ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬತ್ತಿದ ಕೊಳವೆಬಾವಿಗಳು, ನೀರಿಗೆ ಪರದಾಟ

ಕೆ.ಆರ್‌. ಪುರ: ಹಲವು ಬಡಾವಣೆಗಳಲ್ಲಿ ಅಂತರ್ಜಲ ಕುಸಿತ l ಟ್ಯಾಂಕರ್‌ ನೀರಿಗೆ ಮೊರೆ
Published 8 ಮಾರ್ಚ್ 2024, 22:07 IST
Last Updated 8 ಮಾರ್ಚ್ 2024, 22:07 IST
ಅಕ್ಷರ ಗಾತ್ರ

ಕೆ.ಆರ್.ಪುರ: ವಿಧಾನಸಭಾ ಕ್ಷೇತ್ರದಲ್ಲಿ ಏಳು ವಾರ್ಡ್‌ಗಳಿವೆ. ಪ್ರತಿ ವಾರ್ಡ್‌ನಲ್ಲಿ ಇನ್ನೂರರಿಂದ ಮುನ್ನೂರು ಕೊಳವೆಬಾವಿಗಳಿವೆ. ಕೆಲವು ಬೋರ್‌ವೆಲ್‌ಗಳು ಬತ್ತಿವೆ, ಹೊಸ ಕೊಳವೆಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ..!

ಕೆ.ಆರ್.ಪುರದ ಬಹುತೇಕ ಭಾಗಗಳಲ್ಲಿ ನೀರಿನ ಪರಿಸ್ಥಿತಿ ಹೀಗೇ ಇದೆ. ಕೆಲವು ಕಡೆ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ನೆತ್ತಿ ಸುಡುವ ಬಿಸಿಲಿನಲ್ಲಿ ನಿತ್ಯದ ಬಳಕೆಯ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಹಣವಿದ್ದವರು ಟ್ಯಾಂಕರ್‌ ನೀರಿಗೆ ಮೊರೆ ಹೊಗಿದ್ದಾರೆ. ಪರಿಸ್ಥಿತಿ ಲಾಭ ಪಡೆಯುತ್ತಿರುವ ಕೆಲವು ಟ್ಯಾಂಕರ್ ಮಾಲೀಕರು ಅಧಿಕ ಹಣ ವಸೂಲಿ ಮಾಡುತ್ತಿದ್ದಾರೆ.

‘ಹಣ ಕೊಟ್ಟರೂ ಟ್ಯಾಂಕರ್ ನೀರು ಸಿಗುವುದು ಕಷ್ಟವಾಗಿದೆ. ನಿತ್ಯವೂ ನೀರಿಗಾಗಿ ಕಾಯುವುದೇ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ತೀವ್ರವಾಗುವಂತೆ ಕಾಣುತ್ತಿದೆ’ ಎಂದು ಕನಕನಗರ ನಿವಾಸಿ ಗೀತಾ ಆತಂಕ ವ್ಯಕ್ತಪಡಿಸಿದರು.

ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಇಂಥ ನೀರಿನ ಅಭಾವವನ್ನು ಕಂಡಿರಲಿಲ್ಲ. ನೀರಿನ ಸಮಸ್ಯೆಯನ್ನು ಪರಿಹರಿಸಲು ಜಲಮಂಡಳಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೂ ಜನರಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ನೀರು ಪೂರೈಸಲಾಗುತ್ತಿಲ್ಲ. ಇನ್ನೊಂದು ಕಡೆ ಕೊಳವೆ ಬಾವಿ ಕೊರೆಯಲು ಜಾಗ ಸಿಗುತ್ತಿಲ್ಲ. ಜಾಗ ದೊರೆತ ಕಡೆಗಳಲ್ಲಿ ನೀರು ಸಿಗುತ್ತಿಲ್ಲ. ಅಂತರ್ಜಲ ಅಷ್ಟು ಪಾತಾಳಕ್ಕಿಳಿದಿದೆ.

ನೀರು ಖರೀದಿ ಕಷ್ಟ: ರಾಮಮೂರ್ತಿನಗರ ವಾರ್ಡ್‌ನ ಕಲ್ಕೆರೆ, ಕನಕನಗರ, ಪೂಜಾ ಗಾರ್ಡನ್, ಬಂಜಾರ ಬಡಾವಣೆಯಲ್ಲಿ ಬಡವರು, ಕೂಲಿ ಕಾರ್ಮಿಕರು ಹೆಚ್ಚಿದ್ದಾರೆ. ಈ ಭಾಗದಲ್ಲಿ ನೀರಿನ ಅಭಾವ ಹೆಚ್ಚಾಗಿದೆ. ಇಲ್ಲಿರುವವರು ಹಣ ತೆತ್ತು ಟ್ಯಾಂಕರ್‌ ನೀರು ಖರೀದಿಸುವ ಪರಿಸ್ಥಿತಿಯಲ್ಲಿಲ್ಲ.

‘ಶಾಂತಾ ಕೃಷ್ಣಮೂರ್ತಿ ಫೌಂಡೇಶನ್‌ನವರು, ಕಲ್ಕೆರೆ, ಕನಕನಗರ, ಬಂಜಾರ ಬಡಾವಣೆ, ಪೂಜಾ ಗಾರ್ಡನ್‌ನಲ್ಲಿ ಕೆಲವು ಪ್ರದೇಶಗಳಿಗೆ ಟ್ಯಾಂಕರ್ ನೀರು ಸರಬರಾಜು ಮಾಡಿ ಬಡವರಿಗೆ ಸಹಾಯ ಹಸ್ತ ಚಾಚಿದೆ’ ಎಂದು ಕಲ್ಕೆರೆ ನಿವಾಸಿ ನಾಗರತ್ನ ಹೇಳಿದರು.

’ಕಲ್ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಟ್ಯಾಂಕರ್‌ಗಳು ಬರಲು ಜಾಗವೇ ಇಲ್ಲ. ಪೈಪ್ ಮೂಲಕ ನೀರು ಸರಬರಾಜು ಮಾಡಿಸಿಕೊಳ್ಳಲು ಟ್ಯಾಂಕರ್‌ ಮಾಲೀಕರಿಗೆ ಅಧಿಕ ಹಣ ನೀಡಬೇಕಾಗುತ್ತದೆ’ ಎಂದು ಕಲ್ಕೆರೆ ನಿವಾಸಿ ರೇಣುಕಾ ದೂರಿದರು.

ಮನೆ ತೊರೆಯುವುದೊಂದೇ ದಾರಿ

ಕಲ್ಕೆರೆ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿದೆ. ವಾರಕ್ಕೂ ಮೊದಲೇ ಟ್ಯಾಂಕರ್ ನೀರು ಬುಕ್ ಮಾಡಬೇಕು. ಆದರೂ, ನೀರು ಸಿಗುವ ಭರವಸೆ ಇಲ್ಲ. ನೀರಿನ ವಿಪರೀತ ಅಭಾವ ಹೀಗೇ ಮುಂದುವರಿದರೆ ಮನೆ ತೊರೆಯುವುದೊಂದೇ ಉಳಿದಿರುವ ದಾರಿ ಎಂದು ಕನಕನಗರ ಗೀತಾ ಆತಂಕ ವ್ಯಕ್ತಪಡಿಸಿದರು.

ನೀರು ಮಿತ ಬಳಕೆಗೆ ಫಲಕ ಅಳವಡಿಕೆ

ನೀರಿನ ಮಿತ ಬಳಕೆ ಮಾಡಲು ಅಪಾರ್ಟ್‌ಮೆಂಟ್ ನಿವಾಸಿಗಳಲ್ಲಿ ಜಾಗೃತಿ ಮೂಡಿಸಲು ಫಲಕಗಳನ್ನು ಅಪಾರ್ಟ್‌ಮೆಂಟ್‌ನ ಜಾಗೃತ ಜನರು ಅಳವಡಿಸಿದ್ದಾರೆ.

‘ದುಡ್ಡು ಕೊಟ್ಟರೆ ನೀರು ಸಿಗುತ್ತದೆ ಎನ್ನುವ ಭ್ರಮೆ ಕೆಲವರಿಗಿದೆ. ಆದರೆ, ಬೆಂಗಳೂರಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಟ್ಯಾಂಕರ್ ಮಾಲೀಕರು ಎಲ್ಲ ಮೂಲಗಳಿಂದಲೂ ನೀರು ತುಂಬಿಸಿಕೊಂಡು ಬಂದು ಅಪಾರ್ಟ್‌ಮೆಂಟ್ ಇನ್ನಿತರ ಮನೆಗಳಿಗೆ ಸರಬರಾಜು ಮಾಡುತ್ತಿದ್ದಾರೆ. ನೀರಿನ ಮೂಲವೇ ಬತ್ತಿ ಹೋದರೆ ಸರಬರಾಜು ಮಾಡುವುದು ಕಷ್ಟ. ಈ ದೃಷ್ಟಿಯಿಂದ ನಿವಾಸಿಗಳಲ್ಲಿ ಜಾಗೃತಿಗೆ ಮುಂದಾಗಿ ಮಿತ ಬಳಕೆ ಮಾಡಲು ಆರಂಭಿಸಿದ್ದೇವೆ. ನಿತ್ಯ ಬಳಕೆ ಮಾಡುವ ನೀರಿನ ಪ್ರಮಾಣ ಕಡಿಮೆ ಮಾಡಿದ್ದೇವೆ. ಅಪಾರ್ಟ್‌ಮೆಂಟ್ ನ ಪ್ರಮುಖ ಜಾಗಗಳಲ್ಲಿ ನೀರು ಮಿತ ಬಳಕೆ ಕುರಿತು ನಾಮಫಲಕ ಅಳವಡಿಸಿದ್ದೇವೆ’ ಎಂದು ರೋಹನ್ ಅಪಾರ್ಟ್‌ಮೆಂಟ್ ನಿವಾಸಿ ದಾಮೋದರನ್ ತಿಳಿಸಿದರು.

ಟ್ಯಾಂಕರ್‌ ನೀರೂ ಅನುಮಾನ

ದುಬಾರಿ ಹಣ ತೆತ್ತಾದರೂ ಸದ್ಯ ನೀರು ತರಿಸುತ್ತಿದ್ದೇವೆ. ಇದು ಹೀಗೇ ಮುಂದುವರಿದರೆ ಅವರಾದರೂ ಎಲ್ಲಿಂದ ತಂದು ಕೊಡುತ್ತಾರೆ? ಬಿಸಿಲು ಹೀಗೇ ಮುಂದುವರಿದರೆ ಟ್ಯಾಂಕರ್‌ ನೀರು ಸಿಗುವುದೂ ಅನುಮಾನ. ಇನ್ನೆರಡು ತಿಂಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ಹೋಗಲಿದೆ ಎಂದು ಯೋಚಿಸಿದರೆ ಭಯವಾಗುತ್ತದೆ.

–ಸಂತೋಷ್‌, ಕನಕಗಿರಿ

ನೀರು ತರಿಸುವ ಶಕ್ತಿ ಇಲ್ಲ

ಬಡವರೇ ಹೆಚ್ಚಿರುವ ರಾಮಮೂರ್ತಿನಗರ ವಾರ್ಡ್‌ನಲ್ಲಿ ಹಣ ತೆತ್ತು ನೀರು ಖರೀದಿಸುವಷ್ಟು ಶಕ್ತಿ ಜನರಿಗಿಲ್ಲ. ಕೆಲವೊಂದಿಷ್ಟು ಸಮಾಜ ಸೇವಕರು ಟ್ರ್ಯಾಕ್ಟರ್, ಲಾರಿ ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಸರಬರಾಜು ಮಾಡುತ್ತಿರುವುದರಿಂದ ಬದುಕು ಸಾಗಿದೆ. 

–ನಾಗರತ್ನ, ಕಲ್ಕೆರೆ ನಿವಾಸಿ

ಅಧಿಕಾರಿಗಳಿಂದ ಸರಿಯಾದ ಸ್ಪಂದನೆಯಿಲ್ಲ

ಕೊಳವೆಬಾವಿಗಳಲ್ಲಿ ನೀರು ಬತ್ತಿದೆ. ಬಿಬಿಎಂಪಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆಯಾಗುತ್ತಿದೆ. ಆದರೆ, ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಟ್ಯಾಂಕರ್ ನೀರಿಗಾಗಿ ವಾರದ ಮೊದಲೇ ಬುಕ್ ಮಾಡಬೇಕು. ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದರೂ, ಸ್ಪಂದಿಸುತ್ತಿಲ್ಲ. 

ರೇಣುಕಾ, ಕಲ್ಕೆರೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT