ಶುಕ್ರವಾರ, ಮೇ 20, 2022
19 °C
ನಾಲ್ವರ ಬಂಧನ

ಸೋಂಕಿತ ಪರಾರಿ ಪ್ರಕರಣ; ಕೋವಿಡ್ ನಕಲಿ ವರದಿ ಕೊಡಿಸಿದ್ದ ಉದ್ಯೋಗಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್ ನಕಲಿ ವರದಿ ನೀಡಿ ದಕ್ಷಿಣ ಆಫ್ರಿಕಾ ಪ್ರಜೆಯೊಬ್ಬರು ಪರಾರಿಯಾಗಿರುವ ಪ್ರಕರಣದ ತನಿಖೆ ಮುಂದುವರಿಸಿರುವ ಹೈಗ್ರೌಂಡ್ಸ್ ಪೊಲೀಸರು, ಸಾಫ್ಟ್‌ವೇರ್ ಕಂಪನಿ ಉದ್ಯೋಗಿಗಳು ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

‘ರಾಣೇಶ್, ರವೀಂದ್ರ, ಲ್ಯಾಬ್‌ವೊಂದರ ಸಿಬ್ಬಂದಿ ಪ್ರಶಾಂತ್, ಮನೋಜ್ ಎಂಬುವರನ್ನು ಬಂಧಿಸಲಾಗಿದೆ. ದಕ್ಷಿಣ ಆಫ್ರಿಕಾ ಪ್ರಜೆ ಪರಾರಿಯಾಗಲು ಇವರೆಲ್ಲ ಸಹಾಯ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಾಫ್ಟ್‌ವೇರ್‌ ಕಂಪನಿ ನಡೆಸುತ್ತಿರುವ ದಕ್ಷಿಣ ಆಫ್ರಿಕಾ ಪ್ರಜೆ, ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಶಾಖೆ ತೆರೆದಿದ್ದರು. ಶಾಖೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲೆಂದು ನ. 20ರಂದು ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ನಿಲ್ದಾಣದಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು. ಅವರಿಗೆ ಓಮೈಕ್ರಾನ್ ಸೋಂಕು ತಗುಲಿರುವ ಅನುಮಾನ ಇದ್ದಿದ್ದರಿಂದ ಶಾಂಗ್ರಿಲಾ ಹೋಟೆಲ್‌ನ ಕೊಠಡಿಯಲ್ಲಿ 14 ದಿನಗಳ ಪ್ರತ್ಯೇಕವಾಸದಲ್ಲಿ ಇರಿಸಲಾಗಿತ್ತು.’

‘ಹೋಟೆಲ್‌ ಸಿಬ್ಬಂದಿಗೆ ಕೋವಿಡ್ ಪರೀಕ್ಷೆಯ ನಕಲಿ ವರದಿ ತೋರಿಸಿದ್ದ ಪ್ರಜೆ, ತಮಗೆ ಸೋಂಕು ಇಲ್ಲ ಎಂದು ನಂಬಿಸಿ ನ. 27ರಂದೇ ಕೊಠಡಿಯಿಂದ ಪರಾರಿಯಾಗಿದ್ದಾರೆ. ಅವರು ಪರಾರಿಯಾಗಲು ಸಹಕರಿಸಿದ್ದ ಹೋಟೆಲ್ ವಿರುದ್ಧ ಬಿಬಿಎಂಪಿ ಆರೋಗ್ಯ ಅಧಿಕಾರಿ ಡಾ.ಎಂ.ನವೀನ್‌ಕುಮಾರ್ ದೂರು ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ಹಣ ಕೊಟ್ಟು ವರದಿ ಖರೀದಿ: ‘ಕೊಠಡಿಯಲ್ಲಿದ್ದ ಪ್ರಜೆ, ತಮ್ಮ ಕಂಪನಿ ಉದ್ಯೋಗಿಗಳಾದ ರಾಣೇಶ್ ಹಾಗೂ ರವೀಂದ್ರ ಅವರನ್ನು ಸಂಪರ್ಕಿಸಿದ್ದರು. ದಕ್ಷಿಣ ಆಫ್ರಿಕಾಗೆ ವಾಪಸು ಹೋಗಲು ಅನುಕೂಲವಾಗುವಂತೆ ‘ಕೋವಿಡ್ ಸೋಂಕು ಇಲ್ಲ ಎಂಬ’ ವರದಿ ತರಿಸಿಕೊಡುವಂತೆ ಕೇಳಿದ್ದರು. ಅದಕ್ಕೆ ಒಪ್ಪಿದ್ದ ಆರೋಪಿಗಳು, ಲ್ಯಾಬ್ ಸಿಬ್ಬಂದಿಯನ್ನು ಸಂಪರ್ಕಿಸಿ ಹಣ ಕೊಟ್ಟು ನಕಲಿ ವರದಿ ಖರೀದಿಸಿ ತಂದುಕೊಟ್ಟಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಲ್ಯಾಬ್‌ ಸಿಬ್ಬಂದಿಗಳು ಹಲವರಿಗೆ ನಕಲಿ ವರದಿ ನೀಡಿರುವ ಅನುಮಾನವಿದೆ. ಆ ಬಗ್ಗೆ ತನಿಖೆ ಮುಂದುವರಿದಿದೆ’ ಎಂದೂ ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು