ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಸಿಸಿಬಿ ದಾಳಿ: ನಿಷೇಧಿತ ಛಾಪಾ ಕಾಗದ ಮಾರಾಟ ಜಾಲ ಪತ್ತೆ

Last Updated 24 ಜುಲೈ 2022, 5:05 IST
ಅಕ್ಷರ ಗಾತ್ರ

ಬೆಂಗಳೂರು: ನಿಷೇಧಿತ ಛಾಪಾ ಕಾಗದ ಮುದ್ರಿಸಿ, ಅದರ ಮೇಲೆ ನಕಲಿ ಸೀಲ್‌ ಹಾಕಿ ಮಾರುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

‘ಕೆಂಪೇಗೌಡ ರಸ್ತೆಯಲ್ಲಿರುವ ಕಂದಾಯ ಭವನ ಬಳಿಯ ಮಳಿಗೆಗಳಲ್ಲಿ ಗ್ರಾಹಕರ ಸೋಗಿನಲ್ಲಿ ಇತ್ತೀಚೆಗೆ ಕಾರ್ಯಾಚರಣೆ ನಡೆಸಲಾಯಿತು. ಶ್ರೀನಗರ ಎಸ್‌ಬಿಎಂ ಕಾಲೊನಿ ನಿವಾಸಿ ವಿಶ್ವನಾಥ್ (57), ಕಾರ್ತಿಕ್ (29), ವೆಂಕಟೇಶ್ (54) ಹಾಗೂ ಶಾಮರಾಜ್ (48) ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಟೈಪಿಂಗ್ ಕೆಲಸ ಹಾಗೂ ಅರ್ಜಿ ನಮೂನೆಗಳ ಮಾರಾಟಕ್ಕೆಂದು ಮಳಿಗೆ ಪಡೆದಿದ್ದ ಆರೋಪಿಗಳು, ನಿಷೇಧಿತ ಛಾಪಾ ಕಾಗದಗಳನ್ನು ಅಕ್ರಮವಾಗಿ ಮುದ್ರಿಸಿ ಮಾರಾಟ ಮಾಡುತ್ತಿದ್ದರು. ಇವರ ಬಳಿ ಕಾಗದ ಖರೀದಿ ಮಾಡುತ್ತಿದ್ದ ಗ್ರಾಹಕರು, ಹಳೇ ಆಸ್ತಿಗಳ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು’ ಎಂದು ತಿಳಿಸಿವೆ.

‘ಸರ್ಕಾರದ ಕಂದಾಯ ಇಲಾಖೆ ದಾಖಲೆಗಳನ್ನು ತಿದ್ದುಪಡಿ ಮಾಡಿಸಲು, ಸಾರ್ವಜನಿಕರ ಆಸ್ತಿ ಕಬಳಿಸಲು, ಸುಳ್ಳು ದಾವೆ ಹೂಡಲು ಹಳೇ ಛಾಪಾ ಕಾಗದಗಳು ಬಳಕೆಯಾಗುತ್ತಿದ್ದ ಮಾಹಿತಿ ಇದೆ. ಆರೋಪಿಗಳ ಬಳಿ ಕಾಗದ ಖರೀದಿ ಮಾಡಿರುವವರನ್ನು ಪತ್ತೆ ಮಾಡಲಾಗುತ್ತಿದೆ’ ಎಂದೂ ಹೇಳಿವೆ.

ಉಪನಿರ್ದೇಶಕ ಕಚೇರಿ ಸೀಲ್: ‘ಮೂರು ವರ್ಷಗಳಿಂದ ಆರೋಪಿಗಳು ಕೃತ್ಯ ಎಸಗುತ್ತಿದ್ದರು. ₹ 1.50 ಮೌಲ್ಯದ 5 ಛಾಪಾ ಕಾಗದ, ₹ 2.10 ಮೌಲ್ಯದ 5 ಹಾಗೂ ₹ 10 ಮೌಲ್ಯದ 10 ಛಾಪಾ ಕಾಗದಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ.’

‘ಛಾಪಾ ಕಾಗದಗಳ ಮೇಲೆ, ವಿಧಾನಸೌಧದ ಖಜಾನೆ ಉಪನಿರ್ದೇಶಕರ ಕಚೇರಿ ಸೀಲ್‌ ಇದೆ. ಜೊತೆಗೆ, ಛಾಪಾ ಕಾಗದ ಮಾರಾಟಗಾರರ ಹೆಸರೂ ನಮೂದಿಸಲಾಗಿದೆ. ಅಶೋಕ ಚಕ್ರ ಹಾಗೂ ಭಾರತ ಸರ್ಕಾರ ಎಂಬ ಮುದ್ರೆಯೂ ಇದೆ’ ಎಂದೂ ಸಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT