ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲಿ ಸರಳವಾಗಿ ಈದ್‌ ಉಲ್‌ ಫಿತ್ರ್‌ ಆಚರಣೆ

ನಗರದ ಇತಿಹಾಸದಲ್ಲೇ ಮೊದಲ ಬಾರಿಗೆ ಸಾಮೂಹಿಕ ಪ್ರಾರ್ಥನೆ ಇಲ್ಲದ ಹಬ್ಬ
Last Updated 25 ಮೇ 2020, 20:32 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಇದೇ ಮೊದಲ ಬಾರಿಗೆ ಅತ್ಯಂತ ಸರಳವಾಗಿ ಮುಸ್ಲಿಮರು ಸೋಮವಾರ ಈದ್‌ ಉಲ್‌ ಫಿತ್ರ್‌ ಆಚರಿಸಿದರು. ಸಾಮೂಹಿಕ ಪ್ರಾರ್ಥನೆಗೆ ಬದಲಾಗಿ, ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು.

ಈದ್‌ ಉಲ್‌ ಫಿತ್ರ್‌ ಸಂದರ್ಭದಲ್ಲಿಚಾಮರಾಜಪೇಟೆಯ ಈದ್ಗಾ ಮೈದಾನ, ವಿಲ್ಸನ್ ಗಾರ್ಡನ್‌ನ ರೆಡ್ ಫೋರ್ಟ್ ಮೈದಾನ, ಶಿವಾಜಿನಗರ, ಮಿನರ್ವ ವೃತ್ತ, ಮೈಸೂರು ರಸ್ತೆ ಮತ್ತಿತರ ಭಾಗಗಳಲ್ಲಿನ ಮಸೀದಿ, ಮೈದಾನಗಳಲ್ಲಿ ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಸಾಮೂಹಿಕ ಪ್ರಾರ್ಥನೆ ಮಾಡುತ್ತಿದ್ದರು. ಆದರೆ, ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಲಾಗದೆಂಬ ಕಾರಣಕ್ಕೆ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ವಿಧಿಸಲಾಗಿತ್ತು.

ಕುಟುಂಬದವರೆಲ್ಲ ಸೇರಿ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ಹೀಗಾಗಿ, ಮಸೀದಿಗಳಲ್ಲಿ ಹಬ್ಬದ ಸಡಗರ ಕಂಡು ಬರಲಿಲ್ಲ.

ಹೊಸ ಬಟ್ಟೆ ಖರೀದಿಯೂ ಈ ಸಂದರ್ಭದಲ್ಲಿ ಹೆಚ್ಚಾಗಿರಲಿಲ್ಲ. ಸಿಹಿ ತಿಂಡಿ–ತಿನಿಸು, ಮಧ್ಯಾಹ್ನ ಊಟ ಎಲ್ಲ ಮನೆ ಮಂದಿಗಷ್ಟೇ ಸೀಮಿತವಾಗಿತ್ತು.ರುಚಿ ರುಚಿಯಾದ ಬಿರ್ಯಾನಿ, ಹಲೀಮ್‌, ಕಬಾಬ್‌, ಕೀಮಾ ಸಮೋಸ, ಭೇಜಾ ಪಫ್, ಫ್ರೂಟ್‌ ಸಲಾಡ್‌ ಬಹುತೇಕ ಮುಸ್ಲಿಮರ ಅಡುಗೆ ಮನೆ ಅಲಂಕರಿಸಿದ್ದವು. ಪ್ರತಿ ಹಬ್ಬದ ವೇಳೆ ಕಂಡು ಬರುತ್ತಿದ್ದ ದಾನ–ಧರ್ಮದ ಚಟುವಟಿಕೆಯೂ ಈ ಬಾರಿ ಕಾಣಲಿಲ್ಲ. ಎಲ್ಲವೂ ಮನ ಮತ್ತು ಮನೆಗಳಿಗೆ ಸೀಮಿತವಾಗಿತ್ತು.

ಕೊರೊನಾ ನಿರ್ಮೂಲನೆಗೆ ಪ್ರಾರ್ಥನೆ:‘ದೇಶದಲ್ಲಿ ಕೊರೊನಾ ಸೋಂಕು ಸಂಪೂರ್ಣವಾಗಿ ತೊಲಗಲಿ ಎಂದು ಅಲ್ಲಾನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು’ ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ಜಗತ್ತಿನಲ್ಲಿ ಮಾನವ ಕುಲಕ್ಕೆ ಎದುರಾಗಿರುವ ದೊಡ್ಡ ಸವಾಲನ್ನು ನಾವೆಲ್ಲರೂ ಒಟ್ಟಾಗಿ ಮೆಟ್ಟಿ ನಿಲ್ಲಬೇಕಿದೆ. ಭಾರತ ಸರ್ವ ಧರ್ಮಗಳ ಭೂಮಿಯಾಗಿದ್ದು, ದೇಶದಲ್ಲಿ ಎಲ್ಲರೂ ಶಾಂತಿ, ಸೌಹಾರ್ದದಿಂದ ಬದುಕಲು ಈ ಹಬ್ಬ ವೇದಿಕೆಯಾಗಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT