ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಫೋಟೊ ತೆಗೆಯುವಷ್ಟೇ ದಾಖಲೀಕರಣ ಮುಖ್ಯ: ವೀರೇಂದ್ರ ಹೆಗ್ಗಡೆ

ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ವೀರೇಂದ್ರ ಹೆಗ್ಗಡೆ
Published : 20 ಸೆಪ್ಟೆಂಬರ್ 2024, 15:38 IST
Last Updated : 20 ಸೆಪ್ಟೆಂಬರ್ 2024, 15:38 IST
ಫಾಲೋ ಮಾಡಿ
Comments

ಬೆಂಗಳೂರು: ಛಾಯಾಚಿತ್ರಗ್ರಾಹಕರು ಫೋಟೊ ತೆಗೆಯುವುದಕ್ಕೆ ನೀಡುವಷ್ಟೇ ಮಹತ್ವವನ್ನು ದಾಖಲೀಕರಣಕ್ಕೂ ನೀಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.

ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ದಶಮಾನೋತ್ಸವ, ಡಿಜಿ ಇಮೇಜ್‌ 10ನೇ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ನಗರಗಳು ಹಿಂದೆ ಹೇಗಿದ್ದವು? ಜನಜೀವನ ಹೇಗಿತ್ತು ಎಂಬುದನ್ನು ಹಳೇ ಕಾಲದ ಫೋಟೊಗಳನ್ನು ನೋಡಿದಾಗ ಗೊತ್ತಾಗುತ್ತದೆ. ಅಂಥ ಫೋಟೊಗಳನ್ನು ಉಳಿಸಿಕೊಳ್ಳದೇ, ಅವುಗಳ ಹಿನ್ನೆಲೆಯನ್ನು ಬರೆಯದಿದ್ದರೆ ಫೋಟೊ ತೆಗೆದರೂ ಪ್ರಯೋಜನವಿಲ್ಲ ಎಂದರು.

ಭಾವನೆಗಳನ್ನು ಸೆರೆ ಹಿಡಿಯುವ ಫೋಟೊಗ್ರಫಿ ನಿಜವಾದ ಕಲೆ. ಮೊಬೈಲ್ ಬಂದರೂ ಫೋಟೊಗ್ರಫಿ ತನ್ನ ಛಾಪನ್ನು ಉಳಿಸಿಕೊಂಡಿದೆ ಎಂದರು.

‘ಪಿನ್‌ ಹೋಲ್ ಕ್ಯಾಮೆರಾದಿಂದ ಈಗಿನ ಡಿಜಿಟಲ್‌ ಕ್ಯಾಮೆರಾವರೆಗೆ ನಾನು 600ಕ್ಕೂ ಅಧಿಕ ಕ್ಯಾಮೆರಾಗಳನ್ನು ಸಂಗ್ರಹಿಸಿದ್ದೇನೆ. ಯುದ್ಧದ ಫೋಟೊಗ್ರಫಿ ಮಾಡುವ ಕ್ಯಾಮೆರಾ ಸೇರಿದಂತೆ ಅನೇಕ ವಿಧದ ಕ್ಯಾಮೆರಾಗಳಿವೆ. ನೀವು ಧರ್ಮಸ್ಥಳಕ್ಕೆ ಬಂದಾಗ ಮ್ಯೂಸಿಯಂಗೆ ಭೇಟಿ ನೀಡಿದರೆ ಅವನ್ನೆಲ್ಲ ನೋಡಬಹುದು’ ಎಂದು ಹೇಳಿದರು.

ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಎಚ್‌.ಎಸ್‌. ನಾಗೇಶ್‌ ಮಾತನಾಡಿ, ‘ಛಾಯಾಗ್ರಾಹಕರನ್ನು ಕಾರ್ಮಿಕರು ಎಂದು ರಾಜ್ಯ ಸರ್ಕಾರ ಗುರುತಿಸಿರುವುದರಿಂದ ಕಾರ್ಮಿಕ ಇಲಾಖೆಯ ಸೌಲಭ್ಯ ಸಿಗುತ್ತಿದೆ. ಛಾಯಾಗ್ರಾಹಕರ ಕಲ್ಯಾಣಕ್ಕಾಗಿ ಅಕಾಡೆಮಿ ಮಾಡಬೇಕು’ ಎಂದು ಒತ್ತಾಯಿಸಿದರು.

ಸಾಧಕರಿಗೆ ಛಾಯಾಸಾಧಕ, ಛಾಯಾಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್‌, ಸತೀಶ್‌ ಸ್ಪಾನ್‌ಲೆನ್ಸ್‌ ಅಧ್ಯಕ್ಷ ಶ್ರೀನಿವಾಸ ಕೊಲ್ಲೂರು, ಫೋಟೊಟೆಕ್‌ ಇವೆಂಟ್ಸ್‌ ಮುಖ್ಯಸ್ಥ ಓಂಪ್ರಕಾಶ್‌, ಸಂಘದ ಕಾರ್ಯದರ್ಶಿ ಎ.ಎಂ. ಮುರಳಿ, ಖಜಾಂಚಿ ಲವರಾಜ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT