ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್‌, ಶಿವಸೇನಾ ನಿಷೇಧಕ್ಕೆ ಒತ್ತಾಯ

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ರಾಜಭವನ ಮುತ್ತಿಗೆಗೆ ಯತ್ನ
Last Updated 30 ಡಿಸೆಂಬರ್ 2021, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಹಾಗೂ ಶಿವಸೇನಾವನ್ನು ರಾಜ್ಯದಲ್ಲಿ ನಿಷೇಧಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಕಾರ್ಯಕರ್ತರು ನಗರದಲ್ಲಿ ಗುರುವಾರ ಭಾರಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪುರಭವನದ ಎದುರು ಸೇರಿದ್ದ ನೂರಾರು ಕಾರ್ಯಕರ್ತರು, ‘ಮಹಾರಾಷ್ಟ್ರ ಸರ್ಕಾರದ ಗುಲಾಮ ಸಂಘಟನೆ ಎಂಇಎಸ್‌ಗೆ ಧಿಕ್ಕಾರ’, ‘ಸಂವಿಧಾನ ವಿರೋಧಿ ಎಂಇಎಸ್‌ಗೆ ಧಿಕ್ಕಾರ’, ‘ಒಕ್ಕೂಟ ವ್ಯವಸ್ಥೆಯ ವಿರೋಧಿ ಶಿವಸೇನಾಗೆ ಧಿಕ್ಕಾರ’, ‘ಎಂಇಎಸ್‌ ವಿಚಾರದಲ್ಲಿ ಮೌನ ಧೋರಣೆ ತಳೆದಿರುವ ಬೆಳಗಾವಿಯ ರಾಜಕಾರಣಿಗಳಿಗೆ ಧಿಕ್ಕಾರ’, ‘ಬೆಳಗಾವಿ ನಮ್ಮದು’ ಎಂಬ ಘೋಷಣೆಗಳನ್ನು ಕೂಗಿದರು. ಮೆರವಣಿಗೆ ಸಾಗಿದ ಮಾರ್ಗದಲ್ಲಿ ಕನ್ನಡ ಧ್ವಜಗಳು ರಾರಾಜಿಸಿದವು.

ಪ್ರತಿಭಟನಾಕಾರರ ಬಂಧನ: ರ‍್ಯಾಲಿಯು ಮೈಸೂರು ಬ್ಯಾಂಕ್‌ ವೃತ್ತ ಪ್ರವೇಶಿಸುತ್ತಿದ್ದಂತೆಪ್ರತಿಭಟನಾಕಾರರನ್ನು ಪೊಲೀಸ್‌ ಸಿಬ್ಬಂದಿ ತಡೆದರು. ಈ ವೇಳೆ ಸಿಬ್ಬಂದಿ ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ತಳ್ಳಾಟ–ನೂಕಾಟವೂ ಏರ್ಪಟ್ಟಿತ್ತು. ಮುನ್ನೆಚ್ಚರಿಕೆಯ ದೃಷ್ಟಿಯಿಂದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದರು.

‘ಶಿವಸೇನಾ ಮತ್ತು ಎಂಇಎಸ್‌ ನಿಷೇಧಿಸಬೇಕೆಂಬ ಒತ್ತಾಯ ಎರಡು ದಶಕಗಳಿಂದಲೂ ಕೇಳಿ ಬರುತ್ತಿದೆ. ಈ ವಿಚಾರದಲ್ಲಿ ನಮ್ಮ ಸಂಘಟನೆಯು ಎಲ್ಲಾ ಸರ್ಕಾರಗಳ ಮೇಲೆ ಹಲವು ಬಾರಿ ಒತ್ತಡವನ್ನೂ ಹೇರಿದೆ. ಹೀಗಿದ್ದರೂ ಬೆಳಗಾವಿಯಲ್ಲಿ ನೆಲೆಸಿರುವ ಕಿಡಿಗೇಡಿಗಳನ್ನು ಓಲೈಸುವ ಸಲುವಾಗಿ ಸರ್ಕಾರಗಳು ನಮ್ಮ ಹೋರಾಟಕ್ಕೆ ಮನ್ನಣೆ ನೀಡಿರಲಿಲ್ಲ. ಹೀಗಾಗಿ ಶಿವಸೇನಾ ಹಾಗೂ ಎಂಇಎಸ್‌, ಕರ್ನಾಟಕದಲ್ಲಿ ಗಟ್ಟಿಯಾಗಿ ಬೇರೂರಲು ಸಾಧ್ಯವಾಯಿತು’ ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ನಾರಾಯಣ ಗೌಡ ಕಿಡಿಕಾರಿದರು.

‘ಎಂಇಎಸ್‌ ಹಾಗೂ ಶಿವಸೇನಾ ಸಂಘಟನೆಗಳಿಗೆ ಸೇರಿದ ಕಿಡಿಗೇಡಿಗಳು ಕನ್ನಡದ ಭಾವುಟವನ್ನು ಸುಟ್ಟು ಹಾಕಿದ್ದಾರೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ. ಬಸವಣ್ಣನವರ ಭಾವಚಿತ್ರಕ್ಕೆ ಮಸಿ ಬಳಿದಿದ್ದಾರೆ. ಮತ ಬ್ಯಾಂಕ್‌ಗಾಗಿ ಅವರನ್ನು ಓಲೈಸುವುದನ್ನು ಬಿಟ್ಟು ಈಗಲಾದರೂ ಕಠಿಣ ಕ್ರಮ ಕೈಗೊಳ್ಳ ಬೇಕು.ಎಂಇಎಸ್‌ ನಿಷೇಧದ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರದ ಮೇಲೆ ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.

ಪೊಲೀಸ್‌ ಬಿಗಿ ಬಂದೋಬಸ್ತ್‌: ಪ್ರತಿಭಟನೆಯ ವೇಳೆ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ರ‍್ಯಾಲಿ ಸಾಗುವ ಹಾದಿಯ ಪ್ರಮುಖ ಸ್ಥಳಗಳಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಕೇಂದ್ರ ವಿಭಾಗದ ಡಿಸಿಪಿ ಅನುಚೇತ್‌ ನೇತೃತ್ವದಲ್ಲಿ 2,000ಕ್ಕೂ ಅಧಿಕ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮೂರಕ್ಕೂ ಹೆಚ್ಚು ಕೆಎಸ್‌ಆರ್‌ಪಿ ತುಕಡಿಯನ್ನೂ ಭದ್ರತೆಗೆ ಹಾಕಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT