ಮಂಗಳವಾರ, ಜೂನ್ 22, 2021
27 °C
ಪಿಎಚ್‌ಸಿಗಳ ಎದುರು ‘ನೋ ಸ್ಟಾಕ್‌’ ಫಲಕ * ಎರಡನೇ ಡೋಸ್‌ಗಾಗಿ ಪರದಾಟ

ಬೆಂಗಳೂರು: ದಿನವಿಡೀ ನಿಂತರೂ ಸಿಗಲಿಲ್ಲ ಕೋವಿಡ್‌ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಕೋವಿಡ್‌ ಲಸಿಕೆ ಕೊರತೆ ಹೆಚ್ಚಾಗಿದೆ. ಸರ್ಕಾರಿ ಆಸ್ಪತ್ರೆಗಳ ಎದುರು, ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ದಿನವಿಡೀ ಸರದಿಯಲ್ಲಿ ನಿಂತರೂ ಲಸಿಕೆ ಸಿಗುತ್ತಿಲ್ಲ.

‘ಬೆಳಿಗ್ಗೆ 6ಗಂಟೆಗೇ ಲಸಿಕೆಗಾಗಿ ನಿಂತಿದ್ದೆ.ಕೊವ್ಯಾಕ್ಸಿನ್ ಎರಡನೇ ಡೋಸ್‌ ಇಲ್ಲ ಎಂದು ಮಧ್ಯಾಹ್ನ ಹೇಳಿದರು. ‘ನೋ ಸ್ಟಾಕ್’ ಎಂದು ಫಲಕ ಹಾಕಿದ್ದರೂ ನಾವು ವಾಪಸ್ ಮನೆಗಾದರೂ ಹೋಗುತ್ತಿದ್ದೆವು’ ಎಂದು ಲಸಿಕೆ ಹಾಕಿಸಿಕೊಳ್ಳಲು ಯಲಹಂಕ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದ ನಾಗರಾಜ್ ದೂರಿದರು.

‘ಎರಡನೇ ಡೋಸ್ ಹಾಕಲಾಗುವುದಿಲ್ಲ ಎಂದ ಮೇಲೆ ಮೊದಲ ಡೋಸ್ ಆದರೂ ಏಕೆ ಕೊಡಬೇಕಿತ್ತು. ಈಗ ಎರಡನೇ ಡೋಸ್‌ ಇಂಜೆಕ್ಷನ್‌ ಸಕಾಲದಲ್ಲಿ ತೆಗೆದುಕೊಳ್ಳದಿದ್ದರೆ ಮೊದಲನೇ ಡೋಸ್ ಕೂಡ ವ್ಯರ್ಥವಾದಂತೆ ಅಲ್ಲವೇ’ ಎಂದು ಅವರು ಪ್ರಶ್ನಿಸಿದರು. 

‘ವಸಂತನಗರದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ, ಶೇಷಾದ್ರಿಪುರದ ಪಿಎಚ್‌ಸಿ, ಕೆ.ಸಿ. ಜನರಲ್‌ ಆಸ್ಪತ್ರೆ ಎಲ್ಲ ಓಡಾಡಿದರೂ ಲಸಿಕೆ ಸಿಗಲಿಲ್ಲ. ಮಗಳಿಗೆ ಲಸಿಕೆ ಹಾಕಿಸಲೂ ಸಾಧ್ಯವಾಗಲಿಲ್ಲ. 45 ವರ್ಷ ಮೇಲ್ಪಟ್ಟವರಿಗೇ ಇವರಿಂದ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು 18 ವರ್ಷದವರಿಗೆ ಹೇಗೆ ನೀಡುತ್ತಾರೆ’ ಎಂದು ರಮೇಶ್ ಎಂಬುವರು ದೂರಿದರು.

‘ಎರಡನೇ ಡೋಸ್ ಕೊಡುವುದಕ್ಕೇ ಸರಿಯಾಗಿ ಇವರಿಂದ ಸಾಧ್ಯವಾಗುತ್ತಿಲ್ಲ.ಒಂದು ಸ್ಪಷ್ಟ ಯೋಜನೆಯೂ ಇವರ ಬಳಿ ಇಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಸರದಿಯಲ್ಲಿ ನಿಂತರೆ ನಿಂತುಕೊಳ್ಳಲಿ ನಮಗೇನು ಎನ್ನುವಂತೆ ಸಿಬ್ಬಂದಿ ಇರುತ್ತಾರೆ. ಲಸಿಕೆ ಇಲ್ಲ ಎಂಬ ಮಾಹಿತಿಯನ್ನೂ ಸರಿಯಾಗಿ ನೀಡುವುದಿಲ್ಲ. ಎಲ್ಲ ಕೆಲಸ ಬಿಟ್ಟು ಇಲ್ಲಿಗೆ ಬಂದಿರುತ್ತೇವೆ. ಆನ್‌ಲೈನ್‌ನಲ್ಲಿ ಪರೀಕ್ಷೆ ಮಾಡಿದರೂ ಸರಿಯಾಗಿ ಮಾಹಿತಿ ಇರುವುದಿಲ್ಲ. ಸರ್ಕಾರ ಸರಿಯಾಗಿ ಸಿದ್ಧತೆ ಮಾಡಿಕೊಳ್ಳದೆ ಸಾರ್ವಜನಿಕರಿಗೆ ಹೀಗೆ ಅಲೆದಾಡಿಸುವುದು ಸರಿಯಲ್ಲ’ ಎಂದೂ ಶೈಲಜಾ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.

‘ಬೆಳಿಗ್ಗೆ 6ಕ್ಕೇ ಬಂದು ನಿಂತಿದ್ದೇವೆ. ಟೋಕನ್ ಕೊಡುವ ವ್ಯವಸ್ಥೆಯನ್ನಾದರೂ ಮಾಡಿದರೆ ಅನುಕೂಲವಾಗುತ್ತದೆ. ಅವರು ಕೂಗಿದಾಗ ಬಂದು ಲಸಿಕೆ ಹಾಕಿಸಿಕೊಳ್ಳಬಹುದು. ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲಲು ಕಷ್ಟವಾಗುತ್ತದೆ’ ಎಂದು ಹಿರಿಯ ನಾಗರಿಕರೊಬ್ಬರು ಹೇಳಿದರು.

‘ಬಿಬಿಎಂಪಿಯಿಂದ ಎಷ್ಟು ಲಸಿಕೆ ಪೂರೈಕೆಯಾಗಿತ್ತೋ ಎಲ್ಲವನ್ನೂ ನೀಡಲಾಗಿದೆ. ನಾಳೆಯಿಂದ ಲಸಿಕೆ ಹಾಕಲು ಬೇಕಾದ ಸಂಗ್ರಹ ಇಲ್ಲ. ಮೊದಲು ಬಂದವರಿಗೆ ಮತ್ತು 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಿದ್ದೇವೆ. ಅದರಲ್ಲಿಯೂ ಎರಡನೇ ಡೋಸ್ ಪಡೆಯಲು ಬಂದವರಿಗೆ ಆದ್ಯತೆ ನೀಡಲಾಯಿತು’ ಎಂದು ವಸಂತನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯೊಬ್ಬರು ಹೇಳಿದರು.

‘ಮೊದಲ ಡೋಸ್‌ ಹಾಕಲು ಲಸಿಕೆ ಇಲ್ಲ’ ಎಂಬ ಫಲಕ ಹಲವು ಪ್ರಾಥಮಿಕ ಕೇಂದ್ರಗಳ ಎದುರು ಸಾಮಾನ್ಯವಾಗಿತ್ತು.


ಎರಡನೇ ಡೋಸ್‌ ಲಸಿಕೆ ಮಾತ್ರ ಹಾಕಲಾಗುತ್ತದೆ. ಮೊದಲ ಡೋಸ್‌ ಲಭ್ಯವಿಲ್ಲ ಎಂಬ ಫಲಕವನ್ನು ನಗರದ ದಾಸಪ್ಪ ಆಸ್ಪತ್ರೆ ಎದುರು ಬುಧವಾರ ಹಾಕಲಾಗಿತ್ತು. -ಪ್ರಜಾವಾಣಿ ಚಿತ್ರ
 

‘ಅವಧಿ ಮೀರಿದರೆ ಮುಂದೇನು ?’

‘ಬೆಳಿಗ್ಗೆ 4.30ಕ್ಕೇ ಸರದಿಯಲ್ಲಿ ನಿಂತಿದ್ದೇನೆ. ತಂದೆಗೆ ಎರಡನೇ ಡೋಸ್ ಕೊವ್ಯಾಕ್ಸಿನ್ ಲಸಿಕೆ ಹಾಕಿಸಬೇಕು. ಅವರು ಮೊದಲು ಡೋಸ್ ತೆಗೆದುಕೊಂಡು 50 ದಿನಗಳಾದವು. ಈಗ ಎರಡನೇ ಡೋಸ್ ಸಿಗುತ್ತಿಲ್ಲ’ ಎಂದು ಯಲಹಂಕದ ಯುವಕರೊಬ್ಬರು ಹೇಳಿದರು.

‘ಮೊದಲ ಡೋಸ್‌ನ ಅವಧಿ ಮೀರಿದರೆ ಮತ್ತೆ ಮೊದಲ ಡೋಸ್ ಹಾಕಿಸಿಕೊಳ್ಳಬೇಕಾ ಅಥವಾ ಎರಡನೇ ಡೋಸ್‌ವರೆಗೂ ಕಾಯಬೇಕಾ ಎಂಬ ಬಗ್ಗೆ ವೈದ್ಯಕೀಯ ಸಿಬ್ಬಂದಿ ಬಳಿಯೂ ಮಾಹಿತಿ ಇಲ್ಲ. ಮೊದಲ ಡೋಸ್ ವ್ಯರ್ಥವಾದರೆ ಏನು ಮಾಡುವುದು’ ಎಂದೂ ಅವರು ಪ್ರಶ್ನಿಸಿದರು.

ಲಸಿಕೆ ಅಭಿಯಾನಕ್ಕೆ ಪಕ್ಷದ ಹೆಸರು: ಆಕ್ಷೇಪ

‘ಕೋವಿಡ್‌ ಲಸಿಕೆ ವಿತರಿಸುವ ಅಭಿಯಾನಕ್ಕೆ ಬಿಜೆಪಿಯ ಬ್ಯಾನರ್‌ ಹಾಕಿ ಪ್ರಚಾರ ಪಡೆದಿರುವುದು ಸರಿಯಲ್ಲ’ ಎಂದು ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ದಕ್ಷಿಣ ಬೆಂಗಳೂರು ತಾಲ್ಲೂಕಿನ ಬೇಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು, ‘‘ಭಾರತೀಯ ಜನತಾ ಪಾರ್ಟಿ ಕೊರೊನಾ ಲಸಿಕಾ ಅಭಿಯಾನ’ ಎಂದು ಹಾಕಲಾಗಿದೆ. ಸರ್ಕಾರಿ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕ್ರಮ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ’ ಎಂದು ಬೇಗೂರಿನ ನಾಗರಾಜ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.

‘ಬ್ಯಾನರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾವಚಿತ್ರದ ಜೊತೆಗೆ, ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರವನ್ನೂ ಹಾಕಿರುವುದರ ಔಚಿತ್ಯವೇನು’ ಎಂದೂ ಅವರು ಪ್ರಶ್ನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು