ಶನಿವಾರ, ಜುಲೈ 24, 2021
26 °C
ಸಾರ್ವಜನಿಕರಿಗೂ ಅನುಕೂಲ * ರೈಲ್ವೆ ಇಲಾಖೆಗೂ ವರಮಾನ ನಿರೀಕ್ಷೆ

ಸ್ಥಳೀಯ ರೈಲು ಸಂಚಾರ: ಬೇಡಿಕೆ ಮತ್ತೆ ಮುನ್ನೆಲೆಗೆ

ಗುರು ಪಿ.ಎಸ್‌. Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಒಳಗೆ ಮತ್ತು ನಗರದ ಸುತ್ತ–ಮುತ್ತ ಸ್ಥಳೀಯ ರೈಲು ಸಂಚಾರಕ್ಕೆ ಈ ಸಂದರ್ಭದಲ್ಲಿ ಆದ್ಯತೆ ನೀಡಬೇಕು ಎಂಬ ಬೇಡಿಕೆ ಮತ್ತೆ ಮುನ್ನೆಲೆಗೆ ಬಂದಿದೆ. 

‘ದೂರದ ಊರುಗಳಿಗೆ ರೈಲುಗಳು ಹೆಚ್ಚು ಸಂಚರಿಸುತ್ತಿಲ್ಲ. ಪ್ರಯಾಣಿಕರ ಸಂಖ್ಯೆಯೂ ಕಡಿಮೆ ಇದೆ. ಇದರಿಂದ ರೈಲುಗಳು ಹಾಗೂ ಲಭ್ಯವಿರುವ ಮೂಲಸೌಲಭ್ಯಗಳು ಪೂರ್ಣಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಆದರೆ, ನಗರ ಮತ್ತು ನಗರದ ಸುತ್ತ–ಮುತ್ತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಸುಮಾರು 2 ಕೋಟಿ ಜನ ಬೆಂಗಳೂರು ಮತ್ತು ಸುತ್ತ–ಮುತ್ತ ಇದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ರೈಲು ಸಂಚಾರ ಸೇವೆ ನೀಡಿದರೆ ಇಲಾಖೆಗೂ ವರಮಾನ ಬರುತ್ತದೆ, ಸ್ಥಳೀಯರಿಗೂ ಅನುಕೂಲವಾಗುತ್ತದೆ’ ಎಂದು ಸಿಟಿಜನ್ಸ್‌ ಫಾರ್‌ ಸಿಟಿಜನ್ಸ್‌ ಸಂಘಟನೆಯ ಸಂಚಾಲಕ ರಾಜಕುಮಾರ್‌ ದುಗರ್ ‘ಪ್ರಜಾವಾಣಿ’ಗೆ ಹೇಳಿದರು.

‘‌₹18 ಸಾವಿರ ಕೋಟಿ ವೆಚ್ಚದ ಉಪನಗರ ರೈಲು ಯೋಜನೆಗೆ ಅಂತಿಮ ಅನುಮೋದನೆ ಸಿಗುವುದಿತ್ತು. ಆದರೆ, ಈಗ ಸರ್ಕಾರದ ಬಳಿ ಹಣವಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ಬರುವುದು ಇನ್ನೂ ಐದು ವರ್ಷವಾಗಬಹುದು. ಮೆಟ್ರೊ ಪ್ರಾರಂಭವಾದರೂ ಪ್ರಯಾಣಿಕರ ಸಂಖ್ಯೆ ಕಡಿಮೆ ಮಾಡಬೇಕಾಗುತ್ತದೆ. ಈಗ ಮೆಜೆಸ್ಟಿಕ್‌ನಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಟ್ಯಾಕ್ಸಿಗೆ ₹250ರಿಂದ ₹300 ಬೇಕು. ಆದರೆ, ಸ್ಥಳೀಯ ರೈಲು ಪ್ರಾರಂಭಿಸಿದರೆ ₹10ನಲ್ಲಿ ವಿಮಾನ ನಿಲ್ದಾಣ ತಲುಪಬಹುದು’ ಎಂದು ಅವರು ಹೇಳಿದರು.

‘ಸಂಚಾರ ದಟ್ಟಣೆ ನಿಯಂತ್ರಣವಾಗುವುದರಿಂದ ವಾಯುಮಾಲಿನ್ಯ ಪ್ರಮಾಣವೂ ಕಡಿಮೆಯಾಗುತ್ತದೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕು. ಈಗಾಗಲೇ ರೈಲ್ವೆ ರಾಜ್ಯಸಚಿವ ಸುರೇಶ್‌ ಅಂಗಡಿ, ರೈಲ್ವೆ ಮಂಡಳಿ ಅಧ್ಯಕ್ಷರು ಹಾಗೂ ನಗರದ ಎಲ್ಲ ಸಂಸದರಿಗೆ ಈ ಕುರಿತು ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

‘ಬೈಯಪ್ಪನಹಳ್ಳಿ ಕೋಚಿಂಗ್‌ ಟರ್ಮಿನಲ್‌ ಸಿದ್ಧವಾಗಿದ್ದು, ಯಾವುದೇ ಕ್ಷಣದಲ್ಲಿ ಅಲ್ಲಿಂದ ಕಾರ್ಯಾಚರಣೆ ಪ್ರಾರಂಭ ಮಾಡಬಹುದು. ಯಲಹಂಕ–ದೊಡ್ಡಬಳ್ಳಾಪುರ ದ್ವಿಪಥ ಕಾರ್ಯವೂ ಮುಕ್ತಾಯ ಹಂತದಲ್ಲಿದೆ. ಕೆ.ಆರ್. ಪುರ–ಜೋಲಾರ್‌ಪೇಟೆ ಮಾರ್ಗದಲ್ಲಿಯೂ ಸ್ಥಳೀಯ ರೈಲು ಸಂಚಾರ ಆರಂಭಿಸಲು ಅವಕಾಶವಿದೆ. ಎಲ್ಲ ರೈಲುಗಳು ಕೆಂಪೇಗೌಡ ನಿಲ್ದಾಣಕ್ಕೆ (ಮೆಜೆಸ್ಟಿಕ್‌) ಬರುವಂತೆ ಮಾಡುವ ಬದಲು, ಹೊರವಲಯದ ನಿಲ್ದಾಣಗಳಲ್ಲಿಯೇ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ’ ಎಂದು ರೈಲ್ವೆ ಹೋರಾಟಗಾರ ಸಂಜೀವ ದ್ಯಾವಣ್ಣವರ ಹೇಳಿದರು. 

ವೇಳಾಪಟ್ಟಿ ಬದಲಾಗಲಿ

‘ಸ್ಥಳೀಯ ರೈಲುಗಳ ಸಂಖ್ಯೆ ಹೆಚ್ಚಿಸಬೇಕು ಎಂಬ ಒತ್ತಡ ಜಾಸ್ತಿಯಾದಾಗ ನೈರುತ್ಯ ರೈಲ್ವೆಯು ಎರಡು ವರ್ಷಗಳಲ್ಲಿ 26 ಸ್ಥಳೀಯ ರೈಲುಗಳ ಸಂಚಾರ ಆರಂಭಿಸಿದೆ. ಆದರೆ, ನಿತ್ಯಪ್ರಯಾಣಿಸುವವರಿಗೆ ಇದರಿಂದ ಹೆಚ್ಚು ಅನುಕೂಲವಾಗುತ್ತಿಲ್ಲ. ವೇಳಾಪಟ್ಟಿ ಬದಲಿಸಬೇಕು’ ಎಂದು ನಾಗರಿಕ ರೈಲ್ವೆ ಹೋರಾಟಗಾರ ಸತಿಂದರ್‌ಪಾಲ್‌ ಚೋಪ್ರಾ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು