿಲ್ಲ.

ಕೇಂದ್ರಗಳಿಗೆ ಬಂದ ಫಲಾನುಭವಿಗಳ ದೇಹದ ಉಷ್ಣಾಂಶವನ್ನು ಸಿಬ್ಬಂದಿಯು ಪರಿಶೀಲಿಸಿದರು. ಸೋಂಕು ನಿವಾರಕ ದ್ರಾವಣದಿಂದ ಕೈಗಳನ್ನು ಸ್ವಚ್ಛ ಮಾಡಿಕೊಂಡ ಬಳಿಕ ಆರೋಗ್ಯ ಕಾರ್ಯಕರ್ತರು ತಮ್ಮ ಪಾಳಿಗಾಗಿ ಕೊಠಡಿಯಲ್ಲಿ ಕಾಯಬೇಕಾಗಿತ್ತು. ಕಾಯುವ ಕೊಠಡಿಯಲ್ಲಿ ಐದರಿಂದ ಆರು ಜನರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಲಸಿಕೆಯ ಹಾಕುವಿಕೆ ಪ್ರಕ್ರಿಯೆ ನಡೆದ ಬಳಿಕ ಅರ್ಧಗಂಟೆ ವೀಕ್ಷಣಾ ಕೊಠಡಿಯಲ್ಲಿ ಕುಳ್ಳಿರಿಸಿ, ಕಳುಹಿಸಲಾಯಿತು.

ಲಸಿಕೆ ಕುರಿತು ವೈದ್ಯರಿಂದ ಜಾಗೃತಿ

ಕೋವಿಡ್‌ ಲಸಿಕೆಯನ್ನು ಪಡೆದ ನಗರದ ವಿವಿಧ ಆಸ್ಪತ್ರೆಗಳ ವೈದ್ಯರು, ಲಸಿಕೆಯ ಬಗ್ಗೆ ಜಾಗೃತಿ ಮೂಡಿಸಿದರು. ‘ಭಯ, ಹಿಂಜರಿಕೆ ಇಲ್ಲದೆಯೇ ಲಸಿಕೆಯನ್ನು ಪಡೆದುಕೊಳ್ಳಬೇಕು’ ಎಂದು ಕರೆ ನೀಡಿದರು.

ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ವಿ. ರವಿ, ‘ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ನಾನು ಕೂಡ ‘ಕೋವಿಶೀಲ್ಡ್‌’ ಲಸಿಕೆ ಪಡೆದುಕೊಂಡಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ನಂಬ ಬಾರದು. ಲಸಿಕೆ ಪಡೆದಲ್ಲಿ ನಮಗೆ ಸುರಕ್ಷತೆ ದೊರೆಯಲಿದೆ’ ಎಂದರು.

ವಿಕ್ಟೋರಿಯಾ ಆಸ್ಪತ್ರೆಯ ಪ್ರಾಧ್ಯಾಪಕ ಡಾ.ಬಿ.ಎಲ್. ಶಶಿಭೂಷಣ್, ‘ಭಾರತದ ಇತಿಹಾಸದಲ್ಲಿ ಇದು ಐತಿಹಾಸಿಕ ದಿನ. ನಾನು ಲಸಿಕೆಯನ್ನು ಪಡೆದುಕೊಂಡಿದ್ದು, ಯಾವುದೇ ಸಮಸ್ಯೆ ಕಾಣಿಸಿಕೊಂಡಿಲ್ಲ. ಲಸಿಕೆ ಪಡೆದ ಬಳಿಕವೂ ಮುಖಗವಸು ಧರಿಸುವಿಕೆ, ಅಂತರ ಕಾಯ್ದುಕೊಳ್ಳುವಿಕೆ, ಕೈಗಳನ್ನು ಸೋಂಕು ನಿವಾರಕ ದ್ರಾವಣಗಳಿಂದ ಸ್ವಚ್ಛಪಡಿಸಿಕೊಳ್ಳುವಿಕೆ ಸೇರಿದಂತೆ ವಿವಿಧ ಪ್ರಕ್ರಿಯೆಗಳನ್ನು ಮುಂದುವರಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT