ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲಾಕ್‌ಮೇಲ್: ದಂಪತಿ ಜೈಲುಪಾಲು!

ಮಹಿಳೆಗೆ ಬೆದರಿಸಿ ₹ 8 ಲಕ್ಷ ಸುಲಿಗೆ ಮಾಡಿದ ಆರೋಪ
Last Updated 4 ನವೆಂಬರ್ 2018, 20:45 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯಿಂದ ₹8 ಲಕ್ಷ ಸುಲಿಗೆ ಮಾಡಿದ ಆರೋಪದಡಿ ಮಾನವ ಹಕ್ಕುಗಳ ಪರಿಷತ್‌ನ (ಎಚ್‌ಆರ್‌ಸಿಐ) ದಕ್ಷಿಣ ಭಾರತದ ಅಧ್ಯಕ್ಷೆ ಸೀಮಾ ಖಾನ್ ಹಾಗೂ ಅದೇ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷನಾಗಿರುವ ಆಕೆಯ ಪತಿ ಇಮ್ರಾನ್‌ನನ್ನು (29) ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.

ಇವರ ವಿರುದ್ಧ 45 ವರ್ಷದ ಮಹಿಳೆಯೊಬ್ಬರು ನ.1ರಂದು ದೂರು ಕೊಟ್ಟಿದ್ದರು. ಆರೋಪಿಗಳನ್ನು ಬಂಧಿಸಲು ಶನಿವಾರ ಕೆ.ಜಿ.ಹಳ್ಳಿಯ ಅವರ ಮನೆ ಬಳಿ ತೆರಳಿದ್ದಾಗ, ಎಚ್‌ಆರ್‌ಸಿಐನ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಜೀಪು ಅಡ್ಡಗಟ್ಟಿ ಪ್ರತಿಭಟನೆಯನ್ನೂ ಮಾಡಿದರು. ‘ವಿಚಾರಣೆ ನಡೆಸಿ ಬಿಟ್ಟು ಕಳುಹಿಸುತ್ತೇವೆ’ ಎಂದು ಪ್ರತಿಭಟನಾಕಾರರಿಗೆ ಹೇಳಿ ದಂಪತಿಯನ್ನು ಠಾಣೆಗೆ ಕರೆತಂದೆವು. ನ್ಯಾಯಾಲಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು ಎಂದು ಪೊಲೀಸರು ಹೇಳಿದರು.

ಬ್ಲಾಕ್‌ಮೇಲ್: ಫಿರ್ಯಾದಿ ಮಹಿಳೆ ತಮ್ಮ 15ನೇ ವಯಸ್ಸಿನಲ್ಲೇ 30 ವರ್ಷದ ಸಂಬಂಧಿಯನ್ನು ವಿವಾಹವಾದರು. ದಂಪತಿಗೆ ಮೂವರು ಮಕ್ಕಳಿದ್ದು, ಈ ಕುಟುಂಬ ಕೆ.ಜಿ.ಹಳ್ಳಿಯಲ್ಲಿ ನೆಲೆಸಿದೆ. ಫಿರ್ಯಾದಿಯ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ಹಲವು ದಿನಗಳಿಂದ ಅವರಿಗೆ ಶಿವಾಜಿನಗರದ ಎಚ್‌ಬಿಎಸ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ವಯಸ್ಸಾದ ಪತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ಮಹಿಳೆ ಮೇಲೆ ಕಣ್ಣು ಹಾಕಿದ ಇಮ್ರಾನ್, ತನ್ನ ಜತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವಂತೆ ಒತ್ತಾಯಿಸಿದ್ದ. ಅದಕ್ಕೆ ಒಪ್ಪದಿದ್ದಾಗ, ‘ನಾನು ಹೇಳಿದಂತೆ ಕೇಳದಿದ್ದರೆ, ನಿನ್ನ ಮಗಳಿಗೆ ತೊಂದರೆ ಕೊಡುತ್ತೇನೆ’ ಎಂದು ಬೆದರಿಸಿದ್ದ. ಇದಕ್ಕೆ ಹೆದರಿ ಮಹಿಳೆ ಆತನ ಮಾತಿನಂತೆಯೇ ನಡೆದುಕೊಂಡಿದ್ದರು ಎನ್ನಲಾಗಿದೆ.

ಇಮ್ರಾನ್‌ಗೆ ಈಗಾಗಲೇ ಸೀಮಾಖಾನ್‌ ಜತೆ ವಿವಾಹವಾಗಿದೆ ಎಂಬ ವಿಚಾರವನ್ನು ಇತ್ತೀಚೆಗೆ ತಿಳಿದ ಫಿರ್ಯಾದಿ ಮಹಿಳೆ, ‘ನಿನಗೂ ಪತ್ನಿ ಇದ್ದಾಳಲ್ಲ. ಆಕೆ ಜತೆ ಸಂಸಾರ ಮಾಡಿಕೊಂಡು ಚೆನ್ನಾಗಿರು. ಸುಮ್ಮನೆ ನಮಗೆ ತೊಂದರೆ ಕೊಡಬೇಡ’ ಎಂದು ಮನವಿ ಮಾಡಿದ್ದರು. ಅದಕ್ಕೆ ಆತ ಒಪ್ಪಿರಲಿಲ್ಲ. ಸೆ.16ರ ಸಂಜೆ ಮಹಿಳೆಯನ್ನು ಆಸ್ಪತ್ರೆ ಬಳಿ ಅಡ್ಡಗಟ್ಟಿದ್ದ ಆರೋಪಿ, ತನ್ನೊಟ್ಟಿಗೆ ಬರುವಂತೆ ಪೀಡಿಸಿದ್ದ. ಅವರು ನಿರಾಕರಿಸಿದಾಗ ಮನಸೋಇಚ್ಛೆ ಹಲ್ಲೆ ನಡೆಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

**

ಬೆದರಿಸಿ ಹಣ ಕಿತ್ತ ಸೀಮಾ

‘ಅನೈತಿಕ ಸಂಬಂಧದ ವಿಚಾರ ತಿಳಿದುಕೊಂಡ ಸೀಮಾ, ‘ನಿನ್ನ ಬೆತ್ತಲೆ ಫೋಟೋ ಹಾಗೂ ವಿಡಿಯೊಗಳು ನನ್ನ ಗಂಡನ ಬಳಿ ಇವೆ. ಹಣ ಕೊಡದಿದ್ದರೆ ಅವುಗಳನ್ನು ಫೇಸ್‌ಬುಕ್‌ಗೆ ಹಾಕಿ ಮಾನ ಹರಾಜು ಮಾಡುತ್ತೇನೆ’ ಎಂದು ಬೆದರಿಸಿದ್ದಳು. ಗೌರವಕ್ಕೆ ಅಂಜಿದ ಮಹಿಳೆ ₹ 8 ಲಕ್ಷ ನಗದು ಹಾಗೂ ಚಿನ್ನಾಭರಣಗಳನ್ನು ಕೊಟ್ಟಿದ್ದರು. ಆ ನಂತರವೂ ಹಣಕ್ಕಾಗಿ ಪೀಡಿಸಿದ್ದರಿಂದ ಠಾಣೆ ಮೆಟ್ಟಿಲೇರಿದ್ದರು ಎಂದು ಶಿವಾಜಿನಗರ ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT