ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯ ಆಯುಕ್ತರೇ ಆದೇಶಿಸಿದರೂ ತೆರವಾಗಿಲ್ಲ ಫ್ಲೆಕ್ಸ್‌

Last Updated 25 ಫೆಬ್ರುವರಿ 2022, 1:25 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್‌ಗಳನ್ನು ಮುಲಾಜಿಲ್ಲದೇ ತೆರವುಗೊಳಿಸುವಂತೆ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಎಲ್ಲ ವಲಯಗಳ ಮುಖ್ಯ ಎಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ 25 ದಿನಗಳೇ ಕಳೆದಿವೆ. ಆದರೆ, ಈಗಲೂ ನಗರದ ಬಹುತೇಕ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌ಗಳು ತೆರವಾಗಿಲ್ಲ.

ಬಿಬಿಎಂಪಿಯ 2018ರ ಹೊರಾಂಗಣ ಸೈನೇಜ್‌ ಮತ್ತು ಸಾರ್ವಜನಿಕ ಸಂದೇಶ ನೀತಿಗೆ ಅನುಗುಣವಾಗಿ ರೂಪಿಸಿರುವ ಬೈ–ಲಾ 2020ರ ಏ.1ರಿಂದ ಜಾರಿಗೆ ಬಂದಿದೆ. ಇದರ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಫ್ಲೆಕ್ಸ್, ಪೋಸ್ಟರ್‌, ಬಂಟಿಂಗ್‌ಗಳನ್ನು ಅನಧಿಕೃತವಾಗಿ ಅಳವಡಿಸಲು ಅವಕಾಶ ಇಲ್ಲ.

‘2018ರ ಬಿಬಿಎಂಪಿ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶಗಳ ಬೈಲಾಗಳ ಪ್ರಕಾರ, ಅಂಗಡಿ ಮುಂಗಟ್ಟುಗಳ ಜಾಹೀರಾತುಗಳು, ವಾಹನಗಳಲ್ಲಿನ ಸ್ವ–ಜಾಹೀರಾತುಗಳು ಹಾಗೂ ಇತರ ಸಣ್ಣಪುಟ್ಟ ಜಾಹೀರಾತುಗಳನ್ನು ಸೀಮಿತ ಅವಧಿಗೆ ಹಾಗೂ ಸೀಮಿತ ಅಳತೆಯಲ್ಲಿ ( ಖಾಸಗಿ ಸಹಭಾಗಿತ್ವದ ಸರ್ಕಾರಿ ಯೋಜನೆಗಳು ಸೇರಿ) ಅಳವಡಿಸುವುದಕ್ಕೆ ಮಾತ್ರ ಅನುಮತಿ ನೀಡಲಾಗುತ್ತದೆ. ಇವುಗಳನ್ನು ಹೊರತುಪಡಿಸಿ, ಬಿಬಿಎಂಪಿ ವ್ಯಾಪ್ತಿಯ ಯಾವುದೇ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ ಅನಧಿಕೃತವಾಗಿ ಜಾಹೀರಾತು ಫಲಕಗಳು, ಶುಭಾಶಯ ಕೋರುವ ಜಾಹೀರಾತುಗಳು, ಸಭೆ ಸಮಾರಂಭಗಳ ಜಾಹೀರಾತುಗಳು, ಎಲ್ಇಡಿ ಜಾಹೀರಾತುಗಳು, ಸೈಕಲ್ ಜಾಹೀರಾತುಗಳು, ವಾಹನ ಜಾಹೀರಾತುಗಳು ಮತ್ತು ಫ್ಲೆಕ್ಸ್, ಬ್ಯಾನರ್‌ಗಳು, ಬಂಟಿಂಗ್ಸ್, ಬಾವುಟಗಳು ಮೊದಲಾದ ಮುದ್ರಿತ ಜಾಹೀರಾತುಗಳನ್ನು ಅಳವಡಿಸುವುದನ್ನು ನಿಷೇಧಿಸಲಾಗಿದೆ. ಅವುಗಳನ್ನು ತೆರವುಗೊಳಿಸಬೇಕು’ ಎಂದು ಮುಖ್ಯ ಆಯುಕ್ತರು 2022ರ ಫೆ. 1ರಂದು ಸೂಚನೆ ನೀಡಿದ್ದರು.

ಮುಖ್ಯ ಆಯುಕ್ತರು ಸೂಚನೆ ನೀಡಿದ ಬಳಿಕ ಪಾಲಿಕೆಯ ಎಲ್ಲ 8 ವಲಯಗಳಲ್ಲಿ ಮುಖ್ಯ ಎಂಜಿನಿಯರ್ ನೇತೃತ್ವದ ತಂಡಗಳು ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳ ತೆರವು ಕಾರ್ಯಾಚರಣೆಯನ್ನು ನಡೆಸಿದ್ದವು. ರಸ್ತೆ ಬದಿಯ ವಿದ್ಯುತ್ ಕಂಬಗಳು, ಪಾದಚಾರಿ ಮಾರ್ಗ, ರಾಜಕಾಲುವೆಯ ಬೇಲಿಗಳ ಮೇಲೆ ಅಳವಡಿಸಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದವು. ಆದರೆ, ಈ ಕಾರ್ಯಾಚರಣೆ ಒಂದೆರಡು ದಿನಗಳಿಗೆ ಸೀಮಿತವಾಗಿದೆ. ಬಳಿಕ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿದೆ.

ನಗರದಲ್ಲಿ ಅನಧಿಕೃತವಾಗಿ ಬ್ಯಾನರ್, ಪ್ಲೆಕ್ಸ್, ಪೋಸ್ಟರ್‌, ಬಂಟಿಂಗ್ಸ್ ಅಳವಡಿಸುವವರ ವಿರುದ್ಧ ಪೊಲೀಸ್ ಠಾಣೆಗೆ ‌ದೂರು ನೀಡಿ ಎಫ್ಐಆರ್ ದಾಖಲಿಸುವಂತೆ ಎಲ್ಲ ವಲಯದ ಅಧಿಕಾರಿಗಳಿಗೆ ಮುಖ್ಯ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ತಳ ಹಂತದ ಅಧಿಕಾರಿಗಳು ಈ ಸೂಚನೆಯನ್ನೂ ಪಾಲಿಸಲು ಆಸಕ್ತಿ ತೋರಿಲ್ಲ.

ನಗರದಲ್ಲಿ ಫ್ಲೆಕ್ಸ್‌ ಹಾಗೂ ಅನಧಿಕೃತ ಜಾಹೀರಾತು ಹಾವಳಿ ಕುರಿತು ಸಲ್ಲಿಕೆ ಆಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್‌ 2018ರ ಆಗಸ್ಟ್‌ 01ರಂದು ಸಾರ್ವಜನಿಕ ಸ್ಥಳಗಳಲ್ಲಿರುವ ಅಷ್ಟೂ ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಿದ್ದರು. ಬಿಬಿಎಂಪಿಯ ಎಲ್ಲ ವಿಭಾಗಗಳ ಅಧಿಕಾರಿಗಳು ಬೇರೆಲ್ಲ ಕೆಲಸ ಬಿಟ್ಟು ಬೀದಿ ಬದಿಯ ಹೊರಾಂಗಣ ಜಾಹೀರಾತುಗಳನ್ನು ತೆರವುಗೊಳಿಸಿದ್ದರು. ಸಂಜೆಯಾಗುವಷ್ಟರಲ್ಲಿ ನಗರದಲ್ಲಿದ್ದ ಶೇ 50ರಷ್ಟು ಹೊರಾಂಗಣ ಜಾಹೀರಾತುಗಳು ತೆರವಾಗಿದ್ದವು. ಒಂದೇ ವಾರದಲ್ಲಿ ನಗರದಾದ್ಯಂತ ಹೊರಾಂಗಣ ಜಾಹೀರಾತು ಹಾವಳಿ ಇಲ್ಲ ಎನ್ನುವಷ್ಟು ಕಡಿಮೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT