ಬುಧವಾರ, ಮೇ 18, 2022
27 °C
ಆನ್‌ಲೈನ್ ಮೂಲಕವೇ ನೋಂದಣಿ ಪ್ರಕ್ರಿಯೆ ಆರಂಭಿಸಲು ಸಾರಿಗೆ ಇಲಾಖೆ ಸಜ್ಜು

ವಾಹನ ಖರೀದಿಸಿದ ಗಂಟೆಯಲ್ಲೇ ನೋಂದಣಿ ಸಂಖ್ಯೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸ ವಾಹನಗಳ ನೋಂದಣಿಗೆ ಇನ್ನು ವಾರಗಟ್ಟಲೆ ಕಾಯಬೇಕಿಲ್ಲ. ಖರೀದಿಸಿದ ಒಂದೆರಡು ಗಂಟೆಗಳಲ್ಲೇ ತಾತ್ಕಾಲಿಕ ನೋಂದಣಿ ಸಂಖ್ಯೆ ದೊರೆಯುವ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಜಾರಿಗೊಳಿಸುತ್ತಿದ್ದು, ಮುಂದಿನ ವಾರದಿಂದಲೇ ಈ ವ್ಯವಸ್ಥೆ ಅನುಷ್ಠಾನಕ್ಕೆ ಬರಲಿದೆ.

ಹೊಸ ವಾಹನ ಖರೀದಿಸಿದರೂ ನೋಂದಣಿಗಾಗಿ ವಾರಗಟ್ಟಲೆ ಕಾಯಬೇಕಿತ್ತು. ವಾಹನ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳು, ವಾಹನ ಖರೀದಿಸುವವರ ಮಾಹಿತಿಯೊಂದಿಗೆ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಗೇ ಖುದ್ದು ಹೋಗಿ ನೋಂದಣಿ ಪ್ರಕ್ರಿಯೆ ಮಾಡಿಸಬೇಕಿತ್ತು.

ಕಚೇರಿ ಅಲೆದಾಟ ಮತ್ತು ಕಾಗದ ಪತ್ರ ವ್ಯವಹಾರದ ಜೊತೆಗೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸುಧಾರಣೆ ಕ್ರಮಗಳನ್ನು ಸಾರಿಗೆ ಇಲಾಖೆ ಕೈಗೊಂಡಿದೆ. ಎಲ್ಲವೂ ಆನ್‌ಲೈನ್ ವ್ಯವಸ್ಥೆಯಾಗಿದ್ದು, ಕುಳಿತಲ್ಲೇ ವಾಹನ ನೋಂದಣಿ ಮಾಡಿಸಬಹುದಾಗಿದೆ.

ಶೋರೂಂಗೆ ಬರುವ ವಾಹನಗಳಿಗೆ ಸಂಬಂಧಿಸಿದ ಮಾಹಿತಿ ‘ವಾಹನ್’ ಪೋರ್ಟಲ್‌ನಲ್ಲಿ ಲಭ್ಯವಿರುತ್ತದೆ. ಅದನ್ನು ಲಿಂಕ್ ಮಾಡಿಕೊಂಡರೆ ರಾಜ್ಯ ಸರ್ಕಾರಕ್ಕೆ ಬರಬೇಕಿರುವ ತೆರಿಗೆಯ ವಿವರ ಸಿಗುತ್ತದೆ. ವಾಹನ ಖರೀದಿಸುವವರ ಪಿನ್‌ಕೋಡ್ ಸಹಿತ ವಿಳಾಸ ದಾಖಲಿಸಿ ಆನ್‌ಲೈನ್‌ನಲ್ಲೇ ತೆರಿಗೆ ಪಾವತಿ ಮಾಡಿದ ಕೂಡಲೇ ಆ ಮಾಹಿತಿ ಸಂಬಂಧಿಸಿದ ಪ್ರಾದೇಶಿಕ ತೆರಿಗೆ ಕಚೇರಿಗೆ ರವಾನೆಯಾಗುತ್ತದೆ.

‘ಎಲ್ಲ ದಾಖಲೆಗಳು ಆನ್‌ಲೈನ್‌ನಲ್ಲೇ ಇರುವುದರಿಂದ ಕೂಡಲೇ ಅಧಿಕಾರಿಗಳು ಅನುಮೋದನೆ ನೀಡುತ್ತಾರೆ. ಕೆಲವೇ ಗಂಟೆಗಳಲ್ಲಿ ತಾತ್ಕಾಲಿಕ ನೋಂದಣಿ ಸಂಖ್ಯೆ ಲಭ್ಯವಾಗುತ್ತದೆ. ಅದನ್ನು ಶೋರೂಂಗಳಲ್ಲೇ ಮುದ್ರಿಸಿ ವಾಹನವನ್ನು ಅಂದೇ ಗ್ರಾಹಕರಿಗೆ ನೀಡಲು ಸಾಧ್ಯವಾಗುತ್ತದೆ’ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ‘ಪ್ರಜಾವಾಣಿ’ಗೆ ವಿವರಿಸಿದರು.

‘ಬಳಿಕ ಒಂದೆರಡು ದಿನಗಳಲ್ಲಿ ಶಾಶ್ವತ ನೋಂದಣಿ ಸಂಖ್ಯೆ ಸಹಿತ ಡಿಜಿಟಲ್ ಆರ್.ಸಿ(ರಿಜಿಸ್ಟ್ರೇಷನ್ ಸರ್ಟಿಫಿಕೇಟ್‌) ವಾಹನದ ಮಾಲೀಕರ ಮೊಬೈಲ್ ನಂಬರ್ ಮತ್ತು ಇ–ಮೇಲ್ ಐ.ಡಿಗೆ ರವಾನೆಯಾಗುತ್ತದೆ’ ಎಂದು ಹೇಳಿದರು.

‘ಪ್ರತಿವರ್ಷ ಸರಾಸರಿ 23 ಲಕ್ಷ ಹೊಸ ವಾಹನಗಳ ನೋಂದಣಿಯಾಗುತ್ತಿದೆ. ‌ಫ್ಯಾನ್ಸಿ ನಂಬರ್ ಬೇಕಿದ್ದರೂ ಆನ್‌ಲೈನ್‌ನಲ್ಲೇ ಪರಿಶೀಲಿಸಬಹುದು. ಲಭ್ಯ ಇರುವ ನಂಬರ್‌ಗಳಿಗೆ ನಿಗದಿತ ಶುಲ್ಕವನ್ನು ಆನ್‌ಲೈನ್‌ನಲ್ಲೇ ಪಾವತಿಸಬೇಕಾಗುತ್ತದೆ. ವಾಹನ ಖರೀದಿಸಿದವರು ಮಧ್ಯವರ್ತಿಗಳನ್ನಾಗಲಿ, ಸಾರಿಗೆ ಇಲಾಖೆಯ ಅಧಿಕಾರಿಗಳನ್ನಾಗಲೀ ಭೇಟಿ ಮಾಡುವ ಅಗತ್ಯವೇ ಬರುವುದಿಲ್ಲ’ ಎಂದು ಅವರು ತಿಳಿಸಿದರು.

‘ಇದರಿಂದ ಭ್ರಷ್ಟಾಚಾರಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ. ಕಾಗದ ಪತ್ರಗಳ ವ್ಯವಹಾರವೇ ಇರುವುದಿಲ್ಲ. ಅನಗತ್ಯವಾಗಿ ವಿಳಂಬ ಆಗುವುದೂ ತಪ್ಪಲಿದೆ. ಜನ ಕುಳಿತಲ್ಲೇ ವಾಹನ ನೋಂದಣಿ ಮಾಡಿಕೊಳ್ಳಬಹುದು’ ಎಂದು ಹೇಳಿದರು.

‘ಎಲ್ಲ ರೀತಿಯ ಸಿದ್ಧತೆಗಳೂ ಪೂರ್ಣಗೊಂಡಿದ್ದು, ಎರಡು– ಮೂರು ದಿನಗಳಲ್ಲಿ ಈ ಹೊಸ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಲಾಗುವುದು. ವಾಹನಗಳ ನೋಂದಣಿ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲಿ ವಾಹನಗಳ ವಿತರಕರಿಗೇ ವಹಿಸುವ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ’ ಎಂದೂ ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದರು.

ಮನೆ ಬಾಗಿಲಿಗೇ ಡಿ.ಎಲ್, ಆರ್‌.ಸಿ: ‘ಚಾಲನಾ ಪರವಾನಗಿ (ಡಿ.ಎಲ್‌) ಮತ್ತು ಆರ್.ಸಿ ಕಾರ್ಡ್‌ಗಳನ್ನು ಮನೆ–ಮನೆಗೇ ತಲುಪಿಸುವ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ’ ರಾಜೇಂದರ್‌ ಕುಮಾರ್ ಕಟಾರಿಯಾ ತಿಳಿಸಿದರು.

‘ನೆಲಮಂಗಲದ ಬಳಿ ಕೇಂದ್ರೀಕೃತ ಪ್ರೊಸೆಸಿಂಗ್ ಕೇಂದ್ರ ತೆರೆಯಲಾಗುತ್ತಿದೆ. ಚಾಲನಾ ಪರವಾನಗಿ ಪಡೆಯಲು ಈಗಾಗಲೇ ಆನ್‌ಲೈನ್ ವ್ಯವಸ್ಥೆ ಜಾರಿಯಲ್ಲಿದೆ. ಆರ್‌.ಸಿ ಪಡೆಯುವ ವ್ಯವಸ್ಥೆಯೂ ಆನ್‌ಲೈನ್ ಆಗಲಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಆನ್‌ಲೈನ್‌ನಲ್ಲಿ ಅನುಮೋದನೆ ನೀಡಿದ ಕೂಡಲೇ ಮಾಹಿತಿ ಪ್ರೊಸೆಸಿಂಗ್ ಕೇಂದ್ರಕ್ಕೆ ರವಾನೆಯಾಗಲಿದೆ. ಅಲ್ಲಿ ಮುದ್ರಿತವಾಗುವ ಆರ್.ಸಿ ಮತ್ತು ಡಿ.ಎಲ್‌ಗಳನ್ನು ಪಾಸ್‌ಪೋರ್ಟ್‌ ಮಾದರಿಯಲ್ಲಿ ಅಂಚೆ ಮೂಲಕ ಮನೆ–ಮನೆಗೆ ತಲುಪಿಸಲಾಗುವುದು. ಅಂಚೆ ಇಲಾಖೆ ಜತೆಯೂ ಒಪ್ಪಂದ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.‌

‘ಚಾಲನಾ ಪರವಾನಗಿ ನವೀಕರಣ ಅಥವಾ ನಕಲು ಪರವಾನಗಿ ಪಡೆಯಲು ಕೂಡ ಅನ್‌ಲೈನ್ ವ್ಯವಸ್ಥೆಯೇ ಜಾರಿಯಾಗುತ್ತಿದೆ. ಯಾರೊಬ್ಬರೂ ಸಾರಿಗೆ ಇಲಾಖೆ ಕಚೇರಿಗೆ ಹೋಗಿ ಅಲೆದಾಡಬಾರದು ಎಂಬುದು ನಮ್ಮ ಉದ್ದೇಶ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು