ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದುಪ್ಪಟ್ಟು ಹಣದ ಆಮಿಷ: ₹4 ಕೋಟಿ ಸುಲಿಗೆ

ಆರ್‌ಬಿಐ, ಇ.ಡಿ ಹೆಸರು ದುರ್ಬಳಕೆ: ಹಲವರಿಗೆ ವಂಚನೆ
Published : 9 ಆಗಸ್ಟ್ 2024, 16:19 IST
Last Updated : 9 ಆಗಸ್ಟ್ 2024, 16:19 IST
ಫಾಲೋ ಮಾಡಿ
Comments

ಬೆಂಗಳೂರು: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(ಆರ್‌ಬಿಐ) ಹಾಗೂ ಜಾರಿ ನಿರ್ದೇಶನಾಲಯದ(ಇ.ಡಿ.) ಹೆಸರು ದುರ್ಬಳಕೆ ಮಾಡಿಕೊಂಡು ವಂಚನೆ ನಡೆಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಹೆಬ್ಬಾಳ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಏಳು ಆರೋಪಿಗಳನ್ನು ಬಂಧಿಸಿದ್ದಾರೆ.

ಬ್ಯಾಂಕ್‌ನ ನಿವೃತ್ತ ವ್ಯವಸ್ಥಾಪಕ ನಾಗೇಶ್ವರ ರಾವ್‌, ಸುಜರಿತಾ, ಹಾಸನ ಜಿಲ್ಲೆ ಚನ್ನರಾಯಪಣ್ಣದ ಕಲ್ಪನಾ, ದಿಲೀಪ್‌, ತರುಣಾ, ಗೌತಮ್‌, ಚಾಲಕ ಮಂಜು ಬಂಧಿತ ಆರೋಪಿಗಳು. ಆತ್ಮಾನಂದ ಕಾಲೊನಿ ನಿವಾಸಿ ಶಾಂತಿ ಅವರು ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿದಾಗ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ.

‘ಆರ್​ಬಿಐ, ಇ.ಡಿ ಬಳಿ ಜಪ್ತಿ ಆಗಿರುವ ಸಾಕಷ್ಟು ಹಣವಿದೆ. ಈ ಹಣ ನಿಮಗೆ ಮರಳಿ ಬರಲಿದೆ. ಮೊದಲು ಹೂಡಿಕೆ ಮಾಡಿದರೆ, ದುಪ್ಪಟ್ಟು ಹಣ ಕೊಡುತ್ತೇವೆ. ಅಲ್ಲದೇ, ಸೂಕ್ತ ಸ್ಥಳದಲ್ಲಿ ಜಮೀನು ಕೊಡಿಸುತ್ತೇವೆ ಎಂದು ನಂಬಿಸಿ ಹಣ ಪಡೆದು ವಂಚನೆ ಮಾಡುತ್ತಿದ್ದರು. ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ಅಂದಾಜು ₹ 4 ಕೋಟಿಯಷ್ಟು ವಂಚನೆ ಆಗಿರುವ ಮಾಹಿತಿ ಸದ್ಯಕ್ಕೆ ಸಿಕ್ಕಿದೆ. ಆರೋಪಿಗಳನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ದೂರುದಾರೆ ಶಾಂತಿ ಅವರಿಗೆ ನಾಗೇಶ್ವರ ರಾವ್‌ ಹಾಗೂ ಸುಜರಿತಾ ಎಂಬುವವರು 2020ರ ಜೂನ್‌ನಲ್ಲಿ ಕಲ್ಪನಾ ಅವರನ್ನು ಪರಿಚಯಿಸಿದ್ದರು. ಕುಡುಮುಡಿ ಎಂಬಲ್ಲಿ ₹100 ಕೋಟಿ ಮೌಲ್ಯದ ಆಸ್ತಿಯಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ಆದೇಶ ಬಂದಿದೆ. ದಾಖಲಾತಿ ಪಡೆಯಲು ಹಣದ ಅಗತ್ಯವಿದ್ದು, ₹15 ಲಕ್ಷ ಕೊಡಿ ಎಂದು ಕಲ್ಪನಾ ಕೇಳಿಕೊಂಡಿದ್ದರು. 15 ದಿನಗಳ ಒಳಗೆ ಬಡ್ಡಿ ಸಹಿತ ಹಣ ವಾಪಸ್ ನೀಡುವುದಾಗಿ ನಂಬಿಸಿ, ನಾಗೇಶ್ವರ ರಾವ್‌, ಸುಜರಿತಾ ಹಾಗೂ ಚಾಲಕ ಮಂಜು ಸಮ್ಮುಖದಲ್ಲಿ ಹಣ ಪಡೆದುಕೊಂಡಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

‘15 ದಿನಗಳ ಬಳಿಕ ಹಣ ವಾಪಸ್ ಕೇಳಿದಾಗ, ಕಪ್ಪು ಹಣವನ್ನು ಕಾನೂನು ಬದ್ಧವಾಗಿ ಪರಿವರ್ತಿಸಲು ₹100 ಕೋಟಿಗೆ ಶೇ 30ರಂತೆ ₹ 30 ಕೋಟಿ ಪಾವತಿಸಬೇಕಿದೆ. ನಿಮ್ಮ ಹಣಕ್ಕೆ ಹತ್ತುಪಟ್ಟು ಹೆಚ್ಚು ಹಣ ನೀಡುತ್ತೇವೆ. ಅಲ್ಲದೇ 2 ಕೆ.ಜಿ ಚಿನ್ನ ಹಾಗೂ 20 ಕೆ.ಜಿ ಬೆಳ್ಳಿ ವಿಗ್ರಹ ಕೊಡುತ್ತೇವೆ. ಈ ವ್ಯವಹಾರದಲ್ಲಿ ಆರ್‌ಬಿಐ ಅಧಿಕಾರಿಗಳು ನಮ್ಮೊಂದಿಗೆ ಇದ್ದಾರೆಂದು ಹೇಳಿಕೊಂಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಬಂಧಿತರ ಪೈಕಿ ಒಬ್ಬಾತ ಕರೆ ಮಾಡಿ ತಾನು ಇ.ಡಿ.ಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ, ಗೋದಾಮಿನಲ್ಲಿರುವ ಹಣದ ಕಂತೆಗಳಿಗೆ ಔಷಧಿ ಹಾಕಬೇಕು. ಇಲ್ಲದಿದ್ದರೆ ಹಣ ಒಂದಕ್ಕೊಂದು ಅಂಟಿಕೊಂಡು ನಾಶವಾಗುತ್ತದೆ. ಹಣವನ್ನು ಈಗಲೇ ಕೊಟ್ಟರೆ ಎರಡು ದಿನಗಳಲ್ಲಿ ಹತ್ತುಪಟ್ಟು ಹೆಚ್ಚಿನ ಹಣ ಕೊಡುತ್ತೇವೆ ಎಂದು ನಂಬಿಸಿದ್ದರು. ಇದನ್ನು ನಂಬಿದ ದೂರುದಾರೆ ಸೇರಿದಂತೆ ನಾಲ್ವರು ₹4 ಕೋಟಿ ಹಣವನ್ನು ವಿವಿಧ ದಿನಾಂಕಗಳಂದು ನಾಗೇಶ್ವರ ರಾವ್, ಸುಜರಿತಾ, ಕಲ್ಪನಾ, ದಿಲೀಪ್, ತರುಣ, ಗೌತಮ್, ಚಾಲಕ ಮಂಜು ಅವರಿಗೆ ನೀಡಿದ್ದರು. ನಂತರ ಹಣ ವಾಪಸ್‌ ಕೇಳಿದಾಗ ಹಣ ಕೊಡುವುದಿಲ್ಲ. ಹಣ ಕೇಳಿದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಒಡ್ಡಿದ್ದರು’ ಎಂದು ದೂರಿನಲ್ಲಿ ವಿವರಿಸಲಾಗಿದೆ.

‘ಆರೋಪಿಗಳು ಆರ್​ಬಿಐ ಮತ್ತು ಇಡಿ ಹೆಸರು ದುರ್ಬಳಕೆ ಮಾಡಿದ್ದಾರೆ. ಇನ್ನೂ ಹಲವರು ಭಾಗಿಯಾಗಿರುವ ಮಾಹಿತಿಯಿದೆ. ತನಿಖೆ ಮುಂದುವರೆದಿದೆ’ ಎಂದು ಉತ್ತರ ವಿಭಾಗ ಡಿಸಿಪಿ ಸೈದುಲ್ಲಾ ಅಡಾವತ್ ಹೇಳಿದರು.

ನಾಗೇಶ್ವರ ರಾವ್‌ 
ನಾಗೇಶ್ವರ ರಾವ್‌ 
ಸುಜರಿತಾ 
ಸುಜರಿತಾ 
ದಿಲೀಪ್‌ ಕುಮಾರ್‌ 
ದಿಲೀಪ್‌ ಕುಮಾರ್‌ 
ತರುಣಾ  
ತರುಣಾ  
ಗೌತಮ್‌ 
ಗೌತಮ್‌ 
ಮಂಜು 
ಮಂಜು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT