ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್: ರೈತರಿಗೆ ನೆರವಾದ ವಿದ್ಯಾರ್ಥಿಗಳ ಸಂಘ, ಟನ್‌ಗಟ್ಟಲೆ ಹಣ್ಣು ಮಾರಾಟ

ರೈತರಿಗೆ ನೆರವಾದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘ
Last Updated 6 ಜೂನ್ 2021, 21:52 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಬಿಕ್ಕಟ್ಟಿನಿಂದಾಗಿ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದ ಹಣ್ಣಿನ ಬೆಳೆಗಾರರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘವು ಪರ್ಯಾಯ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಮೂಲಕ ಟನ್‌ಗಟ್ಟಲೆ ಹಣ್ಣುಗಳ ಮಾರಾಟಕ್ಕೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಬೆಲೆ ಕಾಣದೆ ತೋಟದಲ್ಲೇ ಕೊಳೆಯುತ್ತಿದ್ದ ದ್ರಾಕ್ಷಿ ಹಾಗೂ ಮಾವನ್ನು ಸಂಘದ ಸಹಕಾರದೊಂದಿಗೆಬೆಳೆಗಾರರೇ ನಗರದ ನಿವಾಸಿಗಳಿಗೆ ಮಾರಾಟ ಮಾಡುತ್ತಾ ಲಾಭ ಕಾಣುತ್ತಿದ್ದಾರೆ.

‘ನಗರದ ಸೂಪರ್ ಮಾರ್ಕೆಟ್‌ಗಳು ಹಾಗೂ ಹಣ್ಣಿನ ಮಳಿಗೆಗಳಿಗೆ ತೋಟದಿಂದಲೇ ನೇರವಾಗಿ ತಲುಪುವ ಹಣ್ಣುಗಳು ಹೆಚ್ಚು ರುಚಿಯಾಗಿವೆ’ ಎನ್ನುವುದು ಸಂಘದ ಸಹಕಾರದಿಂದ ಹಣ್ಣುಗಳನ್ನು ಖರೀದಿಸುತ್ತಿರುವ ಗ್ರಾಹಕರ ಮೆಚ್ಚುಗೆಯ ಮಾತು.

‘ಬೆಂಗಳೂರಿಗೆ ಸಮೀಪದಲ್ಲೇ ಗುಣಮಟ್ಟದ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಕೋವಿಡ್‌ನಿಂದಲೇ ನಮಗೂ ಈ ವಿಚಾರ ತಿಳಿಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾ‍ಪುರ ಹಾಗೂ ಶಿಡ್ಲಘಟ್ಟ ಭಾಗಗಳಲ್ಲಿ ಗುಣಮಟ್ಟದ ದ್ರಾಕ್ಷಿ ಬೆಳೆಯುತ್ತಾರೆ. ಕೋವಿಡ್ ಮೊದಲನೇ ಅಲೆಯ ವೇಳೆ ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆಯೇ ಸಿಕ್ಕಿರಲಿಲ್ಲ’ ಎಂದುಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕೆ.ನಾರಾಯಣಗೌಡ ತಿಳಿಸಿದರು.

‘ದೇವನಹಳ್ಳಿ ಸಮೀಪದ ದ್ರಾಕ್ಷಿ ತೋಟಗಳಿಗೆ ನಾವೇ ಖುದ್ದು ಭೇಟಿ ನೀಡಿ, ಅಲ್ಲಿ ಬೆಳೆಯಲಾಗಿದ್ದ ಅತ್ಯುತ್ತಮ ಗುಣಮಟ್ಟದ ದ್ರಾಕ್ಷಿ ಸವಿದು ಬೆರಗಾದೆವು. ದ್ರಾಕ್ಷಿ ಬೆಳೆಗಾರರು ಕೆ.ಜಿ.ಗೆ ₹10ರಂತೆ ಖರೀದಿಸಿದರೆ ಸಾಕು ಎಂಬಷ್ಟು ಅಸಹಾಯಕರಾಗಿದ್ದರು. ಲಾಕ್‌ಡೌನ್‌ನಿಂದ ಮನೆಯಲ್ಲೇ ಇದ್ದ ಸಹಕಾರ ನಗರದ ವಾಸಿಗಳಿಗೂ ಇದರ ಸವಿ ಉಣಬಡಿಸಿದೆವು. ಅಲ್ಲಿಂದ ಆರಂಭವಾದ ಮಾರಾಟದ ಪ್ರಯೋಗ ಇಂದು ನಗರದಾದ್ಯಂತ ಹಲವು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ವಿಸ್ತರಣೆಯಾಗಿದೆ’ ಎಂದರು.

‘ಇಲ್ಲಿ ಬೆಳೆಯುವ ಹಣ್ಣುಗಳಲ್ಲಿ ಬಹುಪಾಲು ಬೇರೆ ರಾಜ್ಯಗಳಿಗೆ ಪೂರೈಕೆಯಾಗುತ್ತಿದ್ದ ಕಾರಣ ಬೆಂಗಳೂರಿನ ಜನರಿಗೆ ಇದರ ರುಚಿ ಸವಿಯಲು ಸಾಧ್ಯವಾಗಿರಲಿಲ್ಲ. ಸಂಘವೇ ಮುಂದೆ ನಿಂತು ಸಹಕಾರ ನಗರ ವ್ಯಾಪ್ತಿಯಲ್ಲಿರೈತರಿಗೆ ಮಾರುಕಟ್ಟೆ ಪ್ರಯೋಗ ನಡೆಸಿತು. ಮಾರಾಟಕ್ಕೆ ವಾಹನದ ವ್ಯವಸ್ಥೆಯನ್ನೂ ಮಾಡಿದೆವು. ಹಣ್ಣಿನ ಸವಿಗೆ ಮಾರುಹೋದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ನಿವಾಸಿಗಳು, ಇಂದಿಗೂ ಬೆಳೆಗಾರರಿಂದಲೇ ನೇರವಾಗಿ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ’ ಎಂದು ವಿವರಿಸಿದರು.

ಮಾವು ಕಟಾವಿನ ತರಬೇತಿ: ‘ಕೋವಿಡ್ ಎರಡನೇ ಅಲೆಯ ವೇಳೆ ಮಾವು ಬೆಳಗಾರರಿಗೂ ಸಂಘ ಮಾರುಕಟ್ಟೆ ಕಲ್ಪಿಸಿದೆ. ಗ್ರಾಹಕರಿಗೆ ಗುಣಮಟ್ಟದ ಮಾವು ತಲುಪಿಸುವ ಉದ್ದೇಶದಿಂದ ಸಂಘದ ವತಿಯಿಂದ ವೈಜ್ಞಾನಿಕವಾಗಿ ಮಾವು ಕಟಾವು ಮಾಡುವ ಹಾಗೂ ನೈಸರ್ಗಿಕವಾಗಿ ಹಣ್ಣನ್ನು ಮಾಗಿಸುವ ತರಬೇತಿಯನ್ನು ವಿಡಿಯೊಗಳ ಮೂಲಕ ನೀಡಲಾಗಿದೆ. ಮಾವಿಗೆ ಭಾರಿ ಬೇಡಿಕೆಯೂ ಸೃಷ್ಟಿಯಾಗಿದೆ’ ಎಂದುನಾರಾಯಣ ಗೌಡ ತಿಳಿಸಿದರು.

900 ಟನ್ ದ್ರಾಕ್ಷಿ ಮಾರಾಟ

‘ಸಂಘವು ಕೋವಿಡ್ ಮೊದಲ ಅಲೆ ವೇಳೆ ದ್ರಾಕ್ಷಿ ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿತು. ಬೆಂಗಳೂರಿನ ನೆರೆಯ ಜಿಲ್ಲೆಗಳ 90ಕ್ಕೂ ಹೆಚ್ಚು ದ್ರಾಕ್ಷಿ ಬೆಳೆಗಾರರು ಸಂಘದ ಸಹಕಾರದೊಂದಿಗೆ ಕಳೆದ ಲಾಕ್‌ಡೌನ್‌ ವೇಳೆ 900 ಟನ್‌ಗಳಷ್ಟು ದ್ರಾಕ್ಷಿ ಮಾರಾಟ ಮಾಡಿದ್ದಾರೆ’ ಎಂದು ಸಂಘದ ಎಂದು ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎ.ಗೋಪಾಲ್ ತಿಳಿಸಿದರು.

‘ರೈತರು ದ್ರಾಕ್ಷಿಯನ್ನು ಕೆ.ಜಿ.ಗೆ ₹55ರಿಂದ ₹80ವರೆಗೆ ಮಾರಾಟ ಮಾಡಿದರು. 250 ನಿವಾಸಿ ಸಂಘಗಳು ಬೆಳೆಗಾರರಿಂದ ನೇರವಾಗಿ ದ್ರಾಕ್ಷಿ ಖರೀದಿಸಿದ್ದವು. ಈ ವ್ಯವಸ್ಥೆಯಿಂದ ಬೆಳೆಗಾರರು ಈ ವರ್ಷವೂ ದ್ರಾಕ್ಷಿ ಮಾರಾಟ ಮಾಡುತ್ತಿದ್ದಾರೆ’ ಎಂದರು.

ವ್ಯಾಪಾರಕ್ಕೆ ‘ವಾಟ್ಸ್‌ಆ್ಯಪ್‌’ ವೇದಿಕೆ

‘ರೈತರು ಬೆಳೆದ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸಲು ಅನುಕೂಲವಾಗುವಂತೆ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಕ್ಷೇಮಾಭಿವೃದ್ಧಿ ಸಂಘಗಳ ಹಾಗೂ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳ ವಾಟ್ಸ್‌ಆ್ಯಪ್ ಗುಂಪನ್ನು ರಚಿಸಲಾಗಿದೆ. ಮಾವಿನ ತಳಿ, ದರ ಹಾಗೂ ಮಾರಾಟಕ್ಕೆ ಲಭ್ಯವಿರುವ ಹಣ್ಣಿನ ಪ್ರಮಾಣವನ್ನು ಗುಂಪಿನಲ್ಲಿ ಹಂಚಿಕೊಳ್ಳಲಾಗುತ್ತದೆ. ಬೇಡಿಕೆ ಆಧರಿಸಿ ರೈತರು ಹಣ್ಣನ್ನು ಮಾರಾಟ ಮಾಡುತ್ತಾರೆ. ಮಾವನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಇಚ್ಛಿಸುವವರು ದೂರವಾಣಿ ಸಂಖ್ಯೆ 9611567094, 9880325001 ಅಥವಾ alumniuasb83@gmail.com ಸಂಪರ್ಕಿಸಬಹುದು’ ಎಂದು ’ ಎಂದು ಸಂಘದ ಜಂಟಿ ಕಾರ್ಯದರ್ಶಿ, ಮಾವಿನ ವ್ಯಾಪಾರದ ಉಸ್ತುವಾರಿ ಎಸ್.ಚಂದ್ರಶೇಖರ್ ಮಾಹಿತಿ ನೀಡಿದರು.

* ತೋಟದಲ್ಲಿದ್ದ ಮಾವನ್ನು ವ್ಯಾಪಾರಿ ₹45 ಸಾವಿರಕ್ಕೆ ಕೇಳಿದ್ದರು. ಸಂಘದ ನೆರವಿನಿಂದ ಮಾವು ಮಾರಾಟ ಮಾಡಿ ₹1.5 ಲಕ್ಷ ಲಾಭ ಗಳಿಸಿದ್ದೇನೆ.

-ಶ್ರೀನಾಥ್, ಮಾವು ಬೆಳೆಗಾರ, ಕೈವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT