ಮಂಗಳವಾರ, ಜುಲೈ 5, 2022
25 °C

ಸಿದ್ಧಯ್ಯ ರಸ್ತೆ: ತೆರೆದ ಚರಂಡಿಯಿಂದ ಅವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಲ್ಸನ್ ಗಾರ್ಡನ್‌ನ ಸಿದ್ಧಯ್ಯ ರಸ್ತೆಯಲ್ಲಿ ಅಪೂರ್ಣ ಕಾಮಗಾರಿಯಿಂದಾಗಿ ಚರಂಡಿ ಅಲ್ಲಲ್ಲಿ ತೆರೆದುಕೊಂಡಿದೆ. ನಾಲ್ಕು ವರ್ಷಗಳು ಕಳೆದರೂ ಚರಂಡಿ ದುರಸ್ತಿಯಾಗದ ಕಾರಣ ಸ್ಥಳೀಯರು ಹೈರಾಣಾಗಿದ್ದಾರೆ. 

‘ಸುಮಾರು ಮುಕ್ಕಾಲು ಕಿ.ಮೀವರೆಗೆ ಇರುವ ಸಿದ್ಧಯ್ಯ ರಸ್ತೆಯಲ್ಲಿ ಐದು ವರ್ಷಗಳ ಹಿಂದೆ ವೈಟ್‌ ಟಾಪಿಂಗ್‌ ಕಾಮಗಾರಿ ನಡೆಸಲು ಮುಂದಾಗಿದ್ದರು. ಕಾಮಗಾರಿ ಭರದಲ್ಲಿ ರಸ್ತೆಯ ಅಕ್ಕಪಕ್ಕದ ಚರಂಡಿಗಳನ್ನು ಕೆಡವಿದ್ದರು. ಆದರೆ, ಸರ್ಕಾರ ಬದಲಾದಂತೆ ವೈಟ್‌ಟಾಪಿಂಗ್‌ ನಡೆಯಲೇ ಇಲ್ಲ. ಆದರೆ, ಅಂದಿನಿಂದ ಈವರೆಗೆ ಚರಂಡಿಗಳು ಬಾಯ್ತೆರೆದುಕೊಂಡೇ ಇವೆ’ ಎಂದು ಸ್ಥಳೀಯ ನಿವಾಸಿ ಶ್ರೀನಿವಾಸ್‌ ದೂರಿದರು.

‘ಚರಂಡಿಗಳನ್ನು ತೆರೆದಿದ್ದರಿಂದ ಒಳಚರಂಡಿ ವ್ಯವಸ್ಥೆಯೂ ಹಾಳಾಗಿದೆ. ಚರಂಡಿ ಮೇಲಿನ ಚಪ್ಪಡಿಗಳನ್ನು ಸರಿಸಿರುವುದರಿಂದ ಪಾದಚಾರಿಗಳಿಗೆ ಸಮಸ್ಯೆಯಾಗಿದೆ. ಚರಂಡಿ ದುರ್ನಾತದಿಂದ ಮೂಗು ಮುಚ್ಚಿ ನಡೆದಾಡುತ್ತೇವೆ. ಅಲ್ಪ ಮಳೆಯಾದರೂ ಈ ರಸ್ತೆಯಲ್ಲಿ ನೀರು ನಿಲ್ಲುತ್ತದೆ. ಮಳೆಗಾಲ ಬಂದರೆ ಸ್ಥಳೀಯರ ಪಾಡು ಹೇಳತೀರದು’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ಬಗ್ಗೆ ಪಾಲಿಕೆ ಅಧಿಕಾರಿಗಳನ್ನು ಕೇಳಿದಾಗ ‘ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಜಾರಿಕೊಳ್ಳುತ್ತಾರೆ. ಯಾರಿಗೆ ನಮ್ಮ ಸಮಸ್ಯೆ ತಿಳಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಸಂಬಂಧಪಟ್ಟವರು ಚರಂಡಿಗಳನ್ನು ಗುಂಡಿಮುಕ್ತಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಸ್ಥಳೀಯ ನಿವಾಸಿ ರಾಮಪ್ರಸಾದ್,‘ಚರಂಡಿ ನಿರ್ವಹಣೆ ಹೊತ್ತಿದ್ದ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಲಿಲ್ಲ. ಇದರಿಂದಲೇ ಚರಂಡಿಗಳು ಈ ದುಃಸ್ಥಿತಿಯಲ್ಲಿವೆ. ಈ ರಸ್ತೆಯಲ್ಲಿ ಬ್ಯಾಂಕ್‌, ಶಾಲೆಗಳು ಹಾಗೂ ವಾಣಿಜ್ಯ ಮಳಿಗೆಗಳಿದ್ದು, ಅವುಗಳ ಮುಂದೆಯೇ ಚರಂಡಿ ಗುಂಡಿಗಳಿವೆ’ ಎಂದರು.

‘ಗುಂಡಿಗಳಿಗೆ ಹಲವರು ಬಿದ್ದಿರುವ ಘಟನೆಗಳು ನಡೆದಿವೆ. ಚರಂಡಿಗಳು ಜನರನ್ನು ಬಲಿ ಪಡೆಯುವಂತಿವೆ. ವಿದ್ಯಾರ್ಥಿಗಳು, ಮಕ್ಕಳು, ವೃದ್ಧರು ಪಾಲಿಗೆ ಈ ರಸ್ತೆ ಮಾರಕವಾಗಿ ಪರಿಣಮಿಸಿದ್ದು, ದೂಳಿನಲ್ಲೇ ವರ್ಷಗಳನ್ನು ಕಳೆದಿದ್ದೇವೆ. ಅವಘಡಗಳು ಹೆಚ್ಚಾಗದಂತೆ ತಡೆಯಲು ಇಲ್ಲಿನ ಚರಂಡಿಗಳನ್ನು ಕೂಡಲೇ ದುರಸ್ತಿ ಮಾಡುವುದು ಒಳ್ಳೆಯದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು