ಬೆಂಗಳೂರು: ಮೀಸಲು ಅರಣ್ಯವನ್ನು ಒತ್ತುವರಿ ಮಾಡಿಕೊಂಡಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ), ಕೆಂಪೇಗೌಡ ಬಡಾವಣೆ ನಿರ್ಮಿಸಿತ್ತು. ಈ ಒತ್ತುವರಿಯನ್ನು ಅರಣ್ಯ ಇಲಾಖೆ ತೆರವು ಮಾಡಿದೆ.
ಸೂಲಿಕೆರೆ ಮೀಸಲು ಅರಣ್ಯದಲ್ಲಿ 1 ಎಕರೆ 38 ಗುಂಟೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ಬಿಡಿಎ, ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ನಿರ್ಮಿಸಿದೆ. ಈ ಬಗ್ಗೆ ಬೆಂಗಳೂರು ನಗರದ ಡಿಸಿಎಫ್ ಕಳೆದ ತಿಂಗಳು ಬಿಡಿಎ ಆಯುಕ್ತರಿಗೆ ಪತ್ರ ಬರೆದು, ಒತ್ತುವರಿ ತೆರವುಗೊಳಿಸಲು ಮನವಿ ಮಾಡಿದ್ದರು. ಆದರೆ, ಅವರು ಮಾಡಿರಲಿಲ್ಲ.
ಹೀಗಾಗಿ, ಅರಣ್ಯ ಇಲಾಖೆ ಗುರುವಾರ ಕಾರ್ಯಾಚರಣೆ ನಡೆಸಿ, ಅರಣ್ಯ ಭೂಮಿಯನ್ನು ವಶಕ್ಕೆ ಪಡೆದುಕೊಂಡಿದೆ.
ಸೂಲಿಕೆರೆ, ಕೊಮ್ಮಘಟ್ಟ ಮತ್ತು ಮಾರಗೊಂಡನಹಳ್ಳಿ ವ್ಯಾಪ್ತಿಯಲ್ಲಿ 525 ಎಕರೆ 2 ಗುಂಟೆ ಪ್ರದೇಶವನ್ನು ‘ಸೂಲಿಕೆರೆ ಮೀಸಲು ಅರಣ್ಯ’ ಎಂದು ಸರ್ಕಾರ 1934ರ ಸೆ.3ರಂದು ಆದೇಶಿಸಿದೆ. ಕಗ್ಗಲಿಪುರದ ಆರ್‌ಎಫ್‌ಒ 2019ರ ಡಿಸೆಂಬರ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಬಿಡಿಎ ಒತ್ತುವರಿ ಮಾಡಿಕೊಂಡಿರುವುದು ಕಂಡುಬಂದಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಪ್ರಮುಖ ರಸ್ತೆ ನಿರ್ಮಿಸಲು ಮತ್ತು 8ನೇ ಬ್ಲಾಕ್‌ನಲ್ಲಿ ರಸ್ತೆ ನಿರ್ಮಿಸಲು ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿತ್ತು.
ಆಎಫ್‌ಒ ಅರಣ್ಯ ಕಾಯ್ದೆಯಡಿ ಬಿಡಿಎ ಅಧಿಕಾರಿಗಳ ಮೇಲೆ ಒತ್ತುವರಿ ಪ್ರಕರಣ ದಾಖಲಿಸಿದ್ದರು. ಅಲ್ಲದೆ, ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೆಯನ್ನೂ ನಡೆಸಿ ನಕ್ಷೆಯನ್ನು ಬಿಡಿಎಗೆ ಒದಗಿಸಲಾಗಿತ್ತು.
‘ಅಪರಾಧ ಪ್ರಕರಣ ದಾಖಲಿಸುವ ಮುನ್ನ ಬಿಡಿಎಗೆ ಎಲ್ಲ ರೀತಿಯ ಅವಕಾಶಗಳನ್ನೂ ನೀಡಲಾಗಿತ್ತು. ಸಂಬಂಧಿಸಿದ ಮುಖ್ಯ ಎಂಜಿನಿಯರ್‌ಗೆ ಒತ್ತುವರಿ ಬಗ್ಗೆ ಮಾಹಿತಿಯೂ ಇತ್ತು. ನಾವು ಇದೀಗ ಭೂಮಿಯನ್ನು ವಶಪಡಿಸಿಕೊಂಡಿದ್ದು, ಆ ಜಾಗದಲ್ಲಿ ಬಿದಿರು ಸಸಿಗಳನ್ನು ನಡೆಲಾಗಿದೆ’ ಎಂದು ಬೆಂಗಳೂರು ನಗರ ಡಿಸಿಎಫ್ ಎನ್. ರವೀಂದ್ರಕುಮಾರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.