ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಸ್ಕಾಂ ಡಿಜಿಟಲ್‌ ಮೀಟರ್‌ನಿಂದ ವಿದ್ಯುತ್‌ ಬಿಲ್‌ ಮೊತ್ತ ಹೆಚ್ಚಳ!

ಬಿಲ್‌ನಲ್ಲಿ ಶೇ 30ರಷ್ಟು ಅಧಿಕ; ನಗರದಲ್ಲಿ 10 ಲಕ್ಷ ಮೀಟರ್‌ ಅಳವಡಿಕೆ
Last Updated 15 ಫೆಬ್ರುವರಿ 2023, 7:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಿದ್ಯುತ್‌ ಹಳೆ ಮೀಟರ್‌ಗಳನ್ನು ಕೆಲವು ತಿಂಗಳ ಹಿಂದೆ ಡಿಜಿಟಲ್‌ ಮೀಟರ್‌ಗಳಿಗೆ ಬದಲಿಸಿಕೊಂಡ ಗ್ರಾಹಕರಿಗೆ ಬಿಲ್‌ ಮೊತ್ತದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಶೇ 30ರವರೆಗೂ ಬಿಲ್‌ ಮೊತ್ತ ಹೆಚ್ಚಾಗಿದೆ.

‘ನಮ್ಮ ಮನೆಯಲ್ಲಿ ಮೂರು ಜನರಿದ್ದೇವೆ. ಬೆಳಿಗ್ಗೆ ಹೊರಟರೆ ಸಂಜೆಯೇ ಬರುವುದು. ವಿದ್ಯುತ್ ಬಳಕೆ ಕಡಿಮೆ. ಡಿಜಿಟಲ್‌ ಮೀಟರ್‌ ಅಳವಡಿಸಿಕೊಳ್ಳುವ ಮೊದಲು ₹500ರಿಂದ ₹600 ಮೊತ್ತದ ಬಿಲ್‌ ಬರುತ್ತಿತ್ತು. ಆದರೆ, ಇದೀಗ ₹800ರಿಂದ ₹900 ಬರುತ್ತಿದೆ’ ಎಂದು ರಾಜಾಜಿನಗರದ ನಿವಾಸಿ ಸುರೇಶ್ ಹೇಳಿದರು.

ಹೊಸದಾಗಿ ಡಿಜಿಟಲ್‌ ಮೀಟರ್‌ಗಳನ್ನು ಅಳವಡಿಸಿಕೊಂಡಿರುವ ನಗರದ ಹಲವಾರು ಗ್ರಾಹಕರು ಇದೇ ರೀತಿಯ ಮಾತುಗಳನ್ನು ಹೇಳುತ್ತಿದ್ದಾರೆ. ಬೆಸ್ಕಾಂನ ಮೂಲಗಳ ಪ್ರಕಾರ, 70 ಸಾವಿರದಿಂದ 80 ಸಾವಿರ ದೂರುಗಳು ಆರು ತಿಂಗಳಿಂದೀಚೆಗೆ ನೋಂದಣಿಯಾಗಿವೆ.

‘ಮೀಟರ್‌ಗಳ ಪರಿವರ್ತನೆ ಪ್ರಕ್ರಿಯೆ ಆರಂಭವಾದ ನಂತರದ ದಿನಗಳಲ್ಲಿ ದೂರುಗಳ ಸಂಖ್ಯೆ ಸತತವಾಗಿ ಹೆಚ್ಚಾಗುತ್ತಿವೆ. ಮೀಟರ್‌ ಬದಲಿಸಿರುವವರಲ್ಲಿ ಶೇ 10ರಷ್ಟು ಗ್ರಾಹಕರು ದೂರು ನೀಡಿದ್ದಾರೆ’ ಎಂದರು.

ಬೆಸ್ಕಾಂ ನಗರದಲ್ಲಿ ಈವರೆಗೆ ಬಹುತೇಕ 10 ಲಕ್ಷ ಎಲೆಕ್ಟ್ರೋಮೆಕ್ಯಾನಿಕಲ್‌ ಮೀಟರ್‌ಗಳನ್ನು ಡಿಜಿಟಲ್‌
ಎಲೆಕ್ಟ್ರೋಸ್ಟ್ಯಾಟಿಕ್‌ ಮೀಟರ್‌ಗಳಿಗೆ ಬದಲಿಸಿದೆ. ಇನ್ನೂ 7 ಲಕ್ಷ ಮೀಟರ್‌ಗಳನ್ನು ಬದಲಿಸುವ ಪ್ರಕ್ರಿಯೆ ನಡೆಯುತ್ತದೆ.

‘ಡಿಜಿಟಲ್‌ ಮೀಟರ್‌ಗಳು ನಿಖರವಾದ ಮಾಪನವನ್ನು ನೀಡುತ್ತವೆ. ಕೆಲವು ಗ್ರಾಹಕರ ವಿದ್ಯುತ್‌ ಬಿಲ್‌ ಮೊತ್ತ ಹೆಚ್ಚಾಗಿರಬಹುದು. ಈ ಹಿಂದೆ ಮಾಪನವಾಗದ ಒಂದು ನಿಮಿಷದ ಬಳಕೆಯನ್ನೂ ಡಿಜಿಟಲ್‌ ಮೀಟರ್‌ಗಳು ದಾಖಲಿಸುತ್ತವೆ. ಹೀಗಾಗಿ, ಶೇ 5ರಿಂದ 10ರಷ್ಟು ಮೊತ್ತ ಹೆಚ್ಚಾಗಿರಬಹುದು’ ಎಂದು ಬೆಸ್ಕಾಂ ಅಧಿಕಾರಿಯೊಬ್ಬರು ತಿಳಿಸಿದರು.

‘ಡಿಜಿಟಲ್‌ ಮೀಟರ್‌ 3 ಕೆ.ಡಬ್ಲ್ಯೂ (ಕಿಲೊ ವಾಟ್‌) ಸಾಮರ್ಥ್ಯದಲ್ಲಿರುತ್ತದೆ. ಈ ಹಿಂದೆ ಗ್ರಾಹಕರು 1 ಕೆ.ಡಬ್ಲ್ಯೂ ಸಾಮರ್ಥ್ಯಕ್ಕೆ ಅನುಮತಿ ಪಡೆದು, ಅದನ್ನು ಬಳಸುವ ಅವಕಾಶ ಹೊಂದಿದ್ದರು. ಹಿಂದಿನ ವರ್ಷಗಳಲ್ಲಿ ಬಳಕೆ ಪ್ರಮಾಣ ಹೆಚ್ಚಾಗುತ್ತಿತ್ತು. ಆದರೂ ಅಧಿಕ ಲೋಡ್‌ ಬಳಕೆಯ ಪ್ರಮಾಣವನ್ನು ಆಗಿನ ಮೀಟರ್‌ಗಳು ದಾಖಲಿಸುತ್ತಿರಲಿಲ್ಲ. ಉದಾಹರಣೆಗೆ, 1 ಕೆ.ಡಬ್ಲ್ಯೂಗೆ ಅನುಮತಿ ಪಡೆದವರು 2.5 ಕೆ.ಡಬ್ಲ್ಯೂ ಉಪಯೋಗಿಸುತ್ತಿದ್ದರು. ಇದೀಗ ಲೋಡ್‌ ಬಳಕೆ ನಿಖರವಾಗಿ ದಾಖಲಾಗುತ್ತಿದೆ. ಹೀಗಾಗಿ ಬಿಲ್‌ ಮೊತ್ತ ಕನಿಷ್ಠ ₹250ರಷ್ಟು ಹೆಚ್ಚಾಗುತ್ತಿದೆ’ ಎಂದು ಮತ್ತೊಬ್ಬ ಅಧಿಕಾರಿ ಸ್ಪಷ್ಟನೆ ನೀಡಿದರು.

‘ಯಾವುದೇ ಮೀಟರ್‌ಗಳನ್ನು ತಪ್ಪು ಮಾಪ‍ನ ಮಾಡುತ್ತಿಲ್ಲ. ಹೆಚ್ಚಿನ ಮೊತ್ತ ಬರುತ್ತಿದ್ದರೆ ಗ್ರಾಹಕರು ದೂರು ನೀಡಬಹುದು. ಸಿಬ್ಬಂದಿ ಸ್ಥಳಕ್ಕೆ ಬಂದು ಮೀಟರ್‌ ಪರಿಶೀಲಿಸುತ್ತಾರೆ. ಈ ಮೀಟರ್‌ಗಳು ಹೇಗೆ ನಿಖರವಾಗಿ ಮಾಪನ ಮಾಡುತ್ತವೆ ಎಂಬುದನ್ನು ಗ್ರಾಹಕರಿಗೆ ತೋರಿಸಲಾಗುತ್ತದೆ’ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT