ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಳ ಸಾವು: ಕೊಳಚೆ ನೀರಿನದ್ದೇ ಸಿಂಹಪಾಲು

ಆರು ವರ್ಷಗಳಲ್ಲಿ 32 ಪ್ರಕರಣಗಳು ವರದಿ: ಆ್ಯಕ್ಷನ್‌ ಏಡ್‌ ಸಂಸ್ಥೆಯಿಂದ ಅಧ್ಯಯನ
Last Updated 11 ಜುಲೈ 2022, 19:22 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆಗಳನ್ನು ಸೇರುತ್ತಿರುವ ಕೊಳಚೆ ನೀರು ಮೀನಿನ ಸಂತತಿಗೆ ವಿಷವಾಗಿ ಕಾಡುತ್ತಿದೆ. ಕೆರೆಗಳಲ್ಲಿ ಮೀನುಗಳ ಸಾವಿಗೆ ಕೊಳಚೆ ನೀರಿನ ಪಾಲು ಶೇ 51ರಷ್ಟಿದೆ!

ಆ್ಯಕ್ಷನ್‌ ಏಡ್‌ ಸಂಸ್ಥೆ ನಡೆಸಿರುವ ಅಧ್ಯಯನದಿಂದ ಈ ಅಂಶ ಬಹಿರಂಗವಾಗಿದೆ. ನಗರದಲ್ಲಿ 2017ರಿಂದ ಈವರೆಗೆ 32 ಬಾರಿ ಕೆರೆಗಳಲ್ಲಿ ಮೀನುಗಳ ಮಾರಣಹೋಮ ನಡೆದಿದೆ. ಈ ಮಾರಣ ಹೋಮಕ್ಕೆ ಕಾರಣಗಳನ್ನು ಪತ್ತೆಹಚ್ಚಲು ಆ್ಯಕ್ಷನ್‌ಏಡ್ ಸಂಸ್ಥೆ ಪ್ರಯತ್ನಿಸಿದೆ.

ಮೀನುಗಳ ಮಾರಣಹೋಮದ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ ಅಧ್ಯಯನವನ್ನು ಈ ಸಂಸ್ಥೆ ನಡೆಸಿದೆ. ಆರು ವರ್ಷಗಳಲ್ಲಿ ವರದಿಯಾಗಿರುವ ಮೀನುಗಳ ಸಾಮೂಹಿಕ ಸಾವಿನಲ್ಲಿ ಶೇ 51ರಷ್ಟು ಪ್ರಕರಣಗಳು ಕೊಳಚೆ ನೀರು ಕೆರೆ ಸೇರುತ್ತಿರುವುದರಿಂದಲೇ ಆಗಿದೆ.

ವಿಷಕಾರಿ ಮತ್ತು ರಾಸಾಯನಿಕ ಮಿಶ್ರಿತ ನೀರು ಕೆರೆ ಸೇರಿದ್ದರಿಂದ ಶೇ 23ರಷ್ಟು, ಕೈಗಾರಿಕೆಗಳ ತ್ಯಾಜ್ಯ ಕೆರೆ ಸೇರು
ವುದರಿಂದ ಶೇ 12ರಷ್ಟು, ಕೃಷಿಗೆ ಬಳಸಿದ ಔಷಧ ಮತ್ತು ರಸಗೊಬ್ಬರದ ಕೆರೆ ಸೇರಿದ್ದರಿಂದಲೂ ಶೇ 2ರಷ್ಟು ಪ್ರಕರಣ
ಗಳು ಸಂಭವಿಸಿವೆ ಎಂದು ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.

ನಾಲ್ಕು ಕೆರೆಗಳಲ್ಲೇ ಹೆಚ್ಚು ಪ್ರಕರಣ

ಮೀನುಗಳ ಮಾರಣಹೋಮ ಪ್ರಕರಣಗಳು ನಾಲ್ಕು ಕೆರೆಗಳಲ್ಲೇ ಹೆಚ್ಚಾಗಿ ಸಂಭವಿಸಿವೆ. ಹಲಸೂರು ಕೆರೆ, ಮಡಿವಾಳ ಕೆರೆ, ಬೆಳ್ಳಂದೂರು ಕೆರೆ ಮತ್ತು ಕೊಮ್ಮಘಟ್ಟ ಕೆರೆಯಲ್ಲಿ ಒಂದು ಬಾರಿಗಿಂತ ಹೆಚ್ಚು ಸಲ ಮೀನುಗಳ ಸಾಮೂಹಿಕ ಸಾವಿನ ಪ್ರಕರಣಗಳು ಸಂಭವಿಸಿವೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ಹಲಸೂರು ಕೆರೆಯಲ್ಲಿ ಮೂರು ಬಾರಿ ಕೊಮ್ಮಘಟ್ಟ, ಮಡಿವಾಳ ಮತ್ತು ಬೆಳ್ಳಂದೂರು ಕೆರೆಯಲ್ಲಿ ತಲಾ ಎರಡು ಬಾರಿ ಮೀನುಗಳ ಸಾವಿನ ಪ್ರಕರಣಗಳು ವರದಿಯಾಗಿವೆ.

ಕೊಳಚೆ ನೀರು ಕೆರೆ ಸೇರುವ ಕಾರಣದಿಂದಲೇ ಹೆಚ್ಚಿನ ಅನಾಹುತಗಳು ಸಂಭವಿಸಿರುವುದನ್ನು ಈ ಅಧ್ಯಯನ ತಂಡ ಗುರುತಿಸಿದೆ.

ಕೆಎಸ್‌ಪಿಸಿಬಿ ಗಮನಕ್ಕೇ ಬಂದಿಲ್ಲ!

ಕೆರೆಗಳಲ್ಲಿ ಮೀನುಗಳ ಸಾಮೂಹಿಕ ಸಾವಿನ ಪ್ರಕರಣಗಳು ಕರ್ನಾಟಕ ಮಾಲಿನ್ಯ ನಿಯಂತ್ರಣಾ ಮಂಡಳಿಯ(ಕೆಎಸ್‌ಪಿಸಿಬಿ) ಗಮನಕ್ಕೆ ಬಂದಿಲ್ಲ!

‘ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿ ಮಾಹಿತಿ ಕೋರಿದಾಗ ಬೊಮ್ಮನಹಳ್ಳಿ ಪ್ರಾದೇಶಿಕ ಕಚೇರಿಯಿಂದ ಮಾತ್ರ ಉತ್ತರ ಬಂದಿದೆ. 2017ರಿಂದ 2022ರ ತನಕ ಮೀನುಗಳ ಸಾವಿನ ಬಗ್ಗೆ ಯಾವುದೇ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದೆ. ಆದರೆ, ವಾಸ್ತವದಲ್ಲಿ ಏಳು ಪ್ರಕರಣಗಳು ವರದಿಯಾಗಿವೆ. 2017ರಲ್ಲಿ ದೊಡ್ಡಕಲ್ಲಸಂದ್ರ ಮತ್ತು ಸುಬ್ರಹ್ಮಣ್ಯಪುರ ಕೆರೆಗಳಲ್ಲಿ ಮೀನುಗಳು ಸತ್ತಿವೆ. 2018ರಲ್ಲಿ ಪುಟ್ಟೇನಹಳ್ಳಿ ಮತ್ತು ಮಡಿವಾಳ ಕೆರೆಗಳಲ್ಲಿ, 2019ರಲ್ಲಿ ಮಡಿವಾಳ ಮತ್ತು ಹರಳೂರು ಕೆರೆ, 2022ರಲ್ಲಿ ಕೊತ್ತನೂರು ಮತ್ತು ಯಲಚೇನಹಳ್ಳಿ ಕೆರೆಗಳಲ್ಲಿ ಮೀನುಗಳು ಸತ್ತಿವೆ’ ಎಂದು ವರದಿ ಹೇಳಿದೆ.

ಶಿಫಾರಸುಗಳು

lನಗರ ಪ್ರದೇಶದ ಎಲ್ಲಾ ಕರೆಗಳ ಮೇಲ್ವಿಚಾರಣೆಯನ್ನು ಕೆಎಸ್‌ಪಿಸಿಬಿ ಮಾಡಬೇಕು.

lಕೆರೆಗಳಲ್ಲಿ ಮೀನುಗಳ ಸತ್ತರೆ ಆ ಪ್ರಕಣಗಳ ಬಗ್ಗೆ ಕೆಎಸ್‌ಪಿಸಿಬಿ ತನಿಖೆ ನಡೆಸಬೇಕು, ಸಾವಿಗೆ ಕಾರಣ ಆದವರ ವಿರುದ್ಧ ಕ್ರಮ ಜರುಗಿಸಬೇಕು.

lಮೇ ತಿಂಗಳಿನಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದು, ನೀರಿನ ಗುಣಮಟ್ಟ ಪರೀಕ್ಷೆಗೆ ಕೆಎಸ್‌ಪಿಸಿಬಿ ಮುಂದಾಗಬೇಕು.

lಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ಬಿಬಿಎಂಪಿ ಸಂಪೂರ್ಣವಾಗಿ ತಡೆಗಟ್ಟಬೇಕು.

lರಾಜಕಾಲುವೆಯಿಂದ ಕೆರೆಗಳಿಗೆ ಹರಿಯುವ ನೀರಿನಲ್ಲಿ ತ್ಯಾಜ್ಯ ಸೇರದಂತೆ ಜಾಲರಿಗಳನ್ನು ಅಳವಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT