ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಬಂದಂತೆ ಥಳಿಸಲು ಪೊಲೀಸರಿಗೆ ಅಧಿಕಾರ ಕೊಟ್ಟವರಾರು: ನಾಗರಿಕರ ಪ್ರಶ್ನೆ

ಲಾಠಿ ಪ್ರಹಾರ ವಿರುದ್ಧ ಕಟ್ಟೆಯೊಡೆದ ಆಕ್ರೋಶ
Last Updated 10 ಮೇ 2021, 21:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸೋಮವಾರ ಲಾಕ್‌ಡೌನ್‌ ನಿರ್ಬಂಧಗಳ ಹೆಸರಿನಲ್ಲಿ ನಾಗರಿಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪೊಲೀಸರ ಅಮಾನವೀಯ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ಬೆಳಿಗ್ಗೆ 10ರಿಂದ ಲಾಕ್‌ಡೌನ್‌ ಜಾರಿಯಾಗಲಿದೆ ಎಂದು ಸರ್ಕಾರ ಹೇಳಿದ್ದರೂ, ಬೆಳಿಗ್ಗೆ 7ರಿಂದಲೇ ಪೊಲೀಸರು ಬೀದಿಗೆ ಇಳಿದಿದ್ದರು. ಅನಗತ್ಯವಾಗಿ ವಾಹನಗಳಲ್ಲಿ ಸಂಚರಿಸುತ್ತಿರುವವರನ್ನು ಹೊಡೆಯುವ ಭರದಲ್ಲಿ ಅಮಾಯಕರೂ ಏಟು ತಿನ್ನುವಂತಾಯಿತು.

‘ನಾನು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುವವನು. ಸರಿಯಾಗಿ ಸಂಬಳ ಸಿಗುತ್ತಿಲ್ಲ. ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡು ಬರಬೇಕು. ಬ್ಯಾಂಕ್ ತೆರೆಯುವುದೇ 10 ಗಂಟೆ ಮೇಲೆ. ನಾನು ಯಾವ ಪಾಸ್ ತೋರಿಸಬೇಕು. ಹೊರಗೆ ಹೋಗಿದ್ದಕ್ಕೆ ಪೊಲೀಸರು ಲಾಠಿಯಿಂದ ಹೊಡೆದರು’ ಎಂದು ಪೀಣ್ಯದ ರವಿ ದೂರಿದರು.

‘ಮಹಿಳಾ ಪೊಲೀಸ್‌ ಒಬ್ಬರು ಕೆನ್ನೆಗೆ ಹೊಡೆದರು. ವಿನಾಕಾರಣ ಈ ರೀತಿ ಹೊಡೆಸಿಕೊಳ್ಳಲು ನಾವೇನು ತಪ್ಪು ಮಾಡಿದ್ದೇವೆ’ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಎಟಿಎಂ ಕಾರ್ಡ್‌ ಎಲ್ಲ ನಮ್ಮ ಬಳಿ ಇಲ್ಲ. ಬ್ಯಾಂಕ್‌ಗೆ ಹೋಗಿಯೇ ಹಣ ತೆಗೆದುಕೊಳ್ಳಬೇಕು. ಕುವೆಂಪು ನಗರದಲ್ಲಿ ವಾಸವಿದ್ದೇನೆ. ಬ್ಯಾಂಕ್ ಖಾತೆ ಇರುವುದು ಜಾಲಹಳ್ಳಿಯ ಎಸ್‌ಬಿಐ ಶಾಖೆಯಲ್ಲಿ. ನಾಲ್ಕು ಕಿ.ಮೀ. ನಡೆದುಕೊಂಡೇ ಹೋದೆ. ಪೊಲೀಸರು ಬ್ಯಾಂಕಿಗೆ ಹೋಗಲೂ ಅವಕಾಶ ನೀಡಲಿಲ್ಲ’ ಎಂದು ಜಾಲಹಳ್ಳಿಯ ಹನುಮಕ್ಕ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರವೇ ಆಹಾರ ಕೊಟ್ಟಿದ್ದರೆ ನಾವೇಕೆ ಹೊರಗೆ ಹೋಗುತ್ತಿದ್ದೆವು. ಪಡಿತರ ಕೊಟ್ಟು, ಬಿಪಿಎಲ್‌ ಕುಟುಂಬಕ್ಕೆ ಎರಡು ಸಾವಿರ ರೂಪಾಯಿ ಆದರೂ ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು. ಅದ್ಯಾವುದನ್ನೂ ಮಾಡದೆ ಲಾಕ್‌ಡೌನ್ ಮಾತ್ರ ಮಾಡುತ್ತಾರೆ. ಮನೆಯಲ್ಲಿ ನಾವು, ಮಕ್ಕಳು ಉಪವಾಸವಿರಬೇಕೇ’ ಎಂದೂ ಅವರು ಪ್ರಶ್ನಿಸಿದರು.

‘ಬೀದಿ ಬದಿ ವ್ಯಾಪಾರಿಗಳು, ಹಣ್ಣು–ತರಕಾರಿ ವರ್ತಕರ ಮೇಲೆಯೂ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಈ ರೀತಿ ದೌರ್ಜನ್ಯ ನಡೆಯುತ್ತಿದ್ದರೆ ವ್ಯಾಪಾರ ಮಾಡುವುದು ಹೇಗೆ ? ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಮತಿ ಇದೆ. ಆದರೆ, ವ್ಯಾಪಾರಿಗಳು ಹೊರಗೆ ಓಡಾಡಿದರೆ, ತರಕಾರಿ ಖರೀದಿಸಲು ಹೋದರೂ ಲಾಠಿಯಿಂದ ಹೊಡೆಯಲಾಗುತ್ತಿದೆ’ ಎಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಅಧ್ಯಕ್ಷ ರಂಗಸ್ವಾಮಿ ದೂರಿದರು.

ಪ್ರಭಾವಿಗಳಿಗೆ ‘ವಿನಾಯಿತಿ’: ಪ್ರಮುಖ ರಸ್ತೆಗಳಲ್ಲಿ ಪೊಲೀಸ್‌ ‘ರೌದ್ರಾವತಾರ’ದ ದೃಶ್ಯ ಸಾಮಾನ್ಯವಾಗಿತ್ತು. ‘ಬೈಕ್‌ ಸವಾರರ ಮೇಲೆ ಮನಬಂದಂತೆ ಲಾಠಿ ಬೀಸುವ ಪೊಲೀಸರು, ಪ್ರಭಾವಿಗಳು ಬಂದರೆ ಅಥವಾ ಯಾರಾದರೂ ಐಷಾರಾಮಿ ಕಾರಿನಲ್ಲಿ ಬಂದರೆ ಹಾಗೆಯೇ ಕಳಿಸಿದರು. ಲಾಕ್‌ಡೌನ್‌ ಮಾರ್ಗಸೂಚಿಯಲ್ಲಿ ಈ ರೀತಿಯ ಅವಕಾಶವೂ ಇದೆಯೇ’ ಎಂದು ಅನೇಕರು ಪ್ರಶ್ನಿಸಿದರು.

ಪ್ರತಿಜ್ಞೆ ಮಾಡಿಸಿಕೊಂಡರು: ನಗರದ ಬಹುತೇಕ ಬಡಾವಣೆಗಳ ಗಲ್ಲಿ–ಗಲ್ಲಿಗಳಲ್ಲಿ ಪೊಲೀಸರು ಗಸ್ತು ತಿರುಗಿದರು. ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಹಲವು ಪೊಲೀಸರು ಮಾತಿನ ಮೂಲಕ ‘ಎಚ್ಚರಿಕೆ’ ನೀಡಿ ಕಳುಹಿಸುತ್ತಿದ್ದರು.

ಆಗ್ನೇಯ ವಿಭಾಗದ ಡಿಸಿಪಿ ಶ್ರೀನಿವಾಸ ಜೋಶಿ, ನಗರದ ಕೃಪಾ ನಿಧಿ ವೃತ್ತದಲ್ಲಿ ಬೈಕ್‌ ಸವಾರರ ಕಡೆಯಿಂದ ಪ್ರತಿಜ್ಞೆ ಮಾಡಿಸಿಕೊಳ್ಳುವ ಮೂಲಕ ವಿಭಿನ್ನವಾಗಿ ಜನರಲ್ಲಿ ಜಾಗೃತಿ ಮೂಡಿಸಿದರು.

‘ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದಿಲ್ಲ, ಅನಗತ್ಯವಾಗಿ ರಸ್ತೆಗೆ ಇಳಿಯುವುದಿಲ್ಲ’ ಎಂದು ಯುವಕರಿಂದ ಪ್ರತಿಜ್ಞೆ ಮಾಡಿಸಿಕೊಂಡು ಬಿಟ್ಟು ಕಳುಹಿಸಿದರು.

ವಾಟಾಳ್ ನಾಗರಾಜ್‌ ಸಾಥ್: ವಾಹನಗಳ ತಪಾಸಣೆ ಮಾಡುತ್ತಿದ್ದ ಪೊಲೀಸರ ಜೊತೆ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಕೂಡ ರಸ್ತೆಗಿಳಿದಿದ್ದರು. ನಗರದ ಮಾಗಡಿ ರಸ್ತೆಯಲ್ಲಿ ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು.

‘ಲಾಕ್‌ಡೌನ್‌ ವೇಳೆಯಲ್ಲಿ ಪೊಲೀಸರು ಕೂಡ ಶಾಂತಿಯುತವಾಗಿ ವರ್ತಿಸಬೇಕು. ಯಾರಿಗೂ ತೊಂದರೆಯಾಗದಂತೆ ಪರಿಸ್ಥಿತಿ ನಿಭಾಯಿಸಬೇಕು’ ಎಂದು ಮನವಿ ಮಾಡಿದರು.

‘8 ಗಂಟೆಗೂ ಬಿಡಲಿಲ್ಲ’
‘ನನ್ನ ತರಕಾರಿ ಮಳಿಗೆ ಇರುವುದು ಇರುವುದು ಬಾಣಸವಾಡಿಯಲ್ಲಿ. ಬೆಳಿಗ್ಗೆ 6 ಗಂಟೆಗೆ ಬಂದು, ಯಶವಂತಪುರದ ಎಪಿಎಂಸಿ ಯಾರ್ಡ್‌ನಿಂದ ತರಕಾರಿ ಖರೀದಿಸಿ ವಾಪಸ್ ಹೋಗುತ್ತಿದ್ದೆ. 8.30ರ ವೇಳೆಗೇ ಪೊಲೀಸರು ಗಾಡಿ ಹಿಡಿದರು. ತರಕಾರಿ ವ್ಯಾಪಾರಿ ಎಂದರೂ ಬಿಡಲಿಲ್ಲ’ ಎಂದು ವರ್ತಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಯಶವಂತಪುರದಿಂದ ಬಾಣಸವಾಡಿಗೆ ಹೋಗುವುದರೊಳಗೆ 10 ಪೊಲೀಸ್ ಠಾಣೆಗಳು ಬರುತ್ತವೆ. ಹೀಗೆ ಒಂದೊಂದು ಠಾಣೆಯವರು ಒಮ್ಮೊಮ್ಮೆ ಹಿಡಿದು, ಹೊಡೆಯುತ್ತಾ ಇದ್ದರೆ ನಮ್ಮ ಗತಿ ಏನು’ ಎಂದು ಅವರು ಕಣ್ಣೀರು ಹಾಕಿದರು.

‘ಹತ್ತು ಗಂಟೆ ನಂತರ ತರಕಾರಿ ಖರೀದಿಸಲು ಕೂಡ ಯಾರೂ ಹೊರಗೆ ಬರುವುದಿಲ್ಲ. ವಿಳಂಬವಾದರೆ ನಾನು ಖರೀದಿಸಿದ ತರಕಾರಿಗಳೂ ಹಾಳಾಗುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಆಸ್ಪತ್ರೆಗೆ ಹೋಗಬೇಕೆಂದರೂ ಕೇಳಲಿಲ್ಲ’
‘ಮಗಳಿಗೆ ವಾರದ ಹಿಂದೆ ಹಾವು ಕಡಿದಿತ್ತು. ಕಾಲಿಗೆ ಗಾಯ ಆಗಿದೆ. ಅವಳಿಗೆ ಚಿಕಿತ್ಸೆ ಕೊಡಿಸಲು ಓಡಾಡುತ್ತಿದ್ದರೆ ಪೊಲೀಸರು ಬೆತ್ತದಿಂದ ಹೊಡೆದರು’ ಎಂದು ವ್ಯಕ್ತಿಯೊಬ್ಬರು ದೂರಿದರು.

‘ಷರೀಫ್‌ ನಗರದಲ್ಲಿ ಮಗಳಿಗೆ ಹಾವು ಕಡಿದಿತ್ತು. ಇಂದಿರಾನಗರ ಆಸ್ಪತ್ರೆಗೆ ಹೋಗಬೇಕಾಗಿತ್ತು. ದುಡ್ಡು ಖಾಲಿ ಆಗಿದ್ದಕ್ಕೆ ಶ್ರೀನಿವಾಸಪುರಕ್ಕೆ ಹೋಗಿ ಸಂಬಂಧಿಕರಿಂದ ಹಣ ತೆಗೆದುಕೊಂಡು ಬಂದೆ. ಎಲ್ಲವನ್ನು ದಾಖಲೆ ಸಮೇತ ಹೇಳಿದರೂ ಕೇಳಲಿಲ್ಲ. ಪಾಸ್‌ ಆದರೂ ಕೊಡಿಸಿ ಎಂದರೆ ಠಾಣೆಗೆ ಹೋಗಿ ಎನ್ನುತ್ತಾರೆ. ಹೊಡೆಯುವುದೇ ಪೊಲೀಸರ ಮುಖ್ಯ ಉದ್ದೇಶ ಆಗಿದೆ’ ಎಂದು ದೂರಿದರು.

ಮಾನವ ಹಕ್ಕುಗಳ ಆಯೋಗಕ್ಕೆ ದೂರು
ಲಾಕ್‌ಡೌನ್‌ ವೇಳೆ ಪೊಲೀಸ್ ದೌರ್ಜನ್ಯದ ವಿರುದ್ಧ ವಕೀಲೆ ಸುಧಾ ಕಾಟವಾ ಅವರು ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

‘ನಾಗರಿಕರ ಮೇಲೆ ಪೊಲೀಸರು ಮನಬಂದಂತೆ ದಾಳಿ ನಡೆಸುತ್ತಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದೂ ಅವರು ದೂರಿನಲ್ಲಿ ಹೇಳಿದ್ದಾರೆ.

‘ಪೊಲೀಸರು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೇ ವಿನಾ ಹೀಗೆ ಮನ ಬಂದಂತೆ ಥಳಿಸುವ ಅಧಿಕಾರ ಅವರಿಗೆ ಇಲ್ಲ. ಅಗತ್ಯ ವಸ್ತುಗಳನ್ನು ಖರೀದಿಸಲು, ವೈದ್ಯಕೀಯ ತುರ್ತು ಸೇವೆಗಳಿಗೆ ಹೊರಗಡೆ ಓಡಾಡಬಹುದು ಎಂದು ಸರ್ಕಾರವೇ ಹೇಳಿದೆ. ತುರ್ತು ಕಾರ್ಯಗಳ ನಿಮಿತ್ತ ಓಡಾಡುತ್ತಿರುವವರ ಮೇಲೂ ಲಾಠಿ ಬೀಸಿರುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

‘ಈ ಕುರಿತು ಎಲ್ಲ ಪೊಲೀಸ್ ಸಿಬ್ಬಂದಿಗೆ ತಿಳಿವಳಿಕೆ ಹೇಳಬೇಕು. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತರಕಾರಿ ಖರೀದಿಗೆ ಮುಗಿಬಿದ್ದ ಜನ
10 ಗಂಟೆಯ ನಂತರ ಸಮಸ್ಯೆಯಾಗುತ್ತದೆ ಎಂದುಕೊಂಡು ಬೆಳಿಗ್ಗೆ ಆರು ಗಂಟೆಗೇ ಹೊರಬಂದಿದ್ದ ಬಂದಿದ್ದ ಜನ, ತರಕಾರಿ ಖರೀದಿಗೆ ಮುಗಿಬಿದ್ದರು.

ವ್ಯಾಪಾರಿಗಳು ರಸ್ತೆಬದಿ, ಪಾದಚಾರಿ ಮಾರ್ಗಗಳಲ್ಲಿ ತಳ್ಳುವ ಗಾಡಿಗಳಲ್ಲಿ ತರಕಾರಿಗಳ ರಾಶಿ ಹಾಕಿ ಮಾರಾಟ ಮಾಡಿದರು. ಗ್ರಾಹಕರು ಗುಂಪು ಗುಂಪಾಗಿ ಖರೀದಿಗೆ ಮುಂದಾದ ಪರಿಣಾಮ ಅಂತರ ಕಾಪಾಡಲು ಸಾಧ್ಯವಾಗಲೇ ಇಲ್ಲ.

ಕಿರಾಣಿ ಅಂಗಡಿ-ಸೂಪರ್ ಮಾರ್ಕೆಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕಂಡು ಬಂದರು. ಕೆಲ ಸೂಪರ್ ಮಾರ್ಕೆಟ್‌ಗಳ ಎದುರು ಅಂತರ ಕಾಯ್ದುಕೊಳ್ಳಲು ಬಾಕ್ಸ್ ಗುರುತು ಮಾಡಿದ್ದರಿಂದ ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಅಗತ್ಯವಸ್ತಗಳನ್ನು ಖರೀದಿಸಿದರು.

ಮದ್ಯ-ಮಾಂಸದಂಗಡಿ ಎದುರೂ ಉದ್ದದ ಸಾಲು
ನಗರದ ಮದ್ಯ ಹಾಗೂ ಮಾಂಸ ಮಾರಾಟ ಅಂಗಡಿಗಳ ಎದುರು ಗ್ರಾಹಕರ ದೊಡ್ಡ ದಂಡೇ ನೆರೆದಿತ್ತು. ಬೆಳಗ್ಗೆ 10 ಗಂಟೆ ಬಳಿಕ ಓಡಾಡಿದರೆ ಪೊಲೀಸರು ಅಡ್ಡಿಪಡಿಸುವ ಆತಂಕದಲ್ಲಿ ಬೆಳಿಗ್ಗೆಯೇ ಮದ್ಯಪ್ರಿಯರು ಮದ್ಯದಂಗಡಿಗಳ ಎದುರು ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು. ಮಾಂಸ ಮಾರಾಟ ಅಂಗಡಿಗಳ ಎದುರು ಇದೇ ಮಾದರಿಯ ಗ್ರಾಹಕರ ಸಾಲು ಕಂಡು ಬಂದಿತು.

ಪೊಲೀಸರ ದೌಜರ್ನ್ಯಕ್ಕೆ ಆಕ್ರೋಶ

ಮಾನವ ಹಕ್ಕುಗಳ ಉಲ್ಲಂಘನೆ
ಆಸ್ಪತ್ರೆಗೆ, ಔಷಧ ಅಂಗಡಿಗೆ, ಕುಡಿಯುವ ನೀರಿನ ಘಟಕಗಳಿಗೆ ಹೋಗಲು ವಾಹನಗಳನ್ನು ಬಳಸಬೇಕಾದ ಅನಿವಾರ್ಯತೆ ಇದೆ. ನಡೆದುಕೊಂಡು ಬನ್ನಿ ಎಂದು ಹೇಳುವುದು ನಿರ್ದಯವಾದ ಕ್ರಮ. ವಾಹನಗಳನ್ನು ಜಪ್ತಿ ಮಾಡುವುದು ದುಂಡಾವರ್ತಿ ಕ್ರಮ. ಲಭ್ಯವಿರುವ ಎಲ್ಲ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಇದಾಗಿದೆ. ಈ ರೀತಿಯ ಕ್ರಮಗಳನ್ನು ಟಿ.ವಿ ಮಾಧ್ಯಮಗಳು ವಿಜೃಂಭಿಸುತ್ತಿವೆ. ಇದು ಕೂಡ ಮಾನವ ಹಕ್ಕುಗಳ ಉಲ್ಲಂಘನೆ. ಲಾಠಿ ಏಟಿನಿಂದ ನಾಗರಿಕರನ್ನು ಬೆದರಿಸಿ ಕೊರೊನಾ ಹಿಮ್ಮೆಟ್ಟಿಸುತ್ತೇವೆ ಎಂಬುದು ಸರ್ಕಾರದ ಮೌಢ್ಯ. ಪೊಲೀಸ್ ದೌರ್ಜನ್ಯ ಮತ್ತು ಕುಮ್ಮಕ್ಕನ್ನು ಸಾಕ್ಷಿ ಸಮೇತ ಕಲೆಹಾಕಿ ಹೊಣೆಗಾರರನ್ನಾಗಿ ಮಾಡಬೇಕು.
–ಕೆ.ಬಿ.ಕೆ. ಸ್ವಾಮಿ, ಹೈಕೋರ್ಟ್ ವಕೀಲ

**
ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರವಿಲ್ಲ
ಕೋವಿಡ್‌ ಕಾರಣದಿಂದ ಜನ ಮೊದಲೇ ಕಷ್ಟದಲ್ಲಿದ್ದಾರೆ. ಅವರಲ್ಲಿ ಇನ್ನಷ್ಟು ಭಯ ಹುಟ್ಟಿಸುವ ಕೆಲಸವನ್ನು ಯಾರೂ ಮಾಡಬಾರದು. ನಾಗರಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಕುರಿತು ಪೊಲೀಸರಿಗೆ ಪಾಠ ಮಾಡುವ ಅಗತ್ಯವಿದೆ. ಪೊಲೀಸರು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ನಾಗರಿಕರ ಮೇಲೆ ಮನಬಂದಂತೆ ಲಾಠಿ ಬೀಸಲು ಯಾವ ಕಾನೂನಿನಲ್ಲೂ ಅವಕಾಶ ಇಲ್ಲ. ಯಾವ ಕೋರ್ಟ್‌ಗಳೂ ಒಪ್ಪುವುದಿಲ್ಲ. ಎಲ್ಲರೂ ಅನಗತ್ಯವಾಗಿಯೇ ರಸ್ತೆಗೆ ಇಳಿಯುತ್ತಾರೆ ಎಂಬುದು ಸುಳ್ಳು. ಬಹುತೇಕರು ವೈದ್ಯಕೀಯ ಕಾರಣಗಳಿಗಾಗಿಯೇ ರಸ್ತೆಗೆ ಇಳಿದಿರುತ್ತಾರೆ. ಅದನ್ನು ಸರ್ಕಾರ ಮತ್ತು ಪೊಲೀಸರು ಅರ್ಥ ಮಾಡಿಕೊಳ್ಳಬೇಕು.
–ಮಂಜುನಾಥ್, ಉದ್ಯಮಿ, ಬಿಟಿಎಂ ಲೇಔಟ್

**
ಪೊಲೀಸರೇ ತೊಂದರೆ ಕೊಡಬಾರದು
ಔಷಧಿ ಚೀಟಿ ತೋರಿಸಿದರೂ ಮೆಡಿಕಲ್ ಶಾಪ್‌ಗೆ ಹೋಗಲು ಅವಕಾಶ ನೀಡುತ್ತಿಲ್ಲ. 6ರಿಂದ 10ರ ತನಕ ಇರುವ ಅವಕಾಶದ ಅವಧಿಯಲ್ಲೂ ಜನರಿಗೆ ತೊಂದರೆ ನೀಡಲಾಗುತ್ತಿದೆ. ಆಸ್ಪತ್ರೆ ಅಥವಾ ಮೆಡಿಕಲ್ ಶಾಪ್‌ಗೆ ಹೋಗುವವರು ನಡೆದುಕೊಂಡೇ ಹೋಗಬೇಕು ಎಂದರೆ ಹೇಗೆ ಸಾಧ್ಯ. ಕಿಲೋಮೀಟರ್‌ಗಟ್ಟಲೆ ನಡೆದು ಹೋಗಲು ಆಗುವುದಿಲ್ಲ. ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮತ್ತು ಅಂತರ ಕಾಪಾಡುವುದು ಮುಖ್ಯ. ಅದು ಪಾಲನೆಯಾಗುವಂತೆ ನೋಡಿಕೊಳ್ಳುವುದು ಮುಖ್ಯ.
–ಟಿ.ಎಲ್.ಕಿರಣ್‌ಕುಮಾರ್, ಹೈಕೋರ್ಟ್ ವಕೀಲ

**
ಅಮಾನವೀಯ ವರ್ತನೆ
ಸರ್ಕಾರ ವಿನಾಯಿತಿ ನೀಡಿದ್ದರೂ ಕೃಷಿ ಚಟುವಟಿಕೆಗೆ ತೆರಳುವ ಜನರಿಗೂ ಪೊಲೀಸರು ಅಡ್ಡಗಟ್ಟಿ ಹಲ್ಲೆ ನಡೆಸುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳು ಇಲ್ಲದ ಕಡೆ ಜನರಿಂದ ಸುಲಿಗೆಯನ್ನೂ ಮಾಡುತ್ತಿದ್ದಾರೆ. ಈ ರೀತಿಯ ವರ್ತನೆಗಳಿಂದಲೇ ಜನ ಪೊಲೀಸರಿಗೆ ಬೆಲೆ ಕೊಡದ ಸ್ಥಿತಿ ನಿರ್ಮಾಣವಾಗುತ್ತಿದೆ. ಪೊಲೀಸರು ಸಂಯಮದಿಂದ ವರ್ತಿಸುವುದನ್ನು ಇನ್ನು ಮುಂದೆಯಾದರೂ ರೂಢಿಸಿಕೊಳ್ಳಬೇಕು.
–ಸಿ.ಎನ್. ದೀಪಕ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರಧಾನ ಕಾರ್ಯದರ್ಶಿ

**
ಜನರೇನು ಹಸಿವಿನಿಂದ ಸಾಯಬೇಕೇ?
ಸರ್ಕಾರದ ಮಾರ್ಗಸೂಚಿಯೇ ಅವೈಜ್ಞಾನಿಕ ಮತ್ತು ಜನವಿರೋಧಿ ಕ್ರಮಗಳನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ. ಮನೆ ಮನೆಗೆ ಆಹಾರದ ಕಿಟ್‌ ನೀಡಿ ಕೇರಳದಲ್ಲಿ ಲಾಕ್‌ಡೌನ್ ಮಾಡಲಾಗಿತ್ತು. ಯಾವುದೇ ಪೂರ್ವತಯಾರಿ ಇಲ್ಲದ ಲಾಕ್‌ಡೌನ್ ಮಾಡಲಾಗಿದೆ. ಜನರೇ ಅಗತ್ಯ ವಸ್ತು ಖರೀದಿಸಲು ಹೋದರೆ ಪೊಲೀಸರು ಲಾಠಿ ಬೀಸುತ್ತಿದ್ದಾರೆ. ಜನರೇನು ಹಸಿವಿನಿಂದ ಸಾಯಬೇಕೇ, ಈ ಅಮಾನವೀಯ ವರ್ತನೆಯನ್ನು ನಿಲ್ಲಿಸಲು ಪೊಲೀಸರಿಗೆ ಸರ್ಕಾರ ಸೂಚನೆ ನೀಡಬೇಕು. ಇಲ್ಲದಿದ್ದರೆ ಜನರೇ ಪೊಲೀಸರ ವಿರುದ್ಧ ತಿರುಗಿ ಬೀಳುತ್ತಾರೆ
–ಕೆ.ಮಹಂತೇಶ್, ಸಿಐಟಿಯು ರಾಜ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT