ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ದೀಪಾವಳಿ: ಪಟಾಕಿ ಗಾಯಕ್ಕೆ 24 ಗಂಟೆಯೂ ಸೇವೆ

ಹಸಿರು ಪಟಾಕಿಯಿಂದಲೂ ಕಣ್ಣಿಗೆ ಹಾನಿ ಸಾಧ್ಯತೆ– ಮುನ್ನೆಚ್ಚರಿಕೆ ವಹಿಸಲು ವೈದ್ಯರಿಂದ ಸೂಚನೆ
Published 10 ನವೆಂಬರ್ 2023, 14:54 IST
Last Updated 10 ನವೆಂಬರ್ 2023, 14:54 IST
ಅಕ್ಷರ ಗಾತ್ರ

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಅವಘಡಗಳು ಸಂಭವಿಸಿದಲ್ಲಿ ಕಣ್ಣಿಗೆ ಹಾನಿಯಾಗುವುದನ್ನು ತಪ್ಪಿಸಲು ನಗರದ ಕಣ್ಣಿನ ಆಸ್ಪತ್ರೆಗಳು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಹಬ್ಬದ ದಿನಗಳಲ್ಲಿ 24x7 ಸೇವೆ ನೀಡಲು ಸಜ್ಜಾಗಿವೆ.

ಮಿಂಟೊ, ನಾರಾಯಣ ನೇತ್ರಾಲಯ, ನೇತ್ರಧಾಮ, ಶಂಕರ, ಡಾ. ಅಗರವಾಲ್ ಸೇರಿ ವಿವಿಧ ಕಣ್ಣಿನ ಆಸ್ಪತ್ರೆಗಳು ಚಿಕಿತ್ಸೆಗೆ ಬೇಕಾದ ಔಷಧಗಳನ್ನು ದಾಸ್ತಾನು ಮಾಡಿಕೊಂಡಿವೆ. ಅದೇ ರೀತಿ, ಪ್ರತ್ಯೇಕ ಹಾಸಿಗೆ ವ್ಯವಸ್ಥೆಯನ್ನು ಮಿಂಟೊ, ನಾರಾಯಣ ನೇತ್ರಾಲಯ ಸೇರಿ ಕೆಲ ಆಸ್ಪತ್ರೆಗಳಲ್ಲಿ ಮಾಡಲಾಗಿದೆ. 

‘ಪಟಾಕಿ ಸಿಡಿತದಿಂದ ಕಣ್ಣಿಗೆ ಹಾನಿಯಾಗುವ ಜತೆಗೆ ಸುಟ್ಟಗಾಯಗಳಾಗುವ ಸಾಧ್ಯತೆಗಳಿರುತ್ತವೆ. ಪಟಾಕಿಯ ಜೋರಾದ ಶಬ್ದದಿಂದ ಶ್ರವಣ ಸಮಸ್ಯೆ ಕೂಡ ಉಂಟಾಗುತ್ತದೆ. ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಹೊಗೆಯಿಂದ ಉಸಿರಾಟದ (ಆಸ್ತಮಾ) ಹಾಗೂ ಚರ್ಮದ ತೊಂದರೆಗಳು ಕಾಣಿಸಿಕೊಳ್ಳಲಿವೆ. ಪಟಾಕಿಗಳನ್ನು ಹಚ್ಚಲೇಬೇಕು ಎಂದಾದಲ್ಲಿ ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಿ’ ಎಂದು ನಗರದ ನೇತ್ರ ವೈದ್ಯರು ಮನವಿ ಮಾಡಿದ್ದಾರೆ. 

‘ಹಸಿರು ಪಟಾಕಿಗಳಲ್ಲಿ ರಾಸಾಯನಿಕಗಳ ಬಳಕೆ ಪ್ರಮಾಣ ಶೇ 50ರಷ್ಟು ಕಡಿಮೆ ಇರುತ್ತದೆ. ಹೆಚ್ಚು ಹಾನಿ ಮಾಡುವ ಬೇರಿಯಂ ಮತ್ತು ಲಿಥಿಯಂ ಹೊರತುಪಡಿಸಿ ಇತರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದರಿಂದ ಮಾಲಿನ್ಯ ಪ್ರಮಾಣ ಕಡಿಮೆಯಾದರೂ, ಸ್ಫೋಟ ಮತ್ತು ಶಬ್ದದ ತೀವ್ರತೆ ಸಾಮಾನ್ಯ ಪಟಾಕಿಗಳಂತೆ ಇರುತ್ತದೆ’ ಎಂದು ಹೇಳಿದ್ದಾರೆ.

35 ಹಾಸಿಗೆ ವ್ಯವಸ್ಥೆ: ‘ಹಬ್ಬದ ಸಮಯದಲ್ಲಿ ಚಿಕಿತ್ಸೆಗೆ ಬೇಕಾದ ಔಷಧವನ್ನು ದಾಸ್ತಾನು ಮಾಡಿಕೊಂಡು, ಶಸ್ತ್ರಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ವಿಶೇಷ ತಜ್ಞರನ್ನು ಒಳಗೊಂಡ ವೈದ್ಯ ತಂಡವು ಸಮಯಾನುಸಾರ ಸೇವೆ ನೀಡಲು ಸಿದ್ಧವಾಗಿದೆ. ಒಟ್ಟು 35 ಹಾಸಿಗೆಗಳನ್ನು ಪಟಾಕಿಗಳಿಂದ ಗಾಯಗಳಾದವರಿಗಾಗಿ ಮೀಸಲಿಡಲಾಗಿದೆ. ಇವುಗಳಲ್ಲಿ ತಲಾ 10 ಪುರುಷರು ಹಾಗೂ ಮಹಿಳೆಯರಿಗೆ ಮತ್ತು 15 ಹಾಸಿಗೆಗಳು ಮಕ್ಕಳಿಗೆ ಬಳಸಿಕೊಳ್ಳಲಾಗುತ್ತದೆ’ ಎಂದು ಮಿಂಟೊ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜು ಜಿ. ತಿಳಿಸಿದರು. 

ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆಯ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥೆ ಡಾ.ಬಿಂದಿಯಾ ಹಪಾನಿ, ‘ಪಟಾಕಿಗಳನ್ನು ಸಿಡಿಸುವವರು ಮಾತ್ರವಲ್ಲದೆ, ನೋಡುಗರಿಗೂ ಅಪಾಯವಿರುತ್ತದೆ. ಗಾಯಕ್ಕೆ ಒಳಗಾಗುವವರಲ್ಲಿ ಶೇ 50ಕ್ಕೂ ಹೆಚ್ಚು ಜನರು ನೋಡುಗರೇ ಆಗಿರುತ್ತಾರೆ. ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸ್ವಚ್ಛವಾದ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆದುಕೊಳ್ಳಬಾರದು. ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ, ತುರ್ತು ಚಿಕಿತ್ಸೆ ಪಡೆಯಬೇಕು’ ಎಂದು ಹೇಳಿದರು 

‘ಕಡಿಮೆ ತೀವ್ರತೆಯ ಪಟಾಕಿಗಳೆಂದು ಗುರುತಿಸಿರುವ ನಕ್ಷತ್ರಕಡ್ಡಿ, ಭೂಚಕ್ರ ಇನ್ನಿತರವುಗಳೇ ಹೆಚ್ಚು ಅಪಾಯಕಾರಿ. ಇವುಗಳೂ ಸಿಡಿಯುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಕ್ಕಳಿಗೆ ಆದಷ್ಟು ದೂರದಿಂದಲೇ ಬೆಂಕಿ ಹಚ್ಚುವ ಅವಕಾಶ ನೀಡುವುದು ಉತ್ತಮ’ ಎಂದರು.

ವೈದ್ಯರು ನೀಡಿದ ಸಲಹೆಗಳು:

  • ಪಟಾಕಿ ಖರೀದಿಸಲೇಬೇಕಾದಲ್ಲಿ ಐಎಸ್ಐ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ.

  • ಪಟಾಕಿಗಳ ಮೇಲಿರುವ ಎಚ್ಚರಿಕೆ ಸೂಚನೆ ಅನುಸರಿಸಿ.

  • ಕನಿಷ್ಠ 2-3 ಅಡಿ ದೂರದಿಂದ ಪಟಾಕಿ ಹಚ್ಚಿ.

  • ಪಟಾಕಿ ಹಚ್ಚಲು ಉದ್ದನೆಯ ಕೋಲು ಬಳಸಿ.

  • ಮೈದಾನ ಖಾಲಿ ಜಾಗಗಳಲ್ಲಷ್ಟೇ ಪಟಾಕಿ ಹಚ್ಚಿ.

  • ಬೆಂಕಿ ಹಾಗೂ ಥಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ.

  • ಪಟಾಕಿ ಸುಡುವುದಕ್ಕೆ ಗಾಜಿನ ಬಾಟಲಿಗಳನ್ನು ಬಳಸಬೇಡಿ. ಇದರಿಂದ ಸಿಡಿಯುವ ಚೂರುಗಳು ಕಣ್ಣಿಗೆ ಹಾನಿ ಮಾಡಬಹುದು.

  • ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ. ಜತೆಯಲ್ಲಿ ಪಾಲಕರು ಇರಲಿ‌.

  • ಪಟಾಕಿ ಸಿಡಿದಾಗ ಕಿಡಿ ಬಿದ್ದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ.

  • ಅರೆಬರೆ ಸುಟ್ಟ ಪಟಾಕಿ ತುಣುಕನ್ನು ಗಾಳಿಯಲ್ಲಿ ಎಸೆಯಬೇಡಿ.

  • ಕೈಯಲ್ಲೇ ಪಟಾಕಿ ಸಿಡಿಸುವ ಸಾಹಸ ಬೇಡ.

  • ಅರೆಬರೆ ಸುಟ್ಟ ಪಟಾಕಿಯನ್ನು ಕೈಯಿಂದ ಹೊಸಕಿ ನಂದಿಸಲು ಯತ್ನಿಸಬೇಡಿ

ವಿಕ್ಟೋರಿಯಾದಲ್ಲಿ ಸುಟ್ಟಗಾಯಕ್ಕೆ ಚಿಕಿತ್ಸೆ:

ಪಟಾಕಿ ಅವಘಡದಿಂದ ಸಂಭವಿಸುವ ಸುಟ್ಟ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮಹಾಬೋಧಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಈ ಕೇಂದ್ರಕ್ಕೆ ಅಗತ್ಯ ವೈದ್ಯರು ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು ದಿನದ 24 ಗಂಟೆಯೂ ಇಲ್ಲಿ ವೈದ್ಯಕೀಯ ಸೇವೆ ಲಭ್ಯವಿರಲಿದೆ. ಕೇಂದ್ರದಲ್ಲಿ 54 ಹಾಸಿಗೆಗಳಿವೆ. 

ಸಹಾಯವಾಣಿಗಳು: 

ಮಿಂಟೊ ಆಸ್ಪತ್ರೆ: 9481740137 ಅಥವಾ 08026707176

ನಾರಾಯಣ ನೇತ್ರಾಲಯ: ರಾಜಾಜಿನಗರ ಶಾಖೆ- 080 66121641/1643 ಅಥವಾ 9902546046 

ನಾರಾಯಣ ನೇತ್ರಾಲಯ ಎನ್‌ಎಚ್ ಹೆಲ್ತ್‌ ಸಿಟಿ ಬೊಮ್ಮಸಂದ್ರ: 080 66660655 ಅಥವಾ 9902821128

ಶಂಕರ ಕಣ್ಣಿನ ಆಸ್ಪತ್ರೆ: (ಮಾರತಹಳ್ಳಿ) 080 69038900 ಅಥವಾ 9739270477

ರೈನ್‌ಬೋ ಮಕ್ಕಳ ಆಸ್ಪತ್ರೆ: (ಬನ್ನೇರುಘಟ್ಟ) 9355400341 ಮಾರತಹಳ್ಳಿ ಶಾಖೆ 9355400340 ಹೆಬ್ಬಾಳ ಶಾಖೆ 9355400342

ಜಯನಗರದ ನೇತ್ರಧಾಮ: 080 26088000 ಅಥವಾ 9448071816 ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ: ಬನ್ನೇರುಘಟ್ಟ ಶಾಖೆ 08048193419 ರಾಜರಾಜೇಶ್ವರಿ ನಗರ ಶಾಖೆ 918048193501

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT