ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆರೆ ಒತ್ತುವರಿ ತೆರವಿಗೆ ವಿಳಂಬ ಬೇಡ’–ಜಿಲ್ಲಾಧಿಕಾರಿ ಜೆ.ಮಂಜುನಾಥ್‌

Last Updated 14 ಜೂನ್ 2021, 11:18 IST
ಅಕ್ಷರ ಗಾತ್ರ

ಬೆಂಗಳೂರು: ‘ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳ ಸರ್ವೆ ಕಾರ್ಯವನ್ನು ಶೀಘ್ರವೇ ಕೈಗೊಳ್ಳಿ. ಒತ್ತುವರಿ ಕಂಡುಬಂದರೆ ಕೂಡಲೇ ತೆರವುಗೊಳಿಸಿ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್‌, ಅಧಿಕಾರಿಗಳಿಗೆ ಸೂಚಿಸಿದರು.

ಕೆರೆಗಳ ಅಭಿವೃದ್ಧಿ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಅಧಿಕಾರಿಗಳ ಜೊತೆ ಚರ್ಚಿಸಿದರು.

‘ಎಲ್ಲಾ ಕೆರೆಗಳ ಗಡಿ ಗುರುತಿಸುವ ಕೆಲಸ ಆಗಬೇಕು. ಅವುಗಳ ಸುತ್ತ ಇರುವ ಬಫರ್‌ ವಲಯದಲ್ಲಿ ಕಟ್ಟಡ ನಿರ್ಮಾಣ ಹಾಗೂ ಇತರ ಕಾಮಗಾರಿಗಳಿಗೆ ಅನುಮತಿ ನೀಡುವಂತಿಲ್ಲ. ಈ ಬಗ್ಗೆ ಗಮನಹರಿಸಿ. ಕೆರೆಗಳಿಗೆ ನೀರು ಪೂರೈಸುವ ರಾಜಕಾಲುವೆಗಳ ಒತ್ತುವರಿಯನ್ನೂ ಕೂಡಲೇ ತೆರವುಗೊಳಿಸಿ. ಒಂದು ದಿನದೊಳಗೆ ಈ ಬಗ್ಗೆ ವೇಳಾಪಟ್ಟಿ ಸಿದ್ಧಪಡಿಸಿ’ ಎಂದು ತಾಕೀತು ಮಾಡಿದರು.

‘ಜಿಲ್ಲೆಯಲ್ಲಿ ಒಟ್ಟು 836 ಕೆರೆಗಳಿವೆ. ಈ ಪೈಕಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ 204, ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 46, ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ 421 ಕೆರೆಗಳು ಸೇರುತ್ತವೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಕ್ರಮವಾಗಿ ಐದು ಹಾಗೂ ಒಂದು ಕೆರೆ ಬರುತ್ತದೆ. ಉಳಿದ ಕೆರೆಗಳು ಯಾವ ಇಲಾಖೆಗಳ ವ್ಯಾಪ್ತಿಗೆ ಸೇರುತ್ತವೆ ಎಂಬುದನ್ನು ಪತ್ತೆಹಚ್ಚಲು ಶೀಘ್ರವೇ ಸಮೀಕ್ಷೆ ಕೈಗೊಳ್ಳಿ’ ಎಂದು ಪಂಚಾಯತ್ ರಾಜ್ ಇಲಾಖೆಯ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಗೆ ನಿರ್ದೇಶಿಸಿದರು.

‘ಬೆಂಗಳೂರು ನಗರ ಹಾಗೂ ಸುತ್ತಮುತ್ತ ಆರೋಗ್ಯಕರ ಪರಿಸರ ನಿರ್ಮಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲಾ ಕಾರ್ಯಪ್ರವೃತ್ತರಾಗಬೇಕು. ಸರ್ಕಾರದ ಮಟ್ಟದಲ್ಲಿ 15 ದಿನಗಳಿಗೊಮ್ಮೆ ಕೆರೆ ಅಭಿವೃದ್ಧಿ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಹೀಗಾಗಿ ಅನುಷ್ಠಾನ ಇಲಾಖೆಗಳು ಕ್ರಿಯಾಶೀಲರಾಗಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಗಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಅನಿತಾ ಲಕ್ಷ್ಮಿ, ಉತ್ತರ ವಿಭಾಗಾಧಿಕಾರಿ ರಂಗನಾಥ್, ದಕ್ಷಿಣ ಉಪವಿಭಾಗಾಧಿಕಾರಿ ಶಿವಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT