ಮಂಗಳವಾರ, ಜುಲೈ 27, 2021
24 °C
ಆಹಾರ ನಿಗಮದ ಉಗ್ರಾಣಗಳ ಮೇಲೆ ತನಿಖಾ ದಳದಿಂದ ದಾಳಿ

ಕಾಳಸಂತೆಗೆ ಸಾಗಿಸುತ್ತಿದ್ದ ಪಡಿತರ ರಾಗಿ, ಅಕ್ಕಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಡಿತರ ಚೀಟಿದಾರರಿಗೆ ವಿತರಿಸಲು ಪೂರೈಕೆಯಾಗಿದ್ದ ಆಹಾರ ಧಾನ್ಯಗಳನ್ನು ಯಶವಂತಪುರದಲ್ಲಿರುವ ರಾಜ್ಯ ಆಹಾರ ನಿಗಮದ ಉಗ್ರಾಣಗಳಿಂದಲೇ ಕಾಳಸಂತೆಗೆ ಸಾಗಿಸಲು ಯತ್ನಿಸುತ್ತಿದ್ದವರನ್ನು ಗುರುವಾರ ಪತ್ತೆ ಹಚ್ಚಿರುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ತನಿಖಾ ದಳ, 65 ಚೀಲ ರಾಗಿ, 95 ಕ್ವಿಂಟಲ್‌ ಅಕ್ಕಿ ಮತ್ತು ಮೂರು ಲಾರಿಗಳನ್ನು ವಶಪಡಿಸಿಕೊಂಡಿದೆ.

ಕಾಳಸಂತೆಗೆ ಆಹಾರ ಧಾನ್ಯ ಸಾಗಿಸುತ್ತಿರುವ ಮಾಹಿತಿ ಆಧರಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಕೆ. ರಾಮೇಶ್ವರಪ್ಪ ನೇತೃತ್ವದ ತಂಡ ಗುರುವಾರ ಮಧ್ಯಾಹ್ನ ಯಶವಂತಪುರದಲ್ಲಿರುವ ಉಗ್ರಾಣಗಳ ಮೇಲೆ ದಾಳಿಮಾಡಿ, ತಪಾಸಣೆ ನಡೆಸಿದೆ. ಆಗ ಉಗ್ರಾಣಗಳ ಆವರಣದಿಂದ ತರಾತುರಿಯಲ್ಲಿ ಹೊರಹೋಗುತ್ತಿದ್ದ ಲಾರಿಯೊಂದನ್ನು ಹಿಡಿದು ತಪಾಸಣೆ ನಡೆಸಿದಾಗ, ಬಿಲ್‌ ಇಲ್ಲದ 65 ಚೀಲ ರಾಗಿ ಪತ್ತೆಯಾಗಿದೆ.

‘ರಾಗಿಯನ್ನು ಸಾಗಿಸುತ್ತಿದ್ದ ಕೆಎ–01 ಎಡಿ–3629 ಸಂಖ್ಯೆಯ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಲಾರಿ ಮಾಲೀಕ ಹಾಸನದ ಫಯಾಜ್‌ ಮತ್ತು ಚಾಲಕನ ವಿರುದ್ಧ ಯಶವಂತಪುರ ಎಪಿಎಂಸಿ ಯಾರ್ಡ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಯಾವ ಉಗ್ರಾಣದಿಂದ ರಾಗಿಯನ್ನು ಲಾರಿಗೆ ತುಂಬಿಸಲಾಗಿತ್ತು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಅಕ್ಕಿ ಬಿಟ್ಟು ಪರಾರಿ:

ಇನ್ನೊಂದು ಪ್ರಕರಣದಲ್ಲಿ, ನಗರದ ಹೆಗ್ಗನಹಳ್ಳಿಯ ಚೌಡೇಶ್ವರಿ ನಗರದ ಮಂಜುನಾಥ ನ್ಯಾಯಬೆಲೆ ಅಂಗಡಿ ಹೆಸರಿನಲ್ಲಿ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ 93.45 ಕ್ವಿಂಟಲ್‌ ಅಕ್ಕಿಯನ್ನು ಯಶವಂತಪುರದಲ್ಲಿರುವ ಎನ್‌ಜಿಜಿ–1 ಉಗ್ರಾಣದಲ್ಲಿ ಬಿಲ್‌ ಮಾಡಲಾಗಿತ್ತು. ಆದರೆ, ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಅಕ್ಕಿಯನ್ನು ಸಾಗಿಸಲು ಬಂದವರು ತಪ್ಪಿಸಿಕೊಂಡು ಓಡಿಹೋಗಿದ್ದಾರೆ.

‘ಮಂಜುನಾಥ ನ್ಯಾಯಬೆಲೆ ಅಂಗಡಿ ಮಾಲೀಕನ ಹೆಸರಿನಲ್ಲಿ ಮಂಜುನಾಥ್‌ ಆರ್‌ ಮತ್ತು ಅವರ ಮಗ ಮುನಿರಾಜು ಎಂಬುವವರು ಪಡಿತರ ಅಕ್ಕಿಯನ್ನು ಕಾಳಸಂತೆಗೆ ಕೊಂಡೊಯ್ಯಲು ಯತ್ನಿಸುತ್ತಿದ್ದುದು ಕಂಡುಬಂದಿದೆ. ನ್ಯಾಯಬೆಲೆ ಅಂಗಡಿ ಮಾಲೀಕ ಲಕ್ಷ್ಮೀನಾರಾಯಣ, ಮಂಜುನಾಥ್‌ ಆರ್‌ ಮತ್ತು ಮುನಿರಾಜು ಎಂಬುವವರ ವಿರುದ್ಧ ಪ್ರತ್ಯೇಕ ದೂರು ದಾಖಲಿಸಲಾಗಿದೆ’ ಎಂದು ತನಿಖಾ ತಂಡದ ಮೂಲಗಳು ಹೇಳಿವೆ.

ಯಶವಂತಪುರ ಎಪಿಎಂಸಿ ಯಾರ್ಡ್‌ ಆವರಣದಲ್ಲಿ ರಾಜ್ಯ ಆಹಾರ ನಿಗಮದ ಐದು ಉಗ್ರಾಣಗಳು ಒಂದೇ ಕಡೆ ಇವೆ. ಅಲ್ಲಿ ಕೆಎ–19 ಸಿ–7791 ಮತ್ತು ಕೆಎ–16 ಎ–2978 ಸಂಖ್ಯೆಯ ಎರಡು ಖಾಲಿ ಲಾರಿಗಳು ಕಾರ್ಯಾಚರಣೆ ವೇಳೆ ಪತ್ತೆಯಾಗಿವೆ. ಅಧಿಕೃತವಾಗಿ ಪಡಿತರ ಸಾಗಣೆಗೆ ಸಂಬಂಧ ಪಡದ ಈ ಲಾರಿಗಳನ್ನು ಕಾಳಸಂತೆಗೆ ಆಹಾರ ಧಾನ್ಯ ಸಾಗಿಸಲು ತಂದಿರುವ ಅನುಮಾನ ವ್ಯಕ್ತವಾಗಿದೆ. ಎರಡೂ ಲಾರಿಗಳನ್ನು ರಾಮೇಶ್ವರಪ್ಪ ನೇತೃತ್ವದ ತಂಡ ವಶಕ್ಕೆ ಪಡೆದು, ಪೊಲೀಸರಿಗೆ ಒಪ್ಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು