ಗುರುವಾರ , ಅಕ್ಟೋಬರ್ 22, 2020
21 °C
‘ಅಖಂಡ’ಗೆ ಸಿದ್ದರಾಮಯ್ಯ ಅಭಯ

ಡಿ.ಜೆ ಹಳ್ಳಿ ಗಲಭೆ: ಸಂಪತ್‌ರಾಜ್‌ಗೆ ಡಿಕೆಶಿ ರಕ್ಷಣೆ?

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿ.ಜೆ. ಹಳ್ಳಿಯಲ್ಲಿ ಆ. 11ರ ರಾತ್ರಿ ನಡೆದ ಗಲಭೆ ಹಾಗೂ ಪುಲಿಕೇಶಿನಗರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ನಡೆದ ದಾಳಿ ಪ್ರಕರಣಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಡುವಿನ ಭಿನ್ನ ನಿಲುವಿನಿಂದಾಗಿ ಪಕ್ಷದ ಮುಖಂಡರು, ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ.

ಪ್ರಕರಣದಲ್ಲಿ ಕಾಂಗ್ರೆಸ್‌ ಮುಖಂಡ ಸಂಪತ್‌ರಾಜ್‌ ಕೈವಾಡವಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಆರೋಪಿಸಿದ್ದಾರೆ. ಆದರೆ, ಸಂಪತ್‌ರಾಜ್‌ ಅವರನ್ನು ಡಿ.ಕೆ. ಶಿವಕುಮಾರ್‌ ರಕ್ಷಿಸುತ್ತಿದ್ದಾರೆ. ಇದರಿಂದ ಪ್ರಕರಣದ ತನಿಖೆಗೆ ಹಿನ್ನಡೆಯಾಗಿದೆ ಎಂದು ಆಪಾದಿಸುವ ಅಖಂಡ ಆಪ್ತರು, ನಾಯಕರೇ ತಮ್ಮ ಶಾಸಕರ ಬೆನ್ನಿಗೆ ನಿಲ್ಲದಿರುವುದಕ್ಕೆ ಪಕ್ಷದ ವಲಯದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಅಖಂಡ ಅವರ ಬೆನ್ನಿಗೆ ನಿಂತಿರುವ ಸಿದ್ದರಾಮಯ್ಯ, ಗಲಭೆಗೆ ಯಾರೇ ಕಾರಣರಾಗಿದ್ದರೂ ವಿಚಾರಣೆಗೆ ಒಳಪಡಿಸುವಂತೆ ಆಗ್ರಹಿಸಿದ್ದಾರೆ. ‘ಇಡೀ ಪ್ರಕರಣ ಇಬ್ಬರು ನಾಯಕರ ಮಧ್ಯೆ ಪ್ರತಿಷ್ಠೆಯ ವಿಷಯವಾಗಿ ಬದಲಾಗಿದ್ದು, ಒಬ್ಬರು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರೆ, ಇನ್ನೊಬ್ಬರು ರಕ್ಷಣೆಗೆ ನಿಂತಿರುವುದು ಚರ್ಚೆಗೆ ಕಾರಣವಾಗಿದೆ’ ಎಂದೂ ಮೂಲಗಳು ಹೇಳಿವೆ.

‘ನಾನು ಪಕ್ಷದ ಶಾಸಕ. ಜೆಡಿಎಸ್‌ನಿಂದ ಬಂದು ಕಾಂಗ್ರೆಸ್‌ನಿಂದ ಕಣಕ್ಕಿಳಿದರೂ ಅತೀ ಹೆಚ್ಚು ಮತಗಳಿಂದ ಆರಿಸಿ ಬಂದಿದ್ದೇನೆ. ಆದರೆ, ಪಕ್ಷದ ಅಧ್ಯಕ್ಷರು (ಡಿ.ಕೆ. ಶಿವಕುಮಾರ್) ನನ್ನ ಪರ ಇಲ್ಲ’ ಎಂದು ಆಪ್ತರ ಬಳಿ ಅಖಂಡ ಶ್ರೀನಿವಾಸಮೂರ್ತಿ ಬೇಸರ ತೋಡಿಕೊಂಡಿದ್ದಾರೆ.

‘ಪ್ರಕರಣದಲ್ಲಿ ಸಂಪತ್‌ರಾಜ್‌ ಭಾಗಿಯಾಗಿರುವ ಬಗ್ಗೆ ಖಚಿತ ಮಾಹಿತಿ ಕೇಂದ್ರ ಅಪರಾಧ ದಳ (ಸಿಸಿಬಿ) ಪೊಲೀಸರಿಗೆ ಲಭ್ಯವಾಗಿದೆ. ಆದರೆ, ಸಂಪತ್‌ರಾಜ್‌ ಅವರನ್ನು ಬಂಧಿಸದಂತೆ ಸಿಸಿಬಿ ಮೇಲೆ ಶಿವಕುಮಾರ್‌ ಒತ್ತಡ ಹೇರುತ್ತಿದ್ದಾರೆ’ ಎಂದೂ ಮೂಲಗಳು ತಿಳಿಸಿವೆ.

‘ಅಲ್ಲದೆ, ಕೊರೊನಾ ಸೋಂಕು ಇದೆ ಎಂದು ಸಂಪತ್‌ರಾಜ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವಿಚಾರಣೆಯಿಂದಲೂ ತಪ್ಪಿಸಿಕೊಳ್ಳುತ್ತಿದ್ದಾರೆ’ ಎಂದೂ ಮೂಲಗಳು ದೂರಿವೆ.

ಈಗಾಗಲೇ ಸಂಪತ್‌ರಾಜ್‌ ಅವರ ಬಲಗೈ ಬಂಟರಾದ ಅರುಣ್‌ ಮತ್ತು ಸಂತೋಷ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಂಪತ್‌ರಾಜ್‌ ಅವರನ್ನೂ ಒಮ್ಮೆ ವಿಚಾರಣೆ ನಡೆಸಿ ಕಳುಹಿಸಿದ್ದಾರೆ. ಗಲಭೆಯಲ್ಲಿ ಸಂಪತ್‌ರಾಜ್‌ ಪಾತ್ರದ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದ್ದು, ಹೀಗಾಗಿ, ಎರಡನೇ ಬಾರಿಗೆ ನೋಟಿಸ್‌ ನೀಡಲಾಗಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅಖಂಡ ಶ್ರೀನಿವಾಸಮೂರ್ತಿ, ‘ನನ್ನ ಮನೆ ಮೇಲೆ ನಡೆದ ದಾಳಿಯೂ ಸೇರಿದಂತೆ ಅಂದು ನಡೆದ ಗಲಭೆಗೆ ಕಾರಣರಾದವರ ಬಗ್ಗೆ ದೂರಿನಲ್ಲಿ ಎಲ್ಲವನ್ನೂ ಹೇಳಿದ್ದೇನೆ. ಸಿಸಿಬಿ ಪೊಲೀಸರಿಗೂ ಮಾಹಿತಿ ನೀಡಿದ್ದೇನೆ. ಗಲಭೆಗೆ ಯಾರೇ ಕಾರಣರಾಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು. ಈ ಪ್ರಕರಣವನ್ನು ರಾಜಕೀಯಗೊಳಿಸಲು ನಾನು ಬಯಸುವುದಿಲ್ಲ’ ಎಂದರು.

‘ಜೆಡಿಎಸ್‌ನಿಂದ ಬಂದು ಕಾಂಗ್ರೆಸ್‌ ಟಿಕೆಟ್‌ ಗಿಟ್ಟಿಸಿಕೊಂಡಿದ್ದಕ್ಕೆ ಕೆಲವರಿಗೆ ಹೊಟ್ಟೆ ಉರಿ. ತೊಂದರೆ ಕೊಡಬೇಕು ಎಂಬ ಕಾರಣಕ್ಕೆ ನನ್ನ ಮನೆಗೆ ಬೆಂಕಿ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ನನಗೆ ನ್ಯಾಯಬೇಕು ಅಷ್ಟೆ’ ಎಂದೂ ಆಗ್ರಹಿಸಿದರು.

ಈ ಕುರಿತು ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದರು. ಡಿ.ಕೆ. ಶಿವಕುಮಾರ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಲಭ್ಯರಾಗಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು