ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಲಸಿಕೆಗೆ ಹಾಹಾಕಾರ: ಆರೋಗ್ಯ ಕೇಂದ್ರಗಳ ಎದುರು ಉದ್ದುದ್ದ ಸಾಲು

ಜನರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ
Last Updated 11 ಮೇ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಕೋವಿಡ್‌ ಲಸಿಕೆಗೆ ಹಾಹಾಕಾರ ಶುರುವಾಗಿದೆ. ಬೆಳಕು ಹರಿಯುವ ಮುನ್ನವೇ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳ ಎದುರು ಸರದಿಯಲ್ಲಿ ನಿಂತು ದಿನವಿಡೀ ಕಾಯುವುದು ಸಾಮಾನ್ಯವಾಗಿದೆ.

ಗಂಟೆಗಟ್ಟಲೆ ಕಾದರೂ ಲಸಿಕೆ ಸಿಗದಿದ್ದರಿಂದ ಹೈರಾಣಾಗಿದ್ದವರು ಆಸ್ಪತ್ರೆಯ ಸಿಬ್ಬಂದಿ ಹಾಗೂ ಪೊಲೀಸರೊಂದಿಗೆ ‌ವಾಗ್ವಾದ ನಡೆಸುತ್ತಿದ್ದ ದೃಶ್ಯ ಮಾಮೂಲಾಗಿದೆ.

ಲಸಿಕೆ ಸಾಕಷ್ಟು ಬಂದಿದೆ, ಕೊರತೆ ಇಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಲಸಿಕೆಗೆ ಕಾದು ಹೈರಾಣಾಗುವ ಜನರ ಕಷ್ಟಕ್ಕೆ ಮಾತ್ರ ಕೊನೆಯಿಲ್ಲ.

ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆ, ಸಿ.ವಿ.ರಾಮನ್‌ ಆಸ್ಪತ್ರೆ, ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜು, ಬಾಗಲಗುಂಟೆ, ಹೆಬ್ಬಾಳ, ಚೋಳನಾಯಕನಹಳ್ಳಿ, ಉಲ್ಲಾಳ, ವಿದ್ಯಾಪೀಠ, ಆವಲಹಳ್ಳಿ, ಜೆ.ಸಿ. ರಸ್ತೆಯ ಪಟೇಲ್‌ ಎಂ.ಕೆಂಪಯ್ಯ ಗಿರಿಯಮ್ಮ ಆಸ್ಪತ್ರೆ, ಬ್ಯಾಟರಾಯನಪುರ– ಹೀಗೆ ನಗರದ ವಿವಿಧೆಡೆ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳ ಎದುರು ಯುವಕರು, ಮಧ್ಯವಯಸ್ಕರು ಹಾಗೂ ಹಿರಿಯ ಜೀವಗಳು ಸಾಲುಗಟ್ಟಿದ್ದು ಮಂಗಳವಾರವೂ ಕಂಡುಬಂತು.

ಪಿಪಿಇ ಕಿಟ್‌ ಧರಿಸಿ ಬಂದ ಯುವತಿ: ಕೆ.ಸಿ.ಜನರಲ್‌ ಆಸ್ಪತ್ರೆ ಎದುರು ಲಸಿಕೆಗಾಗಿ 200ಕ್ಕೂ ಅಧಿಕ ಮಂದಿ ಸೇರಿದ್ದರು. ಯುವತಿಯೊಬ್ಬರು ಪಿಪಿಇ ಕಿಟ್‌ ಧರಿಸಿ ಸಾಲಿನಲ್ಲಿ ನಿಂತಿದ್ದರು. ಕೆಲವರು ಮುಖಗವಸಿನ ಜೊತೆಗೆ ಫೇಸ್‌ಶೀಲ್ಡ್‌ಗಳನ್ನು ಹಾಕಿದ್ದರು. ಕೆಲವೆಡೆ ‘ಕೋ ವಿನ್‌’ ಹಾಗೂ ‘ಆರೋಗ್ಯ ಸೇತು’ ಆ್ಯಪ್‌ಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದವರೂ ಲಸಿಕೆ ಸಿಗದೆ ಬೇಸರದಿಂದ ಮನೆಗೆ ತೆರಳಿದರು.

‘ಎರಡನೇ ಡೋಸ್ ಪಡೆಯುವವರಿಗಷ್ಟೇ ಇಂದು ಕೋವಿಶೀಲ್ಡ್‌ ಲಸಿಕೆ ನೀಡಲಾಗುತ್ತದೆ. 18 ರಿಂದ 45 ವರ್ಷದೊಳಗಿನ ಕೋವಿಡ್‌ ಮುಂಚೂಣಿ ಕಾರ್ಯಕರ್ತರು ಗುರುತಿನ ಚೀಟಿ ತೋರಿಸಿ ಲಸಿಕೆ ಪಡೆಯಬಹುದು. ಮೊದಲ ಡೋಸ್‌ಗಾಗಿ ಕೋ ವಿನ್‌ ಹಾಗೂ ಆರೋಗ್ಯ ಸೇತು ಆ್ಯಪ್‌ ಮೂಲಕ ಹೆಸರು ನೋಂದಣಿ ಮಾಡಿದವರಿಗೆ ಲಸಿಕೆ ನೀಡಲಾಗುತ್ತದೆ’ ಎಂಬ ಫಲಕವನ್ನು ಕೆ.ಸಿ.ಜನರಲ್‌ ಆಸ್ಪತ್ರೆ ಆವರಣದಲ್ಲಿ ಹಾಕಲಾಗಿತ್ತು. ಹಾಗಿದ್ದರೂ ಸರದಿಯಲ್ಲಿ ಕಾಯುವವರ ಸಂಖ್ಯೆ ಕಡಿಮೆ ಇರಲಿಲ್ಲ.

ಚೋಳನಾಯಕನಹಳ್ಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ‘ಈ ದಿನ ಕೋವಿಶೀಲ್ಡ್‌ನ ಎರಡನೇ ಡೋಸ್‌ ಮಾತ್ರ ನೀಡಲಾಗುತ್ತದೆ’ ಎಂಬ ಫಲಕ ನೇತು ಹಾಕಿದ್ದರೂ ಕೇಂದ್ರದ ಎದುರು ನೂರಾರು ಮಂದಿ ಸೇರಿದ್ದರು. ‘ಲಸಿಕೆ ದಾಸ್ತಾನು ಇಲ್ಲ. ಬಂದಾಗ ತಿಳಿಸ್ತೀವಿ’ ಎಂದು ಹೇಳಿ ವಾಪಸು ಕಳುಹಿಸಲಾಯಿತು.

ಇವತ್ತು ಲಸಿಕೆ ಹಾಕಿಸಿಕೊಳ್ಳುವಂತೆ ಮೊಬೈಲ್‌ಗೆ ಸಂದೇಶ ಬಂದಿದೆ. ಇವತ್ತೇ ಲಸಿಕೆ ಕೊಡಿ ಎಂದು ಕೆಲವರು ಪಟ್ಟು ಹಿಡಿದಿದ್ದರು. ಕೆಲ ಆರೋಗ್ಯ ಕೇಂದ್ರಗಳ ಎದುರು ‘ಲಸಿಕೆ ದಾಸ್ತಾನು ಇಲ್ಲ. ಪೂರೈಕೆಯಾಗುವವರೆಗೂ ಲಸಿಕೆ ನೀಡಲಾಗುವುದಿಲ್ಲ’ ಎಂಬ ಭಿತ್ತಿಪತ್ರಗಳನ್ನೂ ಅಂಟಿಸಲಾಗಿತ್ತು.

60–70 ವರ್ಷ ದಾಟಿದ ಕೆಲವರು ಲಸಿಕೆಗಾಗಿ 15 ದಿನಗಳಿಂದ ಅಲೆಯುತ್ತಿದ್ದಾರೆ. ಒಂದು ಆರೋಗ್ಯ ಕೇಂದ್ರದಿಂದ ಮತ್ತೊಂದಕ್ಕೆ ಎಡತಾಕುತ್ತಿದ್ದರೂ ಲಸಿಕೆ ಸಿಗುತ್ತಿಲ್ಲ ಎಂಬ ದೂರು ಸಾಮಾನ್ಯವಾಗಿದೆ.

‘ಸುಮ್ಮನೇ ಆಸ್ಪತ್ರೆಗೆ ಅಲೆಸುತ್ತಿದ್ದಾರೆ’: ‘ಆರೋಗ್ಯ ಸಚಿವರು ಅಡ್ಡಗೋಡೆ ಮೇಲೆ ದೀಪ ಇಟ್ಟಹಾಗೆ ಮಾತನಾಡುತ್ತಾರೆ. ಮುಖ್ಯಮಂತ್ರಿಯವರು ಲಸಿಕೆ ಅಭಾವವಿಲ್ಲ. ಎಲ್ಲರಿಗೂ ಹಂತ ಹಂತವಾಗಿ ಕೊಡುತ್ತೇವೆ ಎನ್ನುತ್ತಿದ್ದಾರೆ. ಲಸಿಕೆ ಕೊರತೆ ಇದೆ ಎಂಬುದನ್ನು ಒಪ್ಪಿಕೊಳ್ಳಲು ಯಾರೂ ತಯಾರಿಲ್ಲ. 15 ದಿನ ಬಿಟ್ಟು ಕೊಡ್ತೀವಿ ಅಂದ್ರೆ ಮುಗೀತು. ನಾವು ಕೆಲಸ ಕಾರ್ಯಗಳನ್ನು ಬಿಟ್ಟು ಬೆಳಿಗ್ಗೆಯಿಂದಲೇ ಇಲ್ಲಿ ನಿಂತು ಕಾಯುವುದಾದರೂ ತಪ್ಪುತ್ತದೆ’ ಎಂದು ಕೆ.ಸಿ.ಜನರಲ್‌ ಆಸ್ಪತ್ರೆ ಎದುರು ನಿಂತಿದ್ದ ವ್ಯಕ್ತಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ಹುಡುಗಾಟಿಕೆ ಮಾಡುತ್ತಿದೆಯಾ. ಇಲ್ಲಿ ಇಷ್ಟು ಜನ ಇದ್ದಾರೆ. ಕೆಲವರು ಅಂತರ ಪಾಲಿಸುತ್ತಿಲ್ಲ. ವಯಸ್ಕರು ಸಾಲಿನಲ್ಲಿ ನಿಂತಿದ್ದಾರೆ. ಅವರಿಗೆ ಸೋಂಕು ತಗುಲಿದರೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT