ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನಾ ಕೃತ್ಯ ಎಸಗಲು ಸಂಚು ಪ್ರಕರಣ: ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಕೆ

Last Updated 3 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್ (ಐಎಸ್‌) ಉಗ್ರ ಸಂಘಟನೆ ಜೊತೆ ನಂಟು ಹೊಂದಿ ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಸಿರಾಜುದ್ದೀನ್ ಅಲಿಯಾಸ್ ರಾಜೇಶ್ ಎಂಬಾತನ ವಿರುದ್ಧ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು, ನಗರದ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

'ಅಲ್‌ ಹಿಂದ್’ ಹೆಸರಿನಲ್ಲಿ ಸಂಘಟಿತರಾಗಿದ್ದ ಶಂಕಿತರು, ಭಯೋತ್ಪಾದನಾ ಕೃತ್ಯ ಎಸಗಲು 2019ರಿಂದಲೇ ಸಂಚು ರೂಪಿಸುತ್ತಿದ್ದರು. ತಮಿಳುನಾಡಿನ ಹಿಂದೂ ಸಂಘಟನೆ ಮುಖಂಡ ಸುರೇಶ್ ಮತ್ತು ಎಎಸ್‌ಐ ವಿಲ್ಸನ್ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿದ್ದರು. ಶಂಕಿತರ ಕಾನೂನು ಬಾಹಿರ ಚಟುವಟಿಕೆಗಳ ಮಾಹಿತಿ ಬರುತ್ತಿದ್ದಂತೆ, ಕಾರ್ಯಾಚರಣೆ ನಡೆಸಿ ಹಲವರನ್ನು ಬಂಧಿಸಲಾಗಿತ್ತು’ ಎಂದು ಎನ್‌ಐಎ ಮೂಲಗಳು ಹೇಳಿವೆ.

‘ಬೆಂಗಳೂರಿನ ಸುದ್ದಗುಂಟೆಪಾಳ್ಯ ಠಾಣೆ ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆಸಲಾಗಿತ್ತು. ಮೆಹಬೂಬ್ ಪಾಷಾ ಅಲಿಯಾಸ್ ಅಬ್ದುಲ್ ಸೇರಿದಂತೆ 17 ಆರೋಪಿಗಳನ್ನು ಬಂಧಿಸಲಾಗಿತ್ತು. ಸ್ಫೋಟಕ ತಯಾರಿಕೆ ವಸ್ತುಗಳನ್ನೂ ಜಪ್ತಿ ಮಾಡಲಾಗಿತ್ತು.’

‘ದೇಶದಲ್ಲಿ ಭಯೋತ್ಪಾದನಾ ಕೃತ್ಯ ಎಸಗಲು ಹಾಗೂ ಹಿಂದೂ ಮುಖಂಡರ ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದ ಪ್ರಮುಖ ಆರೋಪಿ ಖಾಜಾ ಮೊಹಿನುದ್ದಿನ್ ಅಲಿಯಾಸ್ ಜಲಾಲ್ ಜೊತೆ ಬೆಂಗಳೂರಿನ ಮೆಹಬೂಬ್ ಪಾಷಾ ನಂಟು ಹೊಂದಿದ್ದ. ಇವರಿಬ್ಬರ ಜೊತೆ ಕೈ ಜೋಡಿಸಿದ್ದ ಸಿರಾಜುದ್ದೀನ್, ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ. ಭಯೋತ್ಪಾದನೆ ಚಟುವಟಿಕೆಗಳಿಗಾಗಿ ಯುವಕರನ್ನು ನೇಮಿಸಿಕೊಳ್ಳುತ್ತಿದ್ದ’ ಎಂದೂ ಮೂಲಗಳು ತಿಳಿಸಿವೆ.

‘ಆರೋಪಿಗಳ ವಿಚಾರಣೆಯಿಂದ ಸಿಕ್ಕ ಸುಳಿವು ಆಧರಿಸಿ ಸಿರಾಜುದ್ದೀನ್‌ನನ್ನು ಬಂಧಿಸಲಾಗಿತ್ತು. ಆತನ ವಿರುದ್ಧ ಇದೀಗ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದೂ ಎನ್‌ಐಎ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT