ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡಕಲ್ಲಸಂದ್ರ ಕೆರೆ ಸೇರುತ್ತಿದೆ ತ್ಯಾಜ್ಯ

ವಸತಿ ಸಮುಚ್ಚಯದ ತ್ಯಾಜ್ಯ ನೀರು ಕೆರೆಗೆ ಹರಿವು l 21 ಎಕರೆ 16 ಗುಂಟೆ ವಿಸ್ತೀರ್ಣದ ಜಲಮೂಲ
Last Updated 23 ಜುಲೈ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ನಗರೀಕರಣದ ಭರಾಟೆಯಲ್ಲಿ ಹಲವು ಸುಂದರ ಕೆರೆಗಳ ನೀರು ಕಲುಷಿತಗೊಂಡಿವೆ. ಇದೀಗ ಕೋಣನಕುಂಟೆ ಬಳಿಯದೊಡ್ಡಕಲ್ಲಸಂದ್ರ ಕೆರೆಯೂ ಈ ಪಟ್ಟಿಗೆ ಸೇರ್ಪಡೆಯಾಗಿದೆ. ಕೆರೆಯ ಒಡಲಾಳಕ್ಕೆ ವಸತಿ ಸಮುಚ್ಚಯದ ತ್ಯಾಜ್ಯ ನೀರು ಸೇರುತ್ತಿದ್ದು, ಸುತ್ತಮುತ್ತಲ ಜನರ ಆತಂಕಕ್ಕೆ ಕಾರಣವಾಗಿದೆ.

21 ಎಕರೆ 16 ಗುಂಟೆ ಪ್ರದೇಶದಲ್ಲಿರುವ ಕೆರೆಯ ಜಲಮೂಲ ಮೈದುಂಬಿದೆ. ಕೆರೆಯ ಸುತ್ತಮುತ್ತಗಿಡ–ಮರ ಬೆಳೆದಿದ್ದು,ಪ್ರಾಣಿ–ಪಕ್ಷಿಗಳಿಗೆ ಆಶ್ರಯ ತಾಣವಾಗಿದೆ.ಇದರಿಂ‌ದಾಗಿ ಕನಕಪುರ ರಸ್ತೆಯಲ್ಲಿ ಸಾಗುವವರನ್ನು ಕೆರೆಕೈಬೀಸಿ ಕರೆಯುತ್ತಿದೆ. ಆದರೆ, ಕೆರೆಯ ಪ್ರದೇಶಕ್ಕೆ ಹೋದವರು ಮೂಗು ಮುಚ್ಚಿಕೊಂಡೇ ಸಾಗಬೇಕಾಗಿದೆ. ಪಕ್ಕದಲ್ಲಿರುವ ವಸತಿ ಸಮುಚ್ಚಯದ ತ್ಯಾಜ್ಯ ನೀರು ಇದೀಗ ನೇರವಾಗಿ ಜಲಮೂಲಕ್ಕೆ ಸೇರುತ್ತಿರುವ ಪರಿಣಾಮ ದುರ್ವಾಸನೆ ಹೆಚ್ಚಾಗಿದೆ.

‘ವಸತಿ ಸಮುಚ್ಚಯದಲ್ಲಿ ಎರಡುಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು (ಎಸ್‌ಟಿಪಿ) ತೋರಿಕೆಗೆ ಅಳವಡಿಸಲಾಗಿದೆ. ತ್ಯಾಜ್ಯ ನೀರು ನೇರವಾಗಿ ಕೆರೆಗೆ ಸೇರುತ್ತಿದೆ. ಇದರಿಂದ ಮೀನುಗಳು ಸಾವನ್ನಪ್ಪುವ ಜತೆಗೆ ಸುತ್ತಮುತ್ತಲೂ ರೋಗ ಹರಡುವ ಭೀತಿ ಎದುರಾಗಿದೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಜಲಮೂಲಕ್ಕೆ ಘನತ್ಯಾಜ್ಯ ಹಾಗೂ ಕಟ್ಟಡ ತ್ಯಾಜ್ಯವನ್ನು ಸುರಿಯಲಾಗುತ್ತಿದೆ. ರಾಜಕಾಲುವೆ ನೀರು ಕೂಡ ಕೆರೆ ಏರಿ ಪ್ರದೇಶಕ್ಕೆ ಹರಿಬಿಡಲಾಗಿದೆ. ಇದರಿಂದನೀರು ಸಂಪೂರ್ಣವಾಗಿ ಪಾಚಿಗಟ್ಟಿ, ದುರ್ಗಂಧ ಬೀರುತ್ತಿದೆ. ನೀರಿನಲ್ಲಿ ಮದ್ಯದ ಬಾಟಲಿಗಳು ತೇಲುತ್ತಿದ್ದು, ಎಲ್ಲೆಂದರೆಲ್ಲಿ ಕಸದ ರಾಶಿ ಕಾಣಸಿಗುತ್ತದೆ. ಅದೇ ರೀತಿ, ಗಿಡಗಂಟಿಗಳು ಬೆಳೆದಿದ್ದು, ಕೆರೆ ಏರಿ ಮೇಲೆ ಓಡಾಡುವುದು ದುಸ್ತರವಾಗಿದೆ. ಜಲಮೂಲದ ಆವರಣದಲ್ಲಿಯೇ ದೇವಸ್ಥಾನ ಹಾಗೂ ಮನೆಗಳನ್ನು ನಿರ್ಮಿಸಿಕೊಳ್ಳಲಾಗಿದೆ. ಒತ್ತುವರಿ ತೆರವಿಗೂ ಬಿಬಿಎಂಪಿ ಕ್ರಮಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದರು.

ಜೀವ ವೈವಿಧ್ಯ ತಾಣಮಾಡಲು ಪಣ: ‘ಸ್ಥಳೀಯರು ಹಾಗೂ ಸರ್ಕಾರದ ಸಹಯೋಗದೊಂದಿಗೆ ಕೆರೆ ಅಭಿವೃದ್ಧಿಪಡಿಸುವ ಕೆಲಸ ಮಾಡಲಾಗುತ್ತಿದೆ. ಎರಡು ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಜಲಮೂಲದ ಪಾದಚಾರಿ ಪಥ ನಿರ್ಮಾಣ ಮಾಡಲಾಗಿದೆ’ ಎಂದು ನೀರಿನ ಹಕ್ಕಿಗಾಗಿ ಜನಾಂದೋಲನ ಸಂಘಟನೆಯ ರಾಜ್ಯ ಸಂಚಾಲಕ ಈಶ್ವರಪ್ಪ ಮಡಿವಾಳಿ ಹೇಳಿದರು.

‘ಈ ಹಿಂದೆ ಕೆರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬರುತ್ತಿದ್ದವು. ಆದರೆ, ನಿರ್ವಹಣೆ ಇಲ್ಲದೆ ಕೆರೆ ತನ್ನ ಸೌಂದರ್ಯವನ್ನು ಕಳೆದುಕೊಂಡಿತು. ಇದೀಗ ಪುನಃಜೀವವೈವಿಧ್ಯ ತಾಣಮಾಡಲು ಪಣ ತೊಡಲಾಗಿದೆ. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷದಿಂದ ಕಾರ್ಯೋನ್ಮುಖರಾಗಿದ್ದೇವೆ’ ಎಂದರು.

ಪುನಶ್ಚೇತನಕ್ಕೆ ಕ್ರಮ

ದೊಡ್ಡಕಲ್ಲಸಂದ್ರ ಕೆರೆಯು ಈ ಹಿಂದೆ ‌ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧೀನದಲ್ಲಿತ್ತು. ಬಳಿಕ ಜಲಮೂಲದ ನಿರ್ವಹಣೆ ಹೊಣೆಯನ್ನು ಬಿಬಿಎಂಪಿ ಸುಪರ್ದಿಗೆ ವಹಿಸಲಾಗಿದೆ. ‘ದೊಡ್ಡಕಲ್ಲಸಂದ್ರ ಕೆರೆಯ ಅಭಿವೃದ್ಧಿಗೆ ಯೋಜನೆ ರೂಪಿಸಿ, ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಲಾಗಿದೆ. ವಸತಿ ಸಮುಚ್ಚಯದ ತ್ಯಾಜ್ಯ ನೀರು ಕೆರೆಗೆ ಸೇರದಂತೆ ಕ್ರಮಕೈಗೊಳ್ಳಲಾಗುವುದು. ನಡಿಗೆ ಪಥವನ್ನು ನಿರ್ಮಿಸಲಾಗುವುದು. ಕೆರೆ ಪುನಶ್ಚೇತನಕ್ಕೆ ₹5 ಕೋಟಿ ಹಣ ಮಂಜೂರಾಗಿದೆ’ ಎಂದು ಬಿಬಿಎಂಪಿ ಎಂಜಿನಿಯರ್ ಉಷಾ ತಿಳಿಸಿದರು.

59 ಬಗೆಯ ಪಕ್ಷಿಗಳು ವಾಸ

ದೊಡ್ಡಕಲ್ಲಸಂದ್ರ ಕೆರೆಯ ಬಗ್ಗೆ ಆ್ಯಕ್ಷನ್ ಏಡ್ ಎಂಬ ಸರ್ಕಾರೇತರ ಸಂಸ್ಥೆ ಅಧ್ಯಯನ ಮಾಡಿದ್ದು, ಇಲ್ಲಿ 354 ಗಿಡ–ಮರಗಳಿವೆ. ಅದೇ ರೀತಿ, 59 ಬಗೆಯ ಪಕ್ಷಿಗಳು ಇವೆ. 26 ಬಗೆಯ ಚಿಟ್ಟೆಗಳಿದ್ದು, ಕೆರೆಯ ಸುತ್ತಮುತ್ತಲಿನ ವಾತಾವರಣ ಕಲುಷಿತವಾಗುತ್ತಿರುವುದರಿಂದ ಪಕ್ಷಿ ಸಂಕುಲಕ್ಕೂ ಕಂಟಕವಾಗುವ ಸಾಧ್ಯತೆಯಿದೆ.

**

ವಸತಿ ಸಮುಚ್ಚಯದ ನೀರನ್ನು ನೇರವಾಗಿ ಕೆರೆಗೆ ಬಿಡಲಾಗುತ್ತಿದೆ. ಇದರಿಂದ ನೀರು ಕಲುಷಿತವಾಗಿದ್ದು, ಕೆಟ್ಟ ವಾಸನೆ ಬರುತ್ತಿದೆ. ಮನೆಯಲ್ಲಿ ಕುಳಿತುಕೊಳ್ಳಲೂ ಸಾಧ್ಯವಾಗುತ್ತಿಲ್ಲ

–ನಾಗರಾಜ್, ಸ್ಥಳೀಯ ನಿವಾಸಿ

**

ಬಿಬಿಎಂಪಿ ಅಧಿಕಾರಿಗಳು ಕೂಡ ಕೆರೆ ಕಡೆ ಮುಖ ಮಾಡುತ್ತಿಲ್ಲ. ಪ್ರತಿನಿತ್ಯ ನರಕಯಾತನೆ ಅನುಭವಿಸಬೇಕಾಗಿದೆ. ದಿನದಿಂದ ದಿನಕ್ಕೆ ಕೆರೆಯ ಮಾಲಿನ್ಯ ಮಿತಿ ಮೀರುತ್ತಿದೆ

–ಮುನಿರಾಮಯ್ಯ, ಅಯ್ಯಪ್ಪನಗರ

**

ರಾಜಕಾಲುವೆಯ ನೀರು ಕೆರೆ ಸೇರುತ್ತಿದೆ. ವಾಸನೆ ಹೆಚ್ಚಾಗುತ್ತಿದೆ. ಅಕ್ಕಪಕ್ಕ ಮನೆಯವರೆಲ್ಲ ಸೇರಿ ಪಾಚಿಗೆಟ್ಟ ಕೆರೆ ಏರಿ ಪ್ರದೇಶಕ್ಕೆ ಬ್ಲೀಚಿಂಗ್ ಪೌಡರ್ ಹಾಕುತ್ತಿದ್ದೇವೆ

- ಸುಧಾ, ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT