ಭಾನುವಾರ, ಮೇ 22, 2022
21 °C

ಫಾಸ್ಟ್ಯಾಗ್ ಕಡ್ಡಾಯ: ದುಪ್ಪಟ್ಟು ಶುಲ್ಕ ಪಾವತಿಸಲು ಹಿಂದೇಟು, ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲ್ಲ ಟೋಲ್ ಗೇಟ್‌ಗಳಲ್ಲಿ ಸೋಮವಾರ ಮಧ್ಯ ರಾತ್ರಿಯಿಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗಿದ್ದು, ಫಾಸ್ಟ್ಯಾಗ್ ಇಲ್ಲದ ವಾಹನಗಳಿಂದ ದುಪ್ಪಟ್ಟು ಶುಲ್ಕ ಸಂಗ್ರಹಿಸಲಾಗುತ್ತಿದೆ.

ನಗರದ ಹೊರವಲಯದಲ್ಲಿ‌ ತುಮಕೂರು ರಸ್ತೆಯಲ್ಲಿರುವ ಟೋಲ್‌ನಲ್ಲಿ ನಗದು ಕೌಂಟರ್ ಎದುರೇ ಹೆಚ್ಚು ವಾಹನಗಳು ಇವೆ. ಇಲ್ಲಿಗೆ ಬರುವ ವಾಹನಗಳ ಚಾಲಕರು, ದುಪ್ಪಟ್ಟು ದಂಡ ಪಾವತಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಚಾಲಕರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆಯುತ್ತಿದೆ.

‘ಫಾಸ್ಟ್ಯಾಗ್ ವ್ಯವಸ್ಥೆಯೇ ಸರಿ ಇಲ್ಲ. ಸಾಕಷ್ಟು ಸಮಸ್ಯೆಗಳು ಇವೆ. ಅದನ್ನು ಸರಿಪಡಿಸುವ ಬದಲು ಫಾಸ್ಟ್ಯಾಗ್ ಕಡ್ಡಾಯ ಮಾಡಿರುವುದು ಸರಿಯಲ್ಲ’ ಎಂದು ಚಾಲಕರು ಹೇಳುತ್ತಿದ್ದಾರೆ.

ಟೋಲ್‌ನಲ್ಲಿ ಒಂದು ಗೇಟ್ ಹೊರತುಪಡಿಸಿ ಎಲ್ಲ ಗೇಟ್‌ಗಳಲ್ಲಿ ಫಾಸ್ಟ್ಯಾಗ್ ಸ್ಟಿಕರ್ ಇರುವ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ‌. ಆದರೆ, ಆ ಗೇಟ್‌ಗಳಲ್ಲಿ ವಾಹನಗಳ ಸಂಖ್ಯೆ ತೀರಾ ಕಡಿಮೆ ಇದೆ. ನಗದು ಸ್ವೀಕಾರಕ್ಕೆ ಅವಕಾಶವಿರುವ ಗೇಟ್‌ನಲ್ಲೇ ಹೆಚ್ಚು ವಾಹನಗಳು ಸಾಲುಗಟ್ಟಿ ನಿಂತಿವೆ.

ವಾಹನ ಗೇಟ್ ಬಳಿ ಬರುತ್ತಿದ್ದಂತೆ ಚಾಲಕರ ಬಳಿ ಟೋಲ್ ಸಿಬ್ಬಂದಿ ದುಪ್ಪಟ್ಟು ಶುಲ್ಕ ಕೇಳುತ್ತಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿರುವ ಚಾಲಕರು, ಶುಲ್ಕ ಪಾವತಿಸಲು ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಚಾಲಕರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದು ಗಲಾಟೆ ಆಗುತ್ತಿದೆ‌.

ಕೆಲ ಚಾಲಕರು ವಾಹನಗಳನ್ನು ಗೇಟ್‌ನಲ್ಲೇ ನಿಲ್ಲಿಸಿ ಹೋಗುತ್ತಿದ್ದು, ವಾಹನಗಳ ದಟ್ಟಣೆಯೂ ಉಂಟಾಗುತ್ತಿದೆ. ದುಪ್ಪಟ್ಟು ಶುಲ್ಕ‌ ಸಂಗ್ರಹಿಸಲೆಂದೇ ಇಂದು ಹೆಚ್ಚುವರಿ ಸಿಬ್ಬಂದಿಯನ್ನು ಸ್ಥಳದಲ್ಲಿ ಕೆಲಸಕ್ಕೆ ನಿಯೋಜಿಸಲಾಗಿದೆ.

ಟೋಲ್ ಬಳಿಯೇ ಮಳಿಗೆ: ಫಾಸ್ಟ್ಯಾಗ್ ಅಳವಡಿಸಿಕೊಳ್ಳದ ಚಾಲಕರಿಗೆ, ಫಾಸ್ಟ್ಯಾಗ್ ಪಡೆದುಕೊಳ್ಳಲು ಅನುಕೂಲವಾಗುವಂತೆ ಟೋಲ್ ಬಳಿಯೇ‌ ಮಳಿಗೆ ತೆರೆಯಲಾಗಿದೆ. ಅಲ್ಲಿಯೂ ಸರದಿಯಲ್ಲಿ ‌ನಿಂತು ಚಾಲಕರು, ಫಾಸ್ಟ್ಯಾಗ್ ಸ್ಟಿಕರ್ ಪಡೆಯುತ್ತಿದ್ದಾರೆ.

ಇದನ್ನೂ ಓದಿ...IND vs ENG: ಅಕ್ಷರ್‌–ಅಶ್ವಿನ್‌ ಸ್ಪಿನ್ ಮೋಡಿ, ಭಾರತಕ್ಕೆ 317 ರನ್‌ ಜಯ


ತುಮಕೂರು ರಸ್ತೆಯಲ್ಲಿರುವ ಟೋಲ್‌ನಲ್ಲಿ ಸಾಲುಗಟ್ಟಿ ನಿಂತಿರುವ ‌ವಾಹನಗಳು

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು