ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಡೆ ಬಿಚ್ಚಿದ ಹಾವು–ರಂಗುರಂಗಿನ ನವಿಲು

ಲಾಲ್‌ಬಾಗ್‌: ಇಕೆಬಾನ, ಜಾನೂರ್‌ ಕಲೆಗೆ ಮಾರುಹೋದ ಜನರು
Last Updated 10 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಅಲ್ಲಿ, ಬಣ್ಣ ಬಣ್ಣದ ಗರಿ ಧರಿಸಿದ ನವಿಲು ಹಾಗೂ ಹೆಡೆ ಬಿಚ್ಚಿದ ನಾಗರಹಾವು ಜತೆಯಲ್ಲೇ ಇದ್ದವು. ಅದರ ಸನಿಹದಲ್ಲೇ ಗೂಬೆಯೊಂದು ರೆಕ್ಕೆ ಬಿಚ್ಚಿ ಹಾರಲು ಸಜ್ಜಾಗಿತ್ತು. ಹತ್ತಿರ ಹೋಗಿ ನೋಡಿದಾಗಲೇ ತಿಳಿದದ್ದು ಅವು ತರಕಾರಿಯಲ್ಲಿ ಅರಳಿದ ಕಲಾಕೃತಿಗಳೆಂದು!

‘ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ’ದ ಅಂಗವಾಗಿ ಲಾಲ್‌ಬಾಗ್‌ನ ಎಂ.ಎಚ್‌.ಮರೀಗೌಡ ಸ್ಮಾರಕ ಭವನದಲ್ಲಿ ಆಯೋಜಿಸಿರುವ ವಿಶೇಷ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯವಿದು. ಇಕೆಬಾನ, ಪುಷ್ಪ ಭಾರತಿ, ತರಕಾರಿ ಕೆತ್ತನೆ, ಒಣ ಹೂವಿನ ಜೋಡಣೆ, ಥಾಯ್‌ ಆರ್ಟ್‌, ಜಾನೂರ್‌ ಕಲೆ ಹಾಗೂ ಕುಬ್ಜ ಮರಗಳ ಸ್ಪರ್ಧೆ ಹಾಗೂ‍ಪ್ರದರ್ಶನ ಈ ಬಾರಿಯ ಪ್ರದರ್ಶನಕ್ಕೆ ಮತ್ತಷ್ಟು ರಂಗು ತುಂಬಿವೆ.

ಪ್ರದರ್ಶನದಲ್ಲಿ ಮಲ್ಲಿಗೆ ಮೊಗ್ಗಿನ ಹಾರ, ಜಾನೂರ್‌ ಕಲೆಯಲ್ಲಿ ಜಯ ಚಾಮರಾಜ ಒಡೆಯರ್‌ ಭಾವಚಿತ್ರಕ್ಕೆ ಸಿಂಗಾರ ಮಾಡಲಾಗಿತ್ತು.

ತರಕಾರಿಯಲ್ಲಿ ಭಾರತದ ನಕ್ಷೆ, ದೀಪ, ಶಿವಲಿಂಗ, ತಿರಂಗ ಬಾವುಟ ಅರಳಿದ್ದವು. ಇಕೆಬಾನ ಕಲೆಯಲ್ಲಿಚಂದ್ರಯಾನ 2 ಮಾದರಿ ಗಳು, ಜಾನೂರ್ ಕಲೆಯಲ್ಲಿ ನಿಂತಿದ್ದ ವಿಶ್ವಸುಂದರಿಯ ವಸ್ತ್ರ, ಡಚ್‌ ಹೂವಿನ ಜೋಡಣೆಯಲ್ಲಿ ಮೂಡಿದ್ದ ನಾನಾ ಬಗೆಯ ರಂಗೋಲಿಗಳು ಪ್ರೇಕ್ಷಕರನ್ನು ಮುದಗೊಳಿಸುತ್ತಿವೆ.

ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನಕಲಾ ಸಂಘದ ಸಹಯೋಗದಲ್ಲಿ ಆಯೋಜಿಸಿರುವ ಪ್ರದರ್ಶನವನ್ನು ವಿಧಾನ ಪರಿಷತ್‌ ಸದಸ್ಯೆ ತೇಜಸ್ವಿನಿ ರಮೇಶ್‌ ಶನಿವಾರ ಉದ್ಘಾಟಿಸಿದರು.

‘ಹೆಣ್ಣು ಮಕ್ಕಳ ಬಗ್ಗೆ ಸಮಾಜದಲ್ಲಿ ನಿರ್ಲಕ್ಷ್ಯ ಭಾವನೆ ಇದೆ. ಆದರೆ, ಗೃಹಿಣಿಯರು ತಮ್ಮ ಜೀವನಕ್ರಮದ ಜೊತೆಗೆ ಕಲೆ ಹಾಗೂ ಕೌಶಲ ಹೊಂದಿದ್ದಾರೆ ಎಂದು ಸಾಬೀತು ಪಡಿಸಿದ್ದಾರೆ. ತಾವು ಯಾವುದೇ ಶಿಲ್ಪಿಗೂ ಕಡಿಮೆ ಇಲ್ಲ ಎನ್ನುವಂತೆ ತರಕಾರಿಗಳ ಕೆತ್ತನೆ, ಕುಸುರಿ ಕೆತ್ತನೆಗಳನ್ನು ಮಾಡಿದ್ದಾರೆ’ ಎಂದು ತೇಜಸ್ವಿನಿ ಶ್ಲಾಘಿಸಿದರು.

‘ಗೃಹಿಣಿಯರ ಈ ಕ್ರಿಯಾಶೀಲತೆಗೆ ವೃತ್ತಿಯ ರೂಪ ನೀಡಿ ಮಾರುಕಟ್ಟೆ ಕಲ್ಪಿಸಿದರೆ ಅನೇಕ ಉದ್ಯೋಗಗಳು ಸೃಷ್ಟಿಯಾಗುತ್ತದೆ’ ಎಂದರು.‘ಮಕ್ಕಳನ್ನು ಮನೆಯಲ್ಲಿ ಮೊಬೈಲ್‌, ಟಿ.ವಿ ಮುಂದೆ ಕೂಡಿ ಹಾಕುವ ಬದಲುಇಂತಹ ಪ್ರದರ್ಶನಗಳಿಗೆ ಕರೆತರಬೇಕು. ಅವರು ಪ್ರಕೃತಿ ಜೊತೆ ಹೊಂದಿಕೊಳ್ಳುವಂತೆ ಮಾಡಬೇಕು’ ಎಂದು ಪೋಷಕರಿಗೆ ಕಿವಿಮಾತು ಹೇಳಿದರು.

ತರಕಾರಿ ಕೆತ್ತನೆ ಸ್ಪರ್ಧೆಯಲ್ಲಿ 85 ಮಂದಿ, ಇಕೆಬಾನ ಪ್ರದರ್ಶನದಲ್ಲಿ 83, ಥಾಯ್‌ ಕಲೆ 40, ರಂಗೋಲಿ ಸ್ಪರ್ಧೆ 40, ಒಣ ಹೂ ಜೋಡಣೆ 33 ಹಾಗೂ ಜಾನೂರ್‌ ಕಲಾ ಪ್ರದರ್ಶನದಲ್ಲಿ 28 ಕಲಾವಿದರು ಭಾಗವಹಿಸಿದ್ದರು. ಈ ಪ್ರದರ್ಶನ ಭಾನುವಾರವೂ ಮುಂದುವರಿಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT