ಶನಿವಾರ, ಜನವರಿ 28, 2023
16 °C

ರೀಲ್ಸ್, ಶಾರ್ಟ್ಸ್ ಮಾಡಲು ಕ್ಯಾಮೆರಾ ಕಳ್ಳತನ: ಪದವಿ ವಿದ್ಯಾರ್ಥಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಡಿಯೊ ಚಿತ್ರೀಕರಣಕ್ಕೆ ಅಗತ್ಯವಿರುವ ಕ್ಯಾಮೆರಾ ಹಾಗೂ ಇತರೆ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಪ್ರಜ್ವಲ್ (20) ಎಂಬುವವರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಪ್ರಜ್ವಲ್, ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದ. ಫ್ಲಿಪ್‌ಕಾರ್ಟ್ ಜಾಲತಾಣದ ಡೆಲಿವರಿ ಬಾಯ್ ನೀಡಿದ್ದ ದೂರು ಆಧರಿಸಿ ಪ್ರಜ್ವಲ್‌ನನ್ನು ಬಂಧಿಸಲಾಗಿದೆ. ₹ 3.68 ಲಕ್ಷ ಮೌಲ್ಯದ 2 ಕ್ಯಾಮೆರಾ, ಲೆನ್ಸ್ ಹಾಗೂ ಆ್ಯಪಲ್ ಕಂಪನಿಯ ಎರಡು ಇಯರ್ ಪಾಡ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿ ಪ್ರಜ್ವಲ್ ಖಾತೆ ತೆರೆದಿದ್ದ. ರೀಲ್ಸ್ ಹಾಗೂ ಶಾರ್ಟ್ಸ್ ವಿಡಿಯೊ ಮಾಡುವ ಹವ್ಯಾಸ ಬೆಳೆಸಿಕೊಂಡಿದ್ದ. ಆರಂಭದಲ್ಲಿ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿ, ಅಪ್‌ಲೋಡ್ ಮಾಡುತ್ತಿದ್ದ. ಆದರೆ, ವಿಡಿಯೊ ಗುಣಮಟ್ಟ ಚೆನ್ನಾಗಿಲ್ಲವೆಂದು ಹಲವರು ಕಾಮೆಂಟ್ ಮಾಡುತ್ತಿದ್ದರು. ಹೀಗಾಗಿ, ಹೊಸ ಕ್ಯಾಮೆರಾ ಖರೀದಿಸಲು ಆರೋಪಿ ಮುಂದಾಗಿದ್ದ.’

‘ಕ್ಯಾಮೆರಾ ಖರೀದಿಗೆ ಅಗತ್ಯವಿರುವ ಹಣ ಆರೋಪಿ ಬಳಿ ಇರಲಿಲ್ಲ. ಹೀಗಾಗಿ, ಕ್ಯಾಮೆರಾ ಕಳ್ಳತನ ಮಾಡಲು ಸಂಚು ರೂಪಿಸಿದ್ದ. ಮದುವೆ ನಡೆಯುತ್ತಿದ್ದ ಮಂಟಪವೊಂದಕ್ಕೆ ಸಂಬಂಧಿಕರ ಸೋಗಿನಲ್ಲಿ ಹೋಗಿದ್ದ ಆರೋಪಿ, ಅಲ್ಲಿಯ ಛಾಯಾಗ್ರಾಹಕರ ಕ್ಯಾಮೆರಾ ಕದ್ದು ಪರಾರಿಯಾಗಿದ್ದ’ ಎಂದು ಪೊಲೀಸರು ತಿಳಿಸಿದರು.

ಕ್ಯಾಮೆರಾ ಬಾಕ್ಸ್ ಕಿತ್ತುಕೊಂಡು ಪರಾರಿ: ‘ಫ್ಲಿಪ್‌ಕಾರ್ಟ್‌ ಜಾಲತಾಣದಲ್ಲಿ ಹೊಸ ಕ್ಯಾಮೆರಾವನ್ನು ಆರೋಪಿ ಕಾಯ್ದಿರಿಸಿದ್ದ. ಕ್ಯಾಮೆರಾ ನೀಡುವುದಕ್ಕಾಗಿ ಡೆಲಿವರಿ ಬಾಯ್, ಸೆ. 27ರಂದು ನಿಗದಿತ ವಿಳಾಸಕ್ಕೆ ಹೋಗಿದ್ದರು. ಅವರನ್ನು ಭೇಟಿಯಾಗಿದ್ದ ಆರೋಪಿ, ಕ್ಯಾಮೆರಾ ಬಾಕ್ಸ್ ಕಿತ್ತುಕೊಂಡು ಹಣ ನೀಡದೇ ಸ್ಥಳದಿಂದ ಪರಾರಿಯಾಗಿದ್ದ’ ಎಂದು ಪೊಲೀಸರು ಹೇಳಿದರು.

‘ಕಳ್ಳತನದ ಸಂಬಂಧ ಡೆಲಿವರಿ ಬಾಯ್ ದೂರು ನೀಡಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯ ಆಧರಿಸಿ ತನಿಖೆ ಕೈಗೊಂಡಾಗ ಆರೋಪಿ ಸಿಕ್ಕಿಬಿದ್ದ’ ಎಂದರು.

ಸಿನಿಮಾ ಚಿತ್ರೀಕರಣದ ಜಾಗದಲ್ಲೂ ಕಳ್ಳತನ: ‘ಬಸವನಗುಡಿ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಸ್ಥಳಕ್ಕೆ ಹೋಗಿದ್ದ ಆರೋಪಿ, ಚಿತ್ರೀಕರಣಕ್ಕೆ ಅಗತ್ಯವಿದ್ದ ಹಲವು ವಸ್ತುಗಳನ್ನು ಕದ್ದಿದ್ದನೆಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಹೊಸ ರೀತಿಯಲ್ಲಿ ಗುಣಮಟ್ಟದ ರೀಲ್ಸ್ ಹಾಗೂ ಶಾರ್ಟ್ಸ್ ವಿಡಿಯೊ ಮಾಡುವ ಉದ್ದೇಶಕ್ಕಾಗಿ ಕ್ಯಾಮೆರಾ ಕಳ್ಳತನ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು