ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತಿಬೆಲೆ: ಪಟಾಕಿ ಖರೀದಿಗೆ ಮುಗಿಬಿದ್ದ ಜನ, ಕೀ.ಮಿ ಗಟ್ಟಲೇ ವಾಹನ ದಟ್ಟಣೆ

Published 11 ನವೆಂಬರ್ 2023, 23:30 IST
Last Updated 11 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಆನೇಕಲ್‌: ಅತ್ತಿಬೆಲೆ ಪಟಾಕಿ ದುರಂತ ಹಿನ್ನೆಲೆಯಲ್ಲಿ ಈ ಬಾರಿ ಸಿಮೀತ ಮಳಿಗೆಗಳಲ್ಲಿ ಶನಿವಾರ ಪಟಾಕಿ ವ್ಯಾಪಾರ ಆರಂಭವಾಯಿತು. ಕಡಿಮೆ ಸಂಖ್ಯೆಯಲ್ಲಿ ಮಳಿಗೆಗಳನ್ನು ತೆರೆದ ಕಾರಣ ಜನ‌ಸಂದಣಿ ಕಂಡು ಬಂದಿತು. ಇದರಿಂದ ಗಡಿ ಭಾಗದ ರಸ್ತೆಗಳಲ್ಲಿ ಕಿಲೋಮೀಟರ್‌ ಗಟ್ಟಲೇ ವಾಹನ ದಟ್ಟಣೆ ಉಂಟಾಗಿತ್ತು.

ಹೈಕೋರ್ಟ್‌ ಆದೇಶದಂತೆ ಅತ್ತಿಬೆಲೆ ಹೋಬಳಿಯಲ್ಲಿ 22 ಪಟಾಕಿ ಮಳಿಗೆ ತೆರೆಯಲು ಹಾಗೂ ಪ್ರತಿ ಮಳಿಗೆಯಲ್ಲೂ 600 ಕೆ.ಜಿ ಪಟಾಕಿ ಮಾತ್ರ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ನ.11ರಿಂದ 17ವರೆಗೆ ಪಟಾಕಿ ಮಳಿಗೆ ತೆರೆಯಲು ಅನುಮತಿ ನೀಡಿದೆ.

ಪಟಾಕಿ ಮಳಿಗೆಗಳನ್ನು ತೆರೆಯುತ್ತಿದ್ದಂತೆ ಸಾವಿರಾರು ಜನರು ಖರೀದಿಗೆ ಮುಗಿಬಿದ್ದರು. ಕಳೆದ ವರ್ಷಕ್ಕಿಂತ ಈ ಬಾರಿ ಬೆಲೆ ಕೂಡ ದುಬಾರಿಯಾಗಿದ್ದರೂ ಖರೀದಿ ಭರಾಟೆ ಜೋರಾಗಿಯೇ ನಡೆಯಿತು.

ಪ್ರತಿವರ್ಷ ಅತ್ತಿಬೆಲೆ ಗಡಿಭಾಗದಲ್ಲಿ ಹಬ್ಬದ ಒಂದು ವಾರದ ಹಿಂದೆಯೇ ಪಟಾಕಿ ಮಳಿಗೆ ತೆರೆಯಲಾಗುತ್ತಿತ್ತು. ಶೇ50ರಷ್ಟು ಪಟಾಕಿ ಮಾರಾಟವಾಗುತ್ತಿತ್ತು. ರಾಜ್ಯದ ವಿವಿಧ ಭಾಗಗಳ ಜನರು ಬಿರುಸಿನ ವ್ಯಾಪಾರ ನಡೆಸಿದರು. ಅತ್ತಿಬೆಲೆ‌, ಚಂದಾಪುರ, ನೆರಳೂರು ಮತ್ತು ಹೆಬ್ಬಗೋಡಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತೆರೆದಿರುವ ಮಳಿಗೆಗಳ ಮುಂದೆ ಜನಸಾಗರ ಕಂಡು ಬಂದಿತು.

ವೀರಸಂದ್ರ, ಚಂದಾಪುರ ಮತ್ತು ಅತ್ತಿಬೆಲೆ ರಸ್ತೆಗಳಲ್ಲಿ ಕಿಲೋಮೀಟರ್ ಗಟ್ಟಲೇ ವಾಹನ ದಟ್ಟಣೆ ಉಂಟಾಗಿತ್ತು. ವಾಹನ ಸವಾರರು ಎರಡು ಮೂರು ತಾಸು ರಸ್ತೆಯಲ್ಲಿ ಉಳಿಯಬೇಕಾಯಿತು.

ಮಳಿಗೆಗಳ ಮುಂದೆ ಗ್ರಾಹಕರು ಅಡ್ಡಾದಿಡ್ಡ ವಾಹನ ನಿಲುಗಡೆ ಮಾಡಿದ್ದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟು, ಪ್ರಯಾಣಿಕರು ಪರದಾಡಿದರು.

ಟಾಸ್ಕ್‌ ಪೋರ್ಸ್‌ ನಿಗಾ

ಪಟಾಕಿ ಮಳಿಗೆಗಳಲ್ಲಿ ಬೆಂಕಿ ನಂದಿಸುವ ಪರಿಕರಗಳು ಹಾಗೂ ಮರಳನ್ನು ಕಡ್ಡಾಯವಾಗಿ ಇಡಬೇಕು. ಗ್ರಾಹಕರು ಪಟಾಕಿ ಖರೀದಿಸಲು ವಿಶಾಲವಾದ ಸ್ಥಳಾವಕಾಶ ಕಲ್ಪಿಸಿರಬೇಕು ಎಂದು ತಹಶೀಲ್ದಾರ್‌ ಶಿವಪ್ಪ ಎಚ್‌. ಲಮಾಣಿ ತಿಳಿಸಿದರು. ಸುಪ್ರೀಂಕೋರ್ಟ್‌ ಸೂಚನೆ ಪಾಲಿಸಲು ಎಲ್ಲ ಪಟಾಕಿ ಮಳಿಗೆಗಳಿಗೂ ಸೂಚಿಸಲಾಗಿದೆ. ಇವುಗಳ ಮೇಲೆ ನಿಗಾವಹಿಸಲು ನಾಲ್ಕು ಟಾಸ್ಕ್‌ ಪೋರ್ಸ್‌ ತಂಡ ನಿಯೋಜಿಸಲಾಗಿದೆ. ಈ ತಂಡ ದಿನದ 24 ಗಂಟೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸಲಿದೆ. ಪೊಲೀಸರು ಕಂದಾಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ಜಂಟಿಯಾಗಿ ನಿಗಾವಹಿಸಲಿದ್ದಾರೆ.

ಹಬ್ಬಕ್ಕೆ ಹೊರಟ ಜನ: 10 ಕಿ.ಮೀ ವಾಹನ ದಟ್ಟಣೆ

ಆನೇಕಲ್: ದೀಪಾವಳಿ ಹಬ್ಬಕ್ಕೆ ಬೆಂಗಳೂರಿನಲ್ಲಿ ವಾಸವಿದ್ದ ತಮಿಳುನಾಡಿನವರು ತಮ್ಮ ತವರಿಗೆ ಹೊರಟ ಹಿನ್ನೆಲೆಯಲ್ಲಿ ಶನಿವಾರ ತಾಲ್ಲೂಕಿನ ಚಂದಾಪುರದಲ್ಲಿ ಸಂಪೂರ್ಣ ವಾಹನ ದಟ್ಟಣೆ ಉಂಟಾಗಿತ್ತು.

ರಾಷ್ಟ್ರೀಯ ಹೆದ್ದಾರಿ–44ರಲ್ಲಿ 10ಕಿ.ಮೀ.ಗೂ ಹೆಚ್ಚು ದೂರ ವಾಹನ ದಟ್ಟಣೆ ಉಂಟಾಗಿತ್ತು. ಸಾರ್ವಜನಿಕರು ಗಂಟೆ ಗಟ್ಟಲೆ ಕಾಯುವಂತಾಗಿತ್ತು. ಶನಿವಾರ ಚಂದಾಪುರ ಸಂತೆ ದೀಪಾವಳಿ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಗಡಿಯಲ್ಲಿ ಪಟಾಕಿ ಖರೀದಿಯ ಭರಾಟೆಯ ನಡುವೆ ತಮ್ಮ ಸ್ವಗ್ರಾಮ ತಮಿಳುನಾಡಿನತ್ತ ಸಾಗಲು ಬೆಂಗಳೂರಿನಿಂದ ಸಾವಿರಾರು ಮಂದಿ ಹೊರಟ ಹಿನ್ನೆಲೆಯಲ್ಲಿ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಹರಸಾಹಸ ಪಟ್ಟರು.

ಚಂದಾಪುರ ಫ್ಲೈಓವರ್‌ ಚಂದಾಪುರ-ಅತ್ತಿಬೆಲೆ ರಸ್ತೆ ಸೇರಿದಂತೆ ಎಲ್ಲೆಲ್ಲೂ ವಾಹನಗಳು ಮತ್ತು ವಾಹನಗಳ ಹಾರ್ನ್‌ ಶಬ್ದ ಹೆಚ್ಚಾಗಿತ್ತು. ಕಿ.ಮೀ. ಸಾಗಲು ಗಂಟೆ ಗಟ್ಟಲೆ ಆಗುವಂತಹ ಸ್ಥಿತಿ ನಿರ್ಮಾಣವಾಗಿತ್ತು. ದ್ವಿಚಕ್ರ ವಾಹನಗಳು ಸಂಚರಿಸಲು ಪರದಾಡಿದವು.  ನಡುವೆ ರಸ್ತೆ ದಾಟುವುದೇ ಹರಸಾಹಸವಾಗಿತ್ತು.

ಅಂಗವಿಕಲರು ಮಹಿಳೆಯರು ಪುಟಾಣಿ ಮಕ್ಕಳು ರಸ್ತೆ ದಾಟಲಾಗದೇ ಅತ್ತಿಂದಿತ್ತ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ತಾಲ್ಲೂಕಿನ ಗಡಿ ಭಾಗ ಮತ್ತು ಜೂಜುವಾಡಿ ಹೊಸೂರುಗಳಲ್ಲಿ ಪಟಾಕಿ ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ ವಾಹನ ದಟ್ಟಣೆ ಮೀತಿ ಮೀರಿತು. ಕೆಲ ಸರ್ಕಾರಿ ಬಸ್‌ಗಳು ಚಂದಾಪುರದವರನ್ನು ಬೊಮ್ಮಸಂದ್ರದ ನಾರಾಯಣದ ಹೃದಯಾಲಯದ ಬಳಿಯೇ ಇಳಿಸುತ್ತಿದ್ದ ದೃಶ್ಯ ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT