ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ 12 ರಸ್ತೆಗಳಲ್ಲಿ ಸಂಚಾರ ಬಲು ಕಷ್ಟ!

ಹೆಚ್ಚು ವಾಹನ ದಟ್ಟಣೆ ಇರುವ ರಸ್ತೆಗಳ ಪಟ್ಟಿ ಸಿದ್ಧ l ಸಂಚಾರ ವ್ಯವಸ್ಥೆ ಸುಧಾರಣೆಗೆ ಇಲಾಖೆಯಿಂದ ಕ್ರಮ
Last Updated 3 ಸೆಪ್ಟೆಂಬರ್ 2019, 20:20 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸಾರ್ವಜನಿಕ ಸಾರಿಗೆಗಳ ಜೊತೆಗೆ ಸ್ವಂತ ವಾಹನಗಳ ಬಳಕೆಯೂ ದಿನದಿಂದ ದಿನಕ್ಕೆಹೆಚ್ಚಾಗುತ್ತಿದ್ದು, 12 ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟದ ಪ್ರಮಾಣ ವಿಪರೀತವಾಗಿದೆ. ಇವುಗಳಲ್ಲಿ ಸಂಚರಿಸುವ ಸಾರ್ವಜನಿಕರು ನಿತ್ಯವೂ ನರಕಯಾತನೆ ಅನುಭವಿಸುತ್ತಿದ್ದಾರೆ.

ಮನೆಯಿಂದ ಕೆಲಸದ ಸ್ಥಳವನ್ನು ಹಾಗೂ ಮನೆಗೆ ಮರಳಲು, ಜನ ಹೆಚ್ಚಾಗಿ ಈ 12 ರಸ್ತೆಗಳನ್ನೇ ನೆಚ್ಚಿಕೊಳ್ಳಬೇಕಿದೆ. ಇಂಥ ರಸ್ತೆಯಲ್ಲಿ ನಸುಕಿನಿಂದ ರಾತ್ರಿಯವರೆಗೂ ವಾಹನಗಳ ದಟ್ಟಣೆ ಉಂಟಾಗುತ್ತಿದ್ದು, ಅದನ್ನು ನಿಯಂತ್ರಿಸಲು ಸಂಚಾರ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಸಾರ್ವಜನಿಕರ ಸಂಚಾರಕ್ಕೆ ಕಿರಿಕಿರಿ ಉಂಟಾಗಿರುವ ಹಾಗೂ ತಮಗೂ ಸವಾಲಾಗಿರುವ ರಸ್ತೆಗಳ ಪಟ್ಟಿಯನ್ನು ಸಂಚಾರ ಪೊಲೀಸರು ಸಿದ್ಧಪಡಿಸಿದ್ದಾರೆ. ಈ ರಸ್ತೆಗಳ ಸುಧಾರಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ.

‘ಈ ರಸ್ತೆಗಳಲ್ಲಿ ದಟ್ಟಣೆ ನಿಯಂತ್ರಣಕ್ಕೆ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ’ ಎಂದು ಸಂಚಾರ ವಿಭಾಗದ ಹಿರಿಯಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶೇಷ ತಂಡಗಳು ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಈ ರಸ್ತೆಗಳ ಪಟ್ಟಿ ಸಿದ್ಧಪಡಿಸಿವೆ. ಇಲ್ಲಿ ರಸ್ತೆ ವಿಸ್ತರಣೆ, ಸಿಗ್ನಲ್ ಅಳವಡಿಕೆ, ಪಥ ಶಿಸ್ತು, ವೃತ್ತಗಳ ಅಭಿವೃದ್ಧಿ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯವಿದೆ. ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ರಾಜ್ಯ ಸರ್ಕಾರಕ್ಕೂ ಪ್ರಸ್ತಾವಸಲ್ಲಿಸಲಿದ್ದೇವೆ’ ಎಂದು ವಿವರಿಸಿದರು.

ಬಳ್ಳಾರಿ ರಸ್ತೆಯಲ್ಲಿ ಹೆಚ್ಚು ದಟ್ಟಣೆ: ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲೇ ಅತಿ ಹೆಚ್ಚು ದಟ್ಟಣೆ ಇದೆ. ಈ ಮಾರ್ಗದ ಸುಧಾರಣೆಗೆ ಮೊದಲ ಆದ್ಯತೆ ನೀಡಬೇಕಿದೆ’ ಎಂದು ಅಧಿಕಾರಿ ಹೇಳಿದರು.

‘ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗಿನ ಮಾರ್ಗದಲ್ಲಿ (ವಿಂಡ್ಸರ್ ಮ್ಯಾನರ್ ಜಂಕ್ಷನ್ – ರಮಣ ಮಹರ್ಷಿ ರಸ್ತೆ – ಮೇಖ್ರಿ ವೃತ್ತ) ನಿತ್ಯವೂ ಲಕ್ಷಾಂತರ ವಾಹನಗಳು ಸಂಚರಿಸುತ್ತದೆ. ವಿಮಾನ ನಿಲ್ದಾಣ, ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಕಡೆಗೆ ಹೋಗುವ ವಾಹನಗಳೂ ಇದರಲ್ಲಿ ಸೇರಿವೆ. ಸಂಚಾರ ನಿಯಮ ಉಲ್ಲಂಘನೆ, ಅಡ್ಡಾದಿಡ್ಡಿ ವಾಹನ ಚಾಲನೆ, ಕಿರಿದಾದ ರಸ್ತೆ ಸೇರಿದಂತೆ ಹಲವು ಕಾರಣಗಳಿಂದ ಇಲ್ಲಿ ದಟ್ಟಣೆ ಉಂಟಾಗುತ್ತಿದೆ’ ಎಂದು ವಿವರಿಸಿದರು.

‘ಹೊರ ರಾಜ್ಯ ಹಾಗೂ ವಿದೇಶಗಳಿಂದ ವಿಮಾನದಲ್ಲಿ ಬರುವವರು, ಮೊದಲು ಬಳಸುವುದು ಇದೇ ರಸ್ತೆಯನ್ನು. ಇಲ್ಲಿನ ದಟ್ಟಣೆ ನೋಡಿ ಅವರು ದಂಗಾಗುತ್ತಾರೆ. ಇಂಥ ಸನ್ನಿವೇಶಕ್ಕೆ ಆಸ್ಪದ ನೀಡದಂತೆವಾಹನಗಳ ಓಡಾಟಕ್ಕೆ ತಕ್ಕಂತೆ ರಸ್ತೆಯನ್ನು ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ಅಗತ್ಯ ಇರುವ ಕಡೆ ಮೇಲ್ಸೇತುವೆ,ಸ್ಕೈವಾಕ್‌ಗಳನ್ನೂ ನಿರ್ಮಿಸಬೇಕಿದೆ’ ಎಂದು ತಿಳಿಸಿದರು.

ರಸ್ತೆಯೇ ಪಾರ್ಕಿಂಗ್ ತಾಣ: ‘ದಿನ ಕಳೆದಂತೆ ಈ ರಸ್ತೆಗಳು, ವಿಪರೀತ ವಾಹನ ದಟ್ಟಣೆಯಿಂದಾಗಿ ಪಾರ್ಕಿಂಗ್ ಸ್ಥಳಗಳಾಗಿ ಮಾರ್ಪಡುತ್ತಿವೆ. ಕಚೇರಿಗೆ ಹೋಗುವುದೂ ತಡವಾಗುತ್ತಿದೆ’ಎಂದು ಕಾರು ಚಾಲಕ ಅಮರ್ ಹೇಳಿದರು.

‘ನನ್ನ ಮನೆ ಇರುವುದು ಹೆಬ್ಬಾಳದಲ್ಲಿ. ಕಚೇರಿ ವಿಲ್ಸನ್ ಗಾರ್ಡನ್‌ನಲ್ಲಿ ಇದೆ. ಎರಡು ವರ್ಷಗಳ ಹಿಂದೆ ಕಚೇರಿ ಆರಂಭದ ಸಮಯಕ್ಕಿಂತ ಕೇವಲ ಅರ್ಧ ಗಂಟೆ ಮುಂಚಿತವಾಗಿ ಮನೆ ಬಿಡುತ್ತಿದ್ದೆ. ಈಗ ಎರಡು ಗಂಟೆಗೂ ಮುಂಚೆಯೇ ಮನೆ ಬಿಡಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ದಟ್ಟಣೆಯಿಂದಾಗಿ ರಸ್ತೆಯಲ್ಲೇ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಆವಾಗಲೆಲ್ಲಾ ‘ಸಾಕಪ್ಪ ಈ ರಸ್ತೆ ಸಹವಾಸ’ ಎಂದೆನಿಸುತ್ತದೆ’ ಎಂದು ಅಸಮಾಧಾನ ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT