ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣಕ್ಕೆ ‘ವೇಗದ ಮೆಟ್ರೊ‘; 2026ರಲ್ಲಿ ಆರಂಭವಾಗಲಿರುವ ರೈಲು

ನೀಲಿ ಮಾರ್ಗ
Published 22 ಏಪ್ರಿಲ್ 2024, 22:05 IST
Last Updated 22 ಏಪ್ರಿಲ್ 2024, 22:05 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲಿರುವ ನಮ್ಮ ಮೆಟ್ರೊ ‘ನೀಲಿ’ ಮಾರ್ಗದಲ್ಲಿ ಓಡಾಡುವ ರೈಲು, ಉಳಿದ ಮಾರ್ಗಗಳಿಗಿಂತ ವೇಗವಾಗಿ ಚಲಿಸಲಿದೆ. ಇದರಿಂದ ಪ್ರಯಾಣಿಕರ ಸಮಯ ಉಳಿತಾಯವಾಗಲಿದೆ.

ಪ್ರಸ್ತುತ ನಮ್ಮ ಮೆಟ್ರೊದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ರೈಲುಗಳು ಗಂಟೆಗೆ 34 ಕಿ.ಮೀ. ವೇಗದಲ್ಲಿ ಚಲಿಸುತ್ತಿವೆ. ಈ ವರ್ಷದ ಅಂತ್ಯದೊಳಗೆ ಆರಂಭ ಗೊಳ್ಳಲಿರುವ ಹಳದಿ ಮಾರ್ಗ ಮತ್ತು ಮುಂದಿನ ವರ್ಷ ಆರಂಭಗೊಳ್ಳಲಿರುವ ಗುಲಾಬಿ ಮಾರ್ಗದಲ್ಲಿ ಸಂಚರಿಸಲಿರುವ ಮೆಟ್ರೊಗಳ ‘ಸರಾಸರಿ ವಾಣಿಜ್ಯ ವೇಗ’(ಆವರೇಜ್‌ ಕರ್ಮಿಷಿಯಲ್ ಸ್ಪೀಡ್) ಗಂಟೆಗೆ 34 ಕಿ.ಮೀ. ಇರಲಿದೆ. 2026ರಲ್ಲಿ ಆರಂಭಗೊಳ್ಳಲಿರುವ ನೀಲಿ ಮಾರ್ಗದಲ್ಲಿ ಮಾತ್ರ ಸರಾಸರಿ ವಾಣಿಜ್ಯ ವೇಗ ಗಂಟೆಗೆ 50 ಕಿ.ಮೀ. ಇರುವಂತೆ ಯೋಜನೆ ರೂಪಿಸಲಾಗಿದೆ.

ಅತಿ ಹೆಚ್ಚು ವಾಹನದಟ್ಟಣೆಯ ಪ್ರದೇಶ ಗಳಲ್ಲಿ ಒಂದಾಗಿರುವ ಹೊರ ವರ್ತುಲ ರಸ್ತೆಯ (ಒಆರ್‌ಆರ್‌) ದಟ್ಟಣೆ ಕಡಿಮೆ ಮಾಡುವಲ್ಲಿಯೂ ‘ನೀಲಿ’ ಮಾರ್ಗ ಪ್ರಮುಖ ಪಾತ್ರ ವಹಿಸಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ರೇಷ್ಮೆ ಮಂಡಳಿಯಿಂದ (ಸಿಎಸ್‌ಬಿ) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ (ಕೆಐಎ) ನೀಲಿ ಮಾರ್ಗವನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಸಿಎಸ್‌ಬಿಯಿಂದ ಕೆ.ಆರ್‌.ಪುರವರೆಗಿನ ಮೊದಲ ಹಂತದ (2ಎ) ಕಾಮಗಾರಿ 2021ರಲ್ಲಿ ಆರಂಭ ಗೊಂಡಿದ್ದರೆ, ಕೆ.ಆರ್‌.ಪುರದಿಂದ ಕೆಐಎ ವರೆಗಿನ ಎರಡನೇ ಹಂತ (2ಬಿ) 2022ರಲ್ಲಿ ಶುರುವಾಗಿದೆ. ಮೊದಲ ಹಂತದಲ್ಲಿ ಮೆಟ್ರೊ ನಿಲ್ದಾಣಗಳ ನಡುವಿನ ಅಂತರ ಕಡಿಮೆ ಇರುವುದರಿಂದ, ಭಾರಿ ವೇಗದಲ್ಲಿ ಮೆಟ್ರೊ ರೈಲು ಸಂಚರಿಸುವುದು ಕಷ್ಟ. ಆದರೂ ಈಗಿರುವ ಮೆಟ್ರೊ ರೈಲುಗಳ ವೇಗಕ್ಕಿಂತ ಹೆಚ್ಚು ಇರಲಿದೆ.

ಎರಡನೇ ಹಂತದಲ್ಲಿ ನಿಲ್ದಾಣಗಳ ನಡುವಿನ ಅಂತರ ಹೆಚ್ಚಿರುವುದರಿಂದ ಗಂಟೆಗೆ 70 ಕಿ.ಮೀ. ವೇಗದವರೆಗೂ ಚಲಿಸುವ ಸಾಧ್ಯತೆ ಇದೆ. ಎರಡೂ ಹಂತಗಳು ಸೇರಿದರೆ ಗಂಟೆಗೆ ಸರಾಸರಿ ವೇಗ 50 ಕಿ.ಮೀ. ಇರಲಿದೆ ಎಂದು ಬಿಎಂಆರ್‌ಸಿಎಲ್‌ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಎರಡು ಹಂತಗಳು ಸೇರಿ 58.19 ಕಿ.ಮೀ. ಉದ್ದದ ಮಾರ್ಗ ಇದಾಗಿದ್ದು, 32 ನಿಲ್ದಾಣಗಳಿವೆ. ಅದರಲ್ಲಿ ಕೇಂದ್ರ ರೇಷ್ಮೆ ಮಂಡಳಿಯಿಂದ ಹೆಬ್ಬಾಳದ ವರೆಗಿನ 29 ಕಿ.ಮೀ. ವ್ಯಾಪ್ತಿಯಲ್ಲಿ 22 ಮೆಟ್ರೊ ನಿಲ್ದಾಣಗಳಿದ್ದರೆ, ಅಲ್ಲಿಂದ ವಿಮಾನ ನಿಲ್ದಾಣದವರೆಗೆ 29 ಕಿ.ಮೀ. ವ್ಯಾಪ್ತಿಯಲ್ಲಿ ಕೇವಲ 10 ಮೆಟ್ರೊ ನಿಲ್ದಾಣಗಳು ಇರಲಿವೆ. ಈ ವ್ಯಾಪ್ತಿಯಲ್ಲಿಯೇ ರೈಲು ‘ಎಕ್ಸ್‌ಪ್ರೆಸ್‌’ ವೇಗದಲ್ಲಿ ಚಲಿಸಲಿದೆ ಎಂದು ಅವರು ವಿವರಿಸಿದರು. 

ನೀಲಿ ಮಾರ್ಗವು ಕೇಂದ್ರ ರೇಷ್ಮೆ ಮಂಡಳಿಯಲ್ಲಿ ಹಳದಿ ಮಾರ್ಗವನ್ನು, ಕೃಷ್ಣರಾಜಪುರದಲ್ಲಿ (ಕೆ.ಆರ್‌.ಪುರ) ನೇರೆಳೆ ಮಾರ್ಗವನ್ನು, ನಾಗವಾರದಲ್ಲಿ ಗುಲಾಬಿ ಮಾರ್ಗವನ್ನು ಸಂಧಿಸುವುದರಿಂದ ಬೇರೆ ಬೇರೆ ಕಡೆಗಳಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೂ ಉಪಯೋಗವಾಗಲಿದೆ. ಅಲ್ಲದೇ ಪ್ರಸ್ತಾವನೆ ಹಂತದಲ್ಲಿರುವ ‘ಕೆಂಪು’ ಮತ್ತು ‘ಕಿತ್ತಳೆ’ ಮಾರ್ಗಗಳು ಕೂಡ ನೀಲಿ ಮಾರ್ಗವನ್ನು ಸಂಧಿಸಲಿವೆ.

ಹೊರವರ್ತುಲ ರಸ್ತೆಯಲ್ಲಿ ಮಾರತ್‌ಹಳ್ಳಿ–ಬೆಳ್ಳಂದೂರು ನಡುವೆ ಸಾವಿರಕ್ಕೂ ಹೆಚ್ಚು ಕಂಪನಿಗಳಿವೆ. ಪ್ರತಿ ಕಂಪನಿಯಲ್ಲಿ ಸಾವಿರಾರು ಉದ್ಯೋಗಿಗಳಿದ್ದಾರೆ. ಈ ರಸ್ತೆಯಲ್ಲಿ ಸದಾ ವಾಹನದಟ್ಟಣೆ ಹೆಚ್ಚಿರುತ್ತದೆ. ಇಲ್ಲಿಂದ ವಿಮಾನ ನಿಲ್ದಾಣಕ್ಕೆ ಹೋಗಬೇಕಿದ್ದರೆ ಅರ್ಧ ದಿನ ರಜೆ ಹಾಕಿಯೇ ಹೊರಡಬೇಕು. ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭಗೊಂಡರೆ ದಟ್ಟಣೆ ಕಡಿಮೆಯಾಗಲಿದೆ. ಆದರೆ, ಎರಡು ವರ್ಷಗಳಿಂದ ಇಲ್ಲಿನ ಮೆಟ್ರೊ ಕಾಮಗಾರಿ ಬಹಳ ನಿಧಾನವಾಗಿ ನಡೆಯುತ್ತಿದೆ. ಕಾಮಗಾರಿಗೆ ವೇಗ ನೀಡಿ ಬೇಗ ಪೂರ್ಣಗೊಳಿಸಬೇಕು.
ಸೃಜನ್ ಪಿ., ಖಾಸಗಿ ಕಂಪನಿ ಉದ್ಯೋಗಿ

ನೀಲಿ ಮಾರ್ಗದ ನಿಲ್ದಾಣಗಳು

ಕೇಂದ್ರ ರೇಷ್ಮೆ ಮಂಡಳಿ, ಎಚ್‌ಎಸ್‌ಆರ್‌ ಬಡಾವಣೆ, ಅಗರ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬೀಸನಹಳ್ಳಿ, ಮಾರತ್‌ಹಳ್ಳಿ, ಇಸ್ರೊ, ದೊಡ್ದನೆಕ್ಕುಂದಿ, ಡಿಆರ್‌ಡಿಒ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌, ಸರಸ್ವತಿ ನಗರ, ಕೃಷ್ಣರಾಜಪುರ, ಕಸ್ತೂರಿನಗರ, ಹೊರಮಾವು, ಎಚ್‌ಆರ್‌ಬಿಆರ್‌ ಬಡಾವಣೆ, ಕಲ್ಯಾಣ ನಗರ, ಎಚ್‌ಬಿಆರ್ ಬಡಾವಣೆ, ನಾಗವಾರ, ವೀರಣ್ಣಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್‌, ಜಕ್ಕೂರು ಪ್ಲಾಂಟೇಶನ್‌, ಯಲಹಂಕ, ಬಾಗಲೂರು ಕ್ರಾಸ್, ಬೆಟ್ಟಹಲಸೂರು, ಚಿಕ್ಕಜಾಲ, ದೊಡ್ಡಜಾಲ, ವಿಮಾನ ನಿಲ್ದಾಣ ನಗರ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT