ಶನಿವಾರ, ಅಕ್ಟೋಬರ್ 31, 2020
20 °C
ದಾಖಲೆ ಪರಿಶೀಲನೆ l ನಟರೊಬ್ಬರ ಮಕ್ಕಳಿಬ್ಬರಿಗೆ ನೋಟಿಸ್ ನೀಡುವ ಸಾಧ್ಯತೆ

ಡ್ರಗ್ಸ್: ಪಬ್‌ಗಳ ಮೇಲೆ ಸಿಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Pub

ಬೆಂಗಳೂರು: ಡ್ರಗ್ಸ್ ಜಾಲದ ತನಿಖೆಯಲ್ಲಿ ಸಿಕ್ಕ ಮಾಹಿತಿ ಆಧರಿಸಿ ನಗರದ 5 ಪಬ್‌‌ಗಳ ಮೇಲೆ ಸಿಸಿಬಿ ಪೊಲೀಸರು ಶನಿವಾರ ರಾತ್ರಿ ದಾಳಿ ಮಾಡಿದರು.

ಪ್ರಕರಣದಡಿ ಬಂಧಿಸಲಾಗಿರುವ ನಟಿಯರು, ಡ್ರಗ್ಸ್ ಪೆಡ್ಲರ್‌ಗಳು ಹಾಗೂ ಇತರೆ ಆರೋಪಿಗಳು ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಅವರ ವಿಚಾರಣೆ ವೇಳೆ ಕೆಲ ಪಬ್‌ಗಳಲ್ಲೂ ಡ್ರಗ್ಸ್ ಪೂರೈಕೆಯಾಗುತ್ತಿದ್ದ ಮಾಹಿತಿ ಸಿಸಿಬಿಗೆ ಲಭ್ಯವಾಗಿತ್ತು.

ಸಿಸಿಬಿ ವಿಶೇಷ ತಂಡಗಳು ಏಕಕಾಲದಲ್ಲೇ 5 ಪಬ್‌ಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿತು. ಪಬ್‌ಗಳ ವ್ಯವಸ್ಥಾಪಕರು ಹಾಗೂ ಕೆಲಸಗಾರರ ಹೇಳಿಕೆ ಪಡೆಯಿತು. ದಾಖಲೆಗಳನ್ನು ಪಡೆದು ಪರಿಶೀಲಿಸಿತು.

‘ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದು ಪಬ್‌ಗಳ ಮೇಲೆ ದಾಳಿ ಮಾಡಲಾಗಿದೆ. ರಾತ್ರಿಯಿಡೀ ಶೋಧ ನಡೆದಿದೆ' ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

ವಾರಾಂತ್ಯದಲ್ಲಿ ಪಬ್‌ಗೆ ಬರುತ್ತಿದ್ದ ಗ್ರಾಹಕರಿಗೆ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿತ್ತು ಎಂಬ ಅನುಮಾನ ಸಿಸಿಬಿಗೆ ಇತ್ತು. ದಾಳಿ ವೇಳೆ ಕೆಲ ವಸ್ತುಗಳನ್ನು ಜಪ್ತಿ ಮಾಡಿರುವ ಮಾಹಿತಿ ಇದ್ದು, ಆ ಬಗ್ಗೆ ಅಧಿಕಾರಿಗಳು ಹೆಚ್ಚಿನ ವಿವರ ನೀಡಿಲ್ಲ.

ನಟರೊಬ್ಬರ ಮಕ್ಕಳಿಗೆ ನೋಟಿಸ್ ಸಾಧ್ಯತೆ: ಡ್ರಗ್ಸ್ ಪಾರ್ಟಿ ಮಾಡುತ್ತಿದ್ದ ಆರೋಪದಡಿ ಡಾಲರ್ಸ್ ಕಾಲೊನಿಯ ಉದ್ಯಮಿ ವರುಣ್ ಸೇರಿ ಇಬ್ಬರನ್ನು ಸಂಜಯನಗರ ಪೊಲೀಸರು ಬಂಧಿಸಿದ್ದು, ಆ ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ. ಪ್ರಕರಣದಲ್ಲಿ ನಟರೊಬ್ಬರ ಮಕ್ಕಳಿಬ್ಬರು ಸೇರಿದಂತೆ ಹಲವರ ಹೆಸರು ಕೇಳಿಬಂದಿದ್ದು, ಅವರ ವಿಚಾರಣೆಗಾಗಿ ನೋಟಿಸ್‌ ನೀಡುವ ಸಂಭವ ಇದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು