ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಂಗಿ: ರಕ್ತ ಪರೀಕ್ಷೆಗೆ ಅಧಿಕ ಶುಲ್ಕ

ಪ್ರಯೋಗಾಲಯಗಳಿಂದ ಹೆಚ್ಚುವರಿ ಹಣ ವಸೂಲಿ * ನಾಲ್ಕು ವರ್ಷಗಳಲ್ಲಿಯೇ ನಗರದಲ್ಲಿ ಅತ್ಯಧಿಕ ಪ್ರಕರಣ ಪತ್ತೆ
Published 7 ಅಕ್ಟೋಬರ್ 2023, 20:03 IST
Last Updated 7 ಅಕ್ಟೋಬರ್ 2023, 20:03 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಡೆಂಗಿ ಪ್ರಕರಣಗಳು ಒಂದೇ ಸಮನೆ ಏರುತ್ತಿರುವ ಕಾರಣ ರಕ್ತ ಪರೀಕ್ಷೆಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದಾಗಿ ಖಾಸಗಿ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳು ಡೆಂಗಿ ಪತ್ತೆಗೆ ನಡೆಸಲಾಗುವ ಪರೀಕ್ಷೆಗೆ ₹ 2 ಸಾವಿರದವರೆಗೂ ಹಣ ವಸೂಲಿ ಮಾಡುತ್ತಿವೆ.

ಡೆಂಗಿ ಪತ್ತೆಗೆ ಸಂಬಂಧಿಸಿದಂತೆ ಬಿಬಿಎಂಪಿ ವ್ಯಾಪ್ತಿಯಲ್ಲಿಯೇ 19 ಸಾವಿರಕ್ಕೂ ಅಧಿಕ ಮಂದಿಗೆ ರಕ್ತ ಪರೀಕ್ಷೆ ನಡೆಸಲಾಗಿದೆ. ಬಿಸಿಲು–ಮಳೆ ಹಾಗೂ ಹವಾಮಾನ ಬದಲಾವಣೆಯಿಂದಾಗಿ ಡೆಂಗಿ ಪ್ರಕರಣ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗಿವೆ. ಮೊದಲ ಆರು ತಿಂಗಳು ನಗರದಲ್ಲಿ ಡೆಂಗಿ ಪ್ರಕರಣಗಳು ನಿಯಂತ್ರಣದಲ್ಲಿತ್ತು. ಬಳಿಕ ಪ್ರಕರಣಗಳು ದಿಢೀರ್ ಹೆಚ್ಚಳವಾಗಿವೆ. ನಾಲ್ಕೂ ವರ್ಷಗಳಲ್ಲಿಯೇ ಅಧಿಕ ಪ್ರಕರಣ ವರದಿಯಾಗಿದೆ. 

2019ರಲ್ಲಿ ನಗರದಲ್ಲಿ 10 ಸಾವಿರಕ್ಕೂ ಅಧಿಕ ಡೆಂಗಿ ಪ್ರಕರಣಗಳು ವರದಿಯಾಗಿದ್ದವು. ರಾಜ್ಯದ ವಿವಿಧೆಡೆ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಪತ್ತೆಯಾಗಿದ್ದವು. ಪ್ರಯೋಗಾಲಯ ಹಾಗೂ ಖಾಸಗಿ ಆಸ್ಪತ್ರೆಗಳು ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಆರೋಗ್ಯ ಇಲಾಖೆಯು ಡೆಂಗಿ ಪರೀಕ್ಷೆಗೆ ₹ 250 ನಿಗದಿಪಡಿಸಿ, ಆದೇಶ ಹೊರಡಿಸಿತ್ತು. ಹೆಚ್ಚು ಶುಲ್ಕ ಪಡೆದರೆ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿತ್ತು. ಆದರೆ, ನಗರದ ಬಹುತೇಕ ಖಾಸಗಿ ಆಸ್ಪತ್ರೆ ಹಾಗೂ ಪ್ರಯೋಗಾಲಯಗಳಲ್ಲಿ ಈ ಆದೇಶವನ್ನು ಉಲ್ಲಂಘಿಸಿ, ಹೆಚ್ಚಿನ ಹಣವನ್ನು ಪಡೆಯಲಾಗುತ್ತಿದೆ ಎಂದು ಪರೀಕ್ಷೆಗೆ ಒಳಗಾದವರು ದೂರಿದ್ದಾರೆ. 

‘ಪತ್ನಿಗೆ ನಾಲ್ಕು ದಿನಗಳಿಂದ ಜ್ವರ ಇದ್ದಿದ್ದರಿಂದ ಕ್ಲಿನಿಕ್‌ ಒಂದರಲ್ಲಿ ತಪಾಸಣೆ ಮಾಡಿಸಲಾಯಿತು. ವೈದ್ಯರು ಡೆಂಗಿ ಬಗ್ಗೆ ಶಂಕೆ ವ್ಯಕ್ತಪಡಿಸಿ, ಪರೀಕ್ಷೆಗೆ ಸೂಚಿಸಿದರು. ಪ್ರಯೋಗಾಲಯದಲ್ಲಿ ಈ ಪರೀಕ್ಷೆಗೆ ₹ 1,800 ಪಡೆದರು. ಈ ವರದಿಯಿಂದ ಡೆಂಗಿ ಜ್ವರವಿಲ್ಲ ಎನ್ನುವುದು ಖಚಿತವಾಯಿತು. ವೈದ್ಯರ ಶುಲ್ಕ, ಔಷಧಗಳು ಸೇರಿ ₹ 4 ಸಾವಿರ ಖರ್ಚಾಯಿತು’ ಎಂದು ಎಚ್‌ಎಸ್‌ಆರ್ ಲೇಔಟ್‌ ನಿವಾಸಿ ಕಿರಣ್ ಕುಮಾರ್ ತಿಳಿಸಿದರು. 

ಪರೀಕ್ಷೆ ಹೆಚ್ಚಳ: ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಮೂರು ತಿಂಗಳಿಂದ ಪರೀಕ್ಷೆಗೆ ಒಳಪಡುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಬಿಬಿಎಂಪಿ ಸಹ ಪರೀಕ್ಷೆಗೆ ಆದ್ಯತೆ ನೀಡಿದೆ. ಮೊದಲ ಆರು ತಿಂಗಳು ಸಾವಿರ ಮಂದಿ ಮಾತ್ರ ರಕ್ತ ಪರೀಕ್ಷೆಗೆ ಒಳಗಾಗಿದ್ದರು. ನಂತರದ ಮೂರು ತಿಂಗಳಲ್ಲಿ ಸುಮಾರು 18 ಸಾವಿರ ಪರೀಕ್ಷೆ ಮಾಡಲಾಗಿದೆ.  

‘ಜ್ವರದ ಕಾರಣದಿಂದ ಹತ್ತಿರದ ಖಾಸಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಾಗ ಒಟ್ಟು ₹ 2,300 ಶುಲ್ಕ ಪಾವತಿಸುವಂತೆ ಆಸ್ಪತ್ರೆಯವರು ಸೂಚಿಸಿದರು. ಡೆಂಗಿ ಪರೀಕ್ಷೆಯೊಂದಕ್ಕೆ ₹ 950 ನಮೂದಿಸಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಬೇರೆಡೆ ಇನ್ನೂ ಜಾಸ್ತಿಯಿದೆ ಎಂದು ಹೇಳಿದರು. ಹೀಗಾಗಿ, ಅಷ್ಟು ಹಣ ಪಾವತಿಸಿದೆ’ ಎಂದು ಬನಶಂಕರಿಯ ನಿವಾಸಿ ಜಿ. ಗೌತಮ್ ತಿಳಿಸಿದರು.

‘ಅಧಿಕ ಹಣ: ಕಾನೂನು ಕ್ರಮ’

‘ಡೆಂಗಿ ಪತ್ತೆಯ ರಕ್ಷ ಪರೀಕ್ಷೆಗೆ ನಿಗದಿಪಡಿಸಿದ ಶುಲ್ಕಕ್ಕಿಂತ ಅಧಿಕ ಹಣ ಪಡೆದಿರುವ ಮಾಹಿತಿ ನೀಡಿದರೆ ಪ್ರಯೋಗಾಲಯದ ಮೇಲೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ  ಡಾ.ಕೆ.ವಿ. ತ್ರಿಲೋಕ್ ಚಂದ್ರ ತಿಳಿಸಿದರು. ‘ಕಳೆದ ಒಂದು ವಾರದಲ್ಲಿ 300 ಪ್ರಕರಣಗಳು ಪತ್ತೆಯಾಗಿವೆ. ಈ ಹಿಂದೆ ಪ್ರತಿ ವಾರ 500ರಿಂದ 600 ಪ್ರಕರಣಗಳು ಪತ್ತೆಯಾಗುತ್ತಿದ್ದವು. ನಿರಂತರವಾಗಿ ಸುರಿದ ಮಳೆಯಿಂದಾಗಿ ವಾತಾವರಣವು ಈಡಿಸ್ ಜಾತಿಯ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾಗಿತ್ತು. ಇದರಿಂದಾಗಿ ಈ ವರ್ಷ ದಿಢೀರ್ ಪ್ರಕರಣಗಳು ಹೆಚ್ಚಳವಾದವು. ಅಧಿಕ ಪ್ರಕರಣಗಳು ವರದಿಯಾಗುತ್ತಿದ್ದ ಸ್ಥಳಗಳನ್ನು ಗುರುತಿಸಿ ಲಾರ್ವಾ ಉತ್ಪತ್ತಿ ತಾಣಗಳ ನಾಶ ಸೇರಿ ವಿವಿಧ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರಿಂದಾಗಿ ಈ ತಿಂಗಳ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬರಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT