ಶುಕ್ರವಾರ, ಆಗಸ್ಟ್ 12, 2022
27 °C
ಡ್ರಗ್ ಜಾಲದ ತನಿಖೆ ಮುಂದುವರಿಕೆ | ವಿರೇನ್ ಖನ್ನಾ ಜೊತೆ ಆದಿತ್ಯ ಆಳ್ವ ಒಡನಾಟ

ಡ್ರಗ್: ಗ್ರಾಹಕರ ಸೆಳೆಯಲು ತಾರೆಯರ ’ನೆರವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ ಪೆಡ್ಲರ್‌ಗಳು ಹಾಗೂ ಉಪ ಪೆಡ್ಲರ್‌ಗಳು ಸೇರಿಕೊಂಡು ಆಯೋಜಿಸಿದ್ದ ಪಾರ್ಟಿಗಳಲ್ಲಿ ಗ್ರಾಹಕರನ್ನು ಸೆಳೆಯಲು ಸಿನಿ ತಾರೆಯರನ್ನು ಬಳಸಿಕೊಳ್ಳಲಾಗುತ್ತಿದ್ದ ಸಂಗತಿಯನ್ನು ಆರೋಪಿಗಳೇ ಬಾಯ್ಬಿಟ್ಟಿದ್ದಾರೆ.

ಡ್ರಗ್ ಜಾಲದಲ್ಲಿ ಭಾಗಿಯಾಗಿರುವ ಆರೋಪದಡಿ ಬಂಧಿಸಲಾಗಿರುವ ರವಿಶಂಕರ್, ನಟಿ ರಾಗಿಣಿ ದ್ವಿವೇದಿ, ಉದ್ಯಮಿ ರಾಹುಲ್ ತೋನ್ಸೆ ಹಾಗೂ ದೆಹಲಿಯ ವಿರೇನ್ ಖನ್ನಾ ಪಾರ್ಟಿ ಆಯೋಜನೆ ಬಗ್ಗೆ ಸಿಸಿಬಿಗೆ ಹೇಳಿಕೆ ನೀಡಿದ್ದಾರೆಂದು ಗೊತ್ತಾಗಿದೆ.

ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಸಂಘಟಕನಾಗಿರುವ ವಿರೇನ್ ಖನ್ನಾ, ಡ್ರಗ್ ಪೆಡ್ಲರ್ ಹಾಗೂ ಉಪ ಪೆಡ್ಲರ್‌ಗಳ ಮೂಲಕ ಪಾರ್ಟಿಗಳನ್ನು ಆಯೋಜಿಸುತ್ತಿದ್ದ. ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನ ಕೆಲ ಸಿನಿ ತಾರೆಯರನ್ನು ಪಾರ್ಟಿಗೆ ಆಹ್ವಾನಿಸುತ್ತಿದ್ದ. ತಾರೆಯರು ಬರುವ ಬಗ್ಗೆ ಹಾಗೂ ಅವರು ಎಲ್ಲರ ಜೊತೆಯೇ ಬೆರೆತು ನೃತ್ಯ ಮಾಡುವ ಬಗ್ಗೆ ಪ್ರಚಾರ ಸಹ ಮಾಡುತ್ತಿದ್ದ.

ತಾರೆಯರು ಅದರಲ್ಲೂ ನಟಿಯರು ಬರುತ್ತಾರೆಂದು ತಿಳಿದ ಗ್ರಾಹಕರು, ಪಾರ್ಟಿಗಳಿಗೆ ಬರುತ್ತಿದ್ದರು. ನಗರದ ಹೊರವಲಯದ ಹೋಟೆಲ್‌ಗಳು, ಫಾರ್ಮ್‌ಹೌಸ್‌ಗಳು ಸೇರಿದಂತೆ ಹಲವೆಡೆ ಇಂಥ ಪಾರ್ಟಿಗಳು ನಡೆಯುತ್ತಿದ್ದವು. ಉದ್ಯಮಿಗಳು, ಗಣ್ಯ ವ್ಯಕ್ತಿಗಳು, ಗಣ್ಯರ ಮಕ್ಕಳು ಪಾರ್ಟಿಗೆ ಬರುತ್ತಿದ್ದರು. ಅವರ ಜೊತೆಯಲ್ಲೇ ಕೆಲ ಸಿನಿ ತಾರೆಯರು ಸಹ ಡ್ರಗ್ ನಶೆ ಏರಿಸಿಕೊಳ್ಳುತ್ತಿದ್ದರು.

ಪಾರ್ಟಿಗೆ ಬರುವ ಗ್ರಾಹಕರಿಗೆ ಆರಂಭದಲ್ಲಿ ರಿಯಾಯಿತಿ ದರದಲ್ಲಿ ಹಾಗೂ ಉಚಿತವಾಗಿ ಡ್ರಗ್ ನೀಡಲಾಗುತ್ತಿತ್ತು. ಒಮ್ಮೆ ಡ್ರಗ್ ತೆಗೆದುಕೊಂಡ ಗ್ರಾಹಕ, ನಂತರದ ದಿನಗಳಲ್ಲಿ ನಿರಂತರವಾಗಿ ಪಾರ್ಟಿಗಳಿಗೆ ಬರಲಾರಂಭಿಸುತ್ತಿದ್ದ. ಪ್ರತಿ ಪಾರ್ಟಿಯಲ್ಲೂ 30ರಿಂದ 50 ಮಂದಿ ಇರುತ್ತಿದ್ದರು. ಕೋಡ್‌ ವರ್ಡ್‌ಗಳ ಮೂಲಕವೇ ಪಾರ್ಟಿಗಳಿಗೆ ಪ್ರವೇಶ ನೀಡಲಾಗುತ್ತಿತ್ತು. ಲಾಕ್‌ಡೌನ್ ಸಮಯದಲ್ಲಿ ಕಾಯಂ ಗ್ರಾಹಕರಿಗೆ ಮನೆಗೇ ಡ್ರಗ್ ಪೂರೈಕೆ ಮಾಡಿದ್ದ ಮಾಹಿತಿಯೂ ಸಿಸಿಬಿಗೆ ಸಿಕ್ಕಿದೆ.

ವಿರೇನ್ ಜೊತೆ ಆದಿತ್ಯ ಒಡನಾಟ; ಕಾರ್ಯಕ್ರಮ ಸಂಘಟನೆ ಮೂಲಕವೇ ದಿನಕ್ಕೆ ಲಕ್ಷಾಂತರ ರೂಪಾಯಿ ದುಡಿಯುತ್ತಿದ್ದ ವಿರೇನ್ ಖನ್ನಾ, ದೆಹಲಿಯಲ್ಲಿ ಕಚೇರಿ ಹೊಂದಿದ್ದಾನೆ. ಲಾಕ್‌ಡೌನ್‌ಗೂ ಮುನ್ನ ಹಾಗೂ ನಂತರವೂ ಆತ ಪಾರ್ಟಿಗಳನ್ನು ಆಯೋಜಿಸಿದ್ದ ಮಾಹಿತಿ ಸಿಸಿಬಿಗೆ ಸಿಕ್ಕಿದೆ.

ಕರ್ನಾಟಕದಲ್ಲೂ ಕಾರ್ಯಕ್ರಮ ಸಂಘಟಿಸಲು ಯೋಚಿಸಿದ್ದ ವಿರೇನ್, ಸ್ಥಳೀಯ ವ್ಯಕ್ತಿಗಳನ್ನು ಬಳಸಿಕೊಂಡು ತಂಡ ಕಟ್ಟಿದ್ದ. ಪಾರ್ಟಿಯೊಂದರಲ್ಲಿ ಪರಿಚಯವಾಗಿದ್ದ ಆದಿತ್ಯ ಆಳ್ವ, ವಿರೇನ್ ಜೊತೆ ಒಡನಾಟ ಬೆಳೆಸಿಕೊಂಡಿದ್ದ. ನಂತರವೇ ನಟಿ ರಾಗಿಣಿ, ರವಿಶಂಕರ್, ರಾಹುಲ್ ಹಾಗೂ ಇತರೆ ಆರೋಪಿಗಳು ಪಾರ್ಟಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದರು. ಆಫ್ರಿಕಾ ಪ್ರಜೆ ಲೋಮ್ ಪೆಪ್ಪರ್ ಸಾಂಬಾ ಹಾಗೂ ಆತನ ಸಹಚರರು ಪಾರ್ಟಿಗಳಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ.

ರಾಗಿಣಿ ಅವರೂ ಪಾರ್ಟಿಯ ಆಕರ್ಷಣೆ ಆಗಿದ್ದರು. ಪಾರ್ಟಿಯಲ್ಲಿ ಪ್ರತಿಯೊಬ್ಬರ ಜೊತೆಯಲ್ಲೂ ಸಲುಗೆಯಿಂದ ವರ್ತಿಸುತ್ತಿದ್ದರು. ಅದರಿಂದಾಗಿಯೇ ಗ್ರಾಹಕರ ಸಂಖ್ಯೆಯೂ ಕ್ರಮೇಣ ಹೆಚ್ಚಿತ್ತು. ಇಂಥ ಪಾರ್ಟಿಗಳಿಂದಲೇ ಆರೋಪಿಗಳು ಕೋಟ್ಯಂತರ ರೂಪಾಯಿ ಗಳಿಸಲಾರಂಭಿಸಿದ್ದರು ಎಂದು ತಿಳಿದುಬಂದಿದೆ.

ರವಿಶಂಕರ್ ವಿರುದ್ಧ ಪ್ರತ್ಯೇಕ ಪ್ರಕರಣ

‘ಡ್ರಗ್ ಜಾಲ ಸಂಬಂಧ ಬಿ.ಕೆ. ರವಿಶಂಕರ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಆತ ನೀಡಿದ್ದ ಮಾಹಿತಿ ಆಧರಿಸಿ ಕಾಟನ್‌ಪೇಟೆ ಠಾಣೆಯಲ್ಲಿ ಎರಡನೇ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಸಿಸಿಬಿಯ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

‘ಡ್ರಗ್ ಜಾಲದ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಇದು ಗಂಭೀರ ಪ್ರಕರಣ. ಎಲ್ಲ ಮಾಹಿತಿಯನ್ನು ಸದ್ಯಕ್ಕೆ ಬಹಿರಂಗಪಡಿಸಲಾಗದು’ ಎಂದೂ ಅವರು ಹೇಳಿದರು.

ರಾಗಿಣಿ ಮನೆಯಲ್ಲಿ ಡ್ರಗ್; ವರದಿ ಬಂದ ನಂತರ ಪ್ರತಿಕ್ರಿಯೆ

ನಟಿ ರಾಗಿಣಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದ ವೇಳೆ ಗಾಂಜಾ ತುಂಬಿದ್ದ ಸಿಗರೇಟ್‌ ಸೇರಿದಂತೆ ವಿವಿಧ ಪ್ರಕಾರ ಡ್ರಗ್ ಸಿಕ್ಕಿರುವುದಾಗಿ ಹೇಳಲಾಗುತ್ತಿದ್ದು, ಅದನ್ನು ಪೊಲೀಸರು ಖಚಿತಪಡಿಸಿಲ್ಲ

ಈ ಬಗ್ಗೆ ಪ್ರತಿಕ್ರಿಯಿಸಿದ ಸಂದೀಪ್ ಪಾಟೀಲ. ‘ಮನೆಯಲ್ಲಿ ಮಹತ್ವದ ವಸ್ತುಗಳೇ ಸಿಕ್ಕಿವೆ. ಅವುಗಳ ಬಗ್ಗೆ ಸದ್ಯಕ್ಕೆ ಏನು ಹೇಳಲಾಗದು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರ ಪ್ರತಿಕ್ರಿಯಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು