ಗುರುವಾರ , ಮೇ 26, 2022
26 °C
ಪುಸ್ತಕ ಬಿಡುಗಡೆ ಕಾರ್ಯಕ್ರಮ

ಅವಿವಾಹಿತ ಮಠಾಧೀಶರಿಗೇಕೆ ಮೊಟ್ಟೆ ವಿಷಯ: ಸಾಹಿತಿ ಕುಂ. ವೀರಭದ್ರಪ್ಪ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶಾಲಾ ಮಕ್ಕಳಿಗೆ ಕೋಳಿ ಮೊಟ್ಟೆ ವಿತರಿಸಬಾರದು ಎಂದು ಹೆಂಡತಿ–ಮಕ್ಕಳಿಲ್ಲದ ಮಠಾಧೀಶರು ಹೇಳುತ್ತಿದ್ದಾರೆ. ಈ ಬಗ್ಗೆ ಮಾತನಾಡಲು ಅವರು ಯಾರು’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಪ್ರಶ್ನಿಸಿದರು.

ರಂಗ ವಿಜಯಾ, ರಂಗಮಂಚ ಕಾಗೋಡು ಮತ್ತು ಮಲೆನಾಡು ವಿಜ್ಞಾನ– ಜಾನಪದ ಜ್ಞಾನ ಪರಂಪರೆ ಸಂಶೋಧನಾ ಕೇಂದ್ರದಿಂದ ಆಯೋಜಿಸಿದ್ದ ರಂಗಜೀವಿ ಪ್ರಸಾದಿ ಮತ್ತು ರಂಗಕರ್ಮಿ ಚಂದ್ರು ಅವರ 50ರ ಸಂಭ್ರಮ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಎಂ.ಜಿ. ಗುಣಿ ಮತ್ತು ಅಮರನಾಥ ಅವರ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಶಾಲಾ ಮಕ್ಕಳಿಗೆ ಮೊಟ್ಟೆ ಕೊಡಬೇಡಿ ಎಂದು ಯಾವುದೋ ಸ್ವಾಮೀಜಿ ಹೇಳುತ್ತಾರೆ. ಶಾಲಾ ಮಕ್ಕಳು ಮೊಟ್ಟೆ ಬೇಕೇ ಬೇಕು ಎನ್ನುತ್ತಾರೆ. ಸರ್ಕಾರ ನಡೆಸುವುದು ಮಠಾಧೀಶರೋ, ಚುನಾಯಿತ ಜನಪ್ರತಿನಿಧಿಗಳೊ ಎಂಬುದೇ ಅರ್ಥವಾಗುತ್ತಿಲ್ಲ. ಈ ಅವಿವಾಹಿತ ಮಠಾಧೀಶರಿಗೆ ಈ ವಿಷಯ ಏಕೆ ಬೇಕು’ ಎಂದು ಕೇಳಿದರು.

‘ಆಳುವ ಸರ್ಕಾರಗಳು ನಮ್ಮ ಭಾಷೆ, ಬದುಕು, ಆಹಾರ ಪದ್ಧತಿ ಸೇರಿ ಎಲ್ಲವನ್ನೂ ನಿಯಂತ್ರಿಸುತ್ತಿವೆ. ಪ್ರಾದೇಶಿಕ ಭಾಷೆ ಮತ್ತು ಅವುಗಳ ಆಶೋತ್ತರಗಳನ್ನು ಮೂಲೆಗುಂಪು ಮಾಡುತ್ತಿವೆ. ಇದನ್ನು ರಂಗಕರ್ಮಿಗಳು, ಬರಹಗಾರರು ಪ್ರತಿಭಟಿಸಲೇಬೇಕು’ ಎಂದು ತಿಳಿಸಿದರು.

‘ಆಹಾರ ವೈವಿಧ್ಯದ ಮತ್ತು ಸುಂದರವಾದ ಭಾಷೆ ಹೊಂದಿರುವ ನಾಡು ಕರ್ನಾಟಕ. ಲೇಖಕರು ಸಮಾಜದ ಅನಿಷ್ಟಗಳ ವಿರುದ್ಧ ಹೋರಾಡಬೇಕಾಗುತ್ತದೆ. ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಷಯ ಸೇರಿ ಜ್ವಲಂತ ಸಮಸ್ಯೆಗಳ ಬಗ್ಗೆ ಅವರು ಹೆಚ್ಚಾಗಿ ಬರೆಯಬೇಕು’ ಎಂದರು.

‘ಸ್ವತಂತ್ರ ವ್ಯಕ್ತಿತ್ವ ಹೊಂದಬೇಕಿದ್ದ ಮೈಸೂರಿನ ರಂಗಾಯಾಣದ ಸಂಸ್ಥೆ ಚಕ್ರವರ್ತಿ ಸೂಲಿಬೆಲೆ ಮತ್ತು ಬಿಜೆಪಿ ವಕ್ತಾರರಾದ ಮಾಳವಿಕ ಅವಿನಾಶ್ ಅವರನ್ನು ಕಾರ್ಯಕ್ರಮಕ್ಕೆ ಅಥಿತಿಯಾಗಿ ಆಹ್ವಾನಿಸುವ ಮೂಲಕ ಘನತೆ ಕಳೆದುಕೊಳ್ಳುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಯೋಗಗುರು ದಾಸಪ್ಪ ಕೇಶವ, ನಾಟಕಕಾರ ರಾಜೇಂದ್ರ ಕಾರಂತ, ರಂಗ ಸಂಘಟಕ ಎಚ್.ವಿ.ವಾಸು, ರಂಗಭೂಮಿ ನಟ ಧನಂಜಯ, ಗಾಯಕ ಬೆನಕ ಶ್ರೀನಾಥ್, ರಂಗ ವಿನ್ಯಾಸಕ ಕೃಷ್ಣ ರಾಯಚೂರು, ಜನಪದರು ಸಂಸ್ಥೆಯ ಅಧ್ಯಕ್ಷ ಪಾಪಣ್ಣ, ಸುರೇಶ್ ಜನಪದ, ರಂಗಭೂಮಿ ಕಲಾವಿದ ಸಿದ್ದೇಶ್, ಗಾಯಕ ರಮೇಶ್, ಯುವ ಸಂಘಟಕ ಹನುಮಂತರಾಜು, ಕಲಾವಿದ ಜಿ.ಕೆ.ಶಿವಣ್ಣ, ಚಿತ್ರಕಲಾ ಶಿಕ್ಷಕ ಬಿ.ಜಯರಾಂ ಅವರಿಗೆ ರಂಗಜೀವಿ ಮತ್ತು ರಂಗಕರ್ಮಿ ಪುರಸ್ಕಾರ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು