ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಇಲ್ಲದೆ ದುರ್ನಾತ ಬೀರುವ ಕೆ.ಆರ್‌. ಪುರ ಮಾರುಕಟ್ಟೆ

ಮಧ್ಯರಾತ್ರಿಯಲ್ಲಿ ಸುಂಕ ವಸೂಲಿಗಿಳಿಯುವ ಮಧ್ಯವರ್ತಿಗಳು: ಬೇಸತ್ತ ರೈತರು,
Published 15 ಸೆಪ್ಟೆಂಬರ್ 2023, 23:30 IST
Last Updated 15 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಕೆ.ಆರ್. ಪುರ: ಮಾರುಕಟ್ಟೆಯ ಎಲ್ಲೆಡೆ ಕಸ, ಮಳೆ ಬಂದಾಗಲೆಲ್ಲ ಕೆಸರು ಗದ್ದೆಯಾಗುವ ಅಂಗಳ, ಅಲ್ಲಲ್ಲಿ ನಿಂತ ಕೊಳಚೆ ನೀರಿನಿಂದ ಸೊಳ್ಳೆಗಳ ಹಾವಳಿ, ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ರೈತರು ಮತ್ತು ವ್ಯಾಪಾರಿಗಳು, ಸಾರ್ವಜನಿಕರಿಗೆ ನಿತ್ಯ ಕಿರಿಕಿರಿಯಾಗುವ ಟ್ರಾಫಿಕ್ ಸಮಸ್ಯೆ, ನಿಯಮ ಮೀರಿ ಸುಂಕ ವಸೂಲಿಗೆ ಇಳಿಯುವ ಮಧ್ಯವರ್ತಿಗಳ ದಂಡು...

ಕೆ.ಆರ್. ಪುರ ಮಾರುಕಟ್ಟೆಯ ನರಕಸದೃಶ ಸ್ಥಿತಿ ಇದು. ಅತ್ಯಂತ ಹಳೆಯ ಮಾರುಕಟ್ಟೆಗಳಲ್ಲಿ ಒಂದಾಗಿರುವ ಮತ್ತು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆ.ಆರ್‌.ಪುರ ಮಾರುಕಟ್ಟೆ ಮೂಲ ಸೌಕರ್ಯಗಳಿಲ್ಲದೆ ನಲುಗಿದೆ. ನಿತ್ಯ ಸಾವಿರಾರು ರೈತರು, ವ್ಯಾಪಾರಿಗಳು ಇಲ್ಲಿ ವಹಿವಾಟು ನಡೆಸುತ್ತಾರೆ. ಆದರೆ, ಈ ಮಾರುಕಟ್ಟೆಯಲ್ಲಿ ಕನಿಷ್ಠ ಸೌಲಭ್ಯಗಳು ಸಹ ಮರೀಚಿಕೆಯಾಗಿವೆ. ಸಾವಿರಾರು ರೂಪಾಯಿ ಆದಾಯ ತರುವ ಮಾರುಕಟ್ಟೆಯಲ್ಲಿ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಬಿಬಿಎಂಪಿ ಮುಂದಾಗಿಲ್ಲ ಎನ್ನುವುದು ಇಲ್ಲಿನ ವ್ಯಾಪಾರಿಗಳ ದೂರು.

ಕೆ.ಆರ್. ಪುರ ಮಾರುಕಟ್ಟೆಗೆ ರಾಜ್ಯದ ಹಲವು ಜಿಲ್ಲೆಗಳಿಂದ ವ್ಯಾಪಾರಿಗಳು ಇಲ್ಲಿನ ಮಾರುಕಟ್ಟೆಗೆ ಬರುತ್ತಾರೆ. ಹಾಸನ, ಮೈಸೂರು, ಹೊಸಕೋಟೆ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಆಂಧ್ರ ಪ್ರದೇಶದ ಗಡಿ ಜಿಲ್ಲೆಯಿಂದ ವ್ಯಾಪಾರಿಗಳು ಬರುತ್ತಾರೆ. ರಾತ್ರಿ 8 ಕ್ಕೆ ಬಂದರೆ, ಅಲ್ಲಿಯೇ ಉಳಿದು ಮರುದಿನ ವ್ಯಾಪಾರ ಮುಗಿಸಿಕೊಂಡೇ ಹೊರಡುತ್ತಾರೆ.

ವಿಲೇವಾರಿಯಾಗದ ಕಸ: ಮಾರುಕಟ್ಟೆಗೆ ಬರುವ ವ್ಯಾಪಾರಿಗಳು ಹಾಗೂ ರೈತರು ಎಲ್ಲೆಂದರಲ್ಲಿ ತ್ಯಾಜ್ಯ ಸುರಿದು ಹೋಗುತ್ತಾರೆ. ಸ್ವಚ್ಛತೆ ಕಾಪಾಡುವುದಿಲ್ಲ. ಇಲ್ಲಿಗೆ ಬರುವ ರೈತರು ವ್ಯಾಪಾರಿಗಳು ಕಸದ ಬಗ್ಗೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಬಿಬಿಎಂಪಿ ಕೂಡ ಕಸ ನಿರ್ವಹಣೆ ಮಾಡುವುದರಲ್ಲಿ ಎಡವಿದೆ ಎಂದು ಸ್ಥಳೀಯರು ದೂರುತ್ತಾರೆ.

‘ಹೊರ ಜಿಲ್ಲೆಗಳ ಮೂಲಕ ಕೆ.ಆರ್. ಪುರ ಮಾರುಕಟ್ಟೆಗೆ ರೈತರು ತಾವು ಬೆಳೆದಿರುವ ತರಕಾರಿ ಸೊಪ್ಪು ರಾತ್ರಿ ವೇಳೆಗೆ ತಂದು ಇಲ್ಲಿಯೇ ತಂಗುತ್ತಾರೆ. ಬೆಳಗಿನ ಜಾವ 4 ಗಂಟೆಗೆ ವ್ಯಾಪಾರ ವಹಿವಾಟು ನಡೆಸುತ್ತಾರೆ. ರೈತರು ವ್ಯಾಪಾರಿಗಳಿಗೆ ತರಕಾರಿ ಮಾರಾಟ ಮಾಡುತ್ತಾರೆ. ರೈತರು ಮತ್ತು ವ್ಯಾಪಾರಿಗಳಿಂದ ಅಳಿದುಳಿದ ಸೊಪ್ಪು ಮತ್ತು ತರಕಾರಿ ಸ್ಥಳದಲ್ಲೇ ಬಿಟ್ಟು ತೆರಳುವುದರಿಂದ ಕಸ ಹೆಚ್ಚಾಗಿ ಕೊಳೆಯುವ ಸ್ಥಿತಿಗೆ ತಲುಪುತ್ತದೆ. ಇದರಿಂದ ಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದುರ್ನಾತ ಬೀರುತ್ತದೆ. ಬಿಬಿಎಂಪಿ ಸರಿಯಾದ ರೀತಿಯಲ್ಲಿ ಕಸ ನಿರ್ವಹಣೆ ಮಾಡದೆ ರಾತ್ರಿ ವೇಳೆ ಕಸಕ್ಕೆ ಬೆಂಕಿ ಹಾಕುವ ಕೆಲಸಕ್ಕೆ ಮುಂದಾಗುತ್ತಿದೆ’ ಎಂದು ರೈತ ರಮೇಶ್ ಹೇಳುತ್ತಾರೆ.

ಮಧ್ಯವರ್ತಿಗಳ ಹಾವಳಿ: ರಾತ್ರಿಯಾದರೆ ಸಾಕು ಗುಂಪೊಂದು ರೈತರಿಂದ ಸುಂಕ ವಸೂಲಿಗೆ ಇಳಿಯುತ್ತದೆ. ನಿಯಮ ಮೀರಿ ಹೆಚ್ಚು ಹಣವನ್ನು ಈ ಗುಂಪು ವಸೂಲಿ ಮಾಡುತ್ತಿದೆ. ಟೆಂಡರ್ ಪಡೆದಿರುವ ಗುತ್ತಿಗೆದಾರರು ಹೆಚ್ಚು ಹಣ ವಸೂಲಿ ಮಾಡುತ್ತಿದ್ದರೂ ಇವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ರೈತರು ಹೆಚ್ಚಿನ ಹಣ ನೀಡದೆ ಇದ್ದರೆ ದಬ್ಬಾಳಿಕೆ ಮಾಡಲಾಗುತ್ತದೆ. ಟೆಂಡರ್ ಪಡೆಯದೆ ಇರುವ ಗುಂಪುಗಳು ಮಧ್ಯರಾತ್ರಿ ರೈತರಿಗೆ ಕಿರುಕುಳ ನೀಡಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತವೆ. ಮಧ್ಯವರ್ತಿಗಳು ಕೆಲವರು ಐದರಿಂದ ಆರು ಅಂಗಡಿಗಳನ್ನು ಇಟ್ಟುಕೊಂಡು ತಮಗೆ ಬೇಕಾದವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಾರೆ ಎಂದು ಹೆಸರು ಹೇಳಲು ಇಚ್ಛಿಸದ ರೈತರೊಬ್ಬರು ತಿಳಿಸಿದರು.

ಮಧ್ಯವರ್ತಿಗಳು ಮನಬಂದಂತೆ ತರಕಾರಿ ಮತ್ತು ಸೊಪ್ಪು ಅನ್ನು ರೈತರಿಂದ ಖರೀದಿಸುತ್ತಾರೆ. ನಂತರ, ಮೂರುಪಟ್ಟು ಹೆಚ್ಚು ದರಕ್ಕೆ ಮಾರಾಟ ಮಾಡುತ್ತಾರೆ.  ಇದರಿಂದ ರೈತರು ಮೋಸಕ್ಕೆ ಒಳಗಾಗುತ್ತಿದ್ದಾರೆ. ಇಷ್ಟೆಲ್ಲ ಅಕ್ರಮ ನಡೆದರೂ ರೈತರು ತಮ್ಮ ಪಾಡಿಗೆ ತಾವು ಇರಬೇಕಿದೆ. ತಮ್ಮ ಪಾಲಿಗೆ ಬಂದಷ್ಟು ಬರಲಿ ಎನ್ನುವ ಸ್ಥಿತಿ ಮಾರುಕಟ್ಟೆಯಲ್ಲಿ ನಿರ್ಮಾಣವಾಗಿದೆ ಎಂದು ದೂರಿದರು.

ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಹಸಿ ತ್ಯಾಜ್ಯ
ಎಲ್ಲೆಂದರಲ್ಲಿ ರಾಶಿ ಬಿದ್ದಿರುವ ಹಸಿ ತ್ಯಾಜ್ಯ
ತ್ಯಾಜ್ಯ ನಿರ್ವಹಣೆ ಮಾಡದೇ ಹಾಗೆ ಬಿಟ್ಟಿರುವುದು
ತ್ಯಾಜ್ಯ ನಿರ್ವಹಣೆ ಮಾಡದೇ ಹಾಗೆ ಬಿಟ್ಟಿರುವುದು
ಬಿಡಾಡಿ ದನಗಳ ಹಾವಳಿ
ಬಿಡಾಡಿ ದನಗಳ ಹಾವಳಿ
ಹಬ್ಬ ಹರಿದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ
ಹಬ್ಬ ಹರಿದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾಪಾರ ಮಾಡುವ ಹೂವಿನ ವ್ಯಾಪಾರಿಗಳು
ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾಪಾರ ಮಾಡುವ ಹೂವಿನ ವ್ಯಾಪಾರಿಗಳು
ಸರ್ಕಾರ ಕೆ.ಆರ್. ಪುರ ಮಾರುಕಟ್ಟೆಯನ್ನು ಹೊಸದಾಗಿ ನಿರ್ಮಿಸುವ ಯೋಜನೆ ಎತ್ತಿಕೊಂಡಿದೆ. ಕೆಳಗಡೆ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ. ಒಂದನೇ ಮಹಡಿಯಲ್ಲಿ ದಿನ ಪ್ರತಿ ನಡೆಯುವ ಮಾರುಕಟ್ಟೆ ಹಾಗೂ ನಂತರದ ಎರಡನೇ ಮಹಡಿಯಲ್ಲಿ ವಾರದ ಸಂತೆ ಮಾಡಲು ಯೋಜನೆ ಸಿದ್ಧಪಡಿಸಿಕೊಂಡಿದೆ. ಆದರೆ ಮಾರುಕಟ್ಟೆಯಲ್ಲಿನ ಕೆಲವು ವ್ಯಾಪಾರಿಗಳು ಯೋಜನೆಗೆ ಅಡ್ಡಿಪಡಿಸುವ ಉದ್ದೇಶದಿಂದ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಸರ್ಕಾರದ ಯೋಜನೆಯ ಮೂಲಕ ಈ ಭಾಗದಲ್ಲಿ ನೂತನ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಸಂಚಾರ ದಟ್ಟಣೆ ಕಡಿಮೆ ಮಾಡಿ ರೈತರಿಗೆ ವ್ಯಾಪಾರಿಗಳಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಬಹುದು.
– ಎಲೆ ಶ್ರೀನಿವಾಸ್‌ ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ
‘ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ’ ಮಾರುಕಟ್ಟೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ರಾತ್ರಿ ವೇಳೆ ನಾಯಿಗಳಿಂದಾಗಿ ಮಾರುಕಟ್ಟೆಯಲ್ಲಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ರಾತ್ರಿ ವೇಳೆ ಮಾರುಕಟ್ಟೆ ಸುತ್ತಮುತ್ತ ನಾಯಿಕೊಡೆಗಳಂತೆ ಹುಟ್ಟಿಕೊಳ್ಳುವ ಬೀದಿ ಬದಿಯ ತಳ್ಳುವ ಹೋಟೆಲ್‌ನಿಂದ ಮಾರುಕಟ್ಟೆಗೆ ಬರುವ ರೈತರು ವ್ಯಾಪಾರಿಗಳು ಹಾಗೂ ಸಾರ್ವಜನಿಕರು ತಿನ್ನುವ ಆಹಾರ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ನಾಯಿಗಳು ಹೆಚ್ಚಾಗಿವೆ. ಸಾಕಷ್ಟು ಬಾರಿ ಸಾರ್ವಜನಿಕರನ್ನು ಅಟ್ಟಿಸಿಕೊಂಡು ಬಂದು ಕಚ್ಚಿವೆ. ಇದುವರೆಗೆ ಬಿಬಿಎಂಪಿ ಯಾವುದೇ ಕ್ರಮಕೈಗೊಂಡಿಲ್ಲ’ 
–ರಮೇಶ್‌ ರೈತ
ನಿತ್ಯ ಕಿರಿಕಿರಿ ಎನಿಸುವ ಟ್ರಾಫಿಕ್ ಸಮಸ್ಯೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆ.ಆರ್.ಪುರ ಮಾರುಕಟ್ಟೆ ನಿತ್ಯ ಟ್ರಾಫಿಕ್ ಕಿರಿಕಿರಿಯಿಂದಾಗಿ ಮಾರುಕಟ್ಟೆಗೆ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಹೊರ ರಾಜ್ಯ ಆಂಧ್ರಪ್ರದೇಶ ತಮಿಳುನಾಡು ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಸಾವಿರಾರು ವಾಹನಗಳು ಇಲ್ಲಿಂದಲೇ ಸಂಚಾರ ಮಾಡುತ್ತಿವೆ. ಹೂವಿನ ಅಂಗಡಿಗಳು ಹೆದ್ದಾರಿ ಪಕ್ಕದ ಜಾಗಕ್ಕೆ ಸ್ಥಳಾಂತರಗೊಂಡಿವೆ. ವಿಶೇಷವಾಗಿ ಹಬ್ಬ ಹರಿದಿನಗಳಲ್ಲಿ ಸಂಚಾರ ದಟ್ಟಣೆ ಹೇಳತೀರದಾಗಿದೆ.
–ಕೆ.ಪಿ. ಕೃಷ್ಣ ಸ್ಥಳೀಯ ನಿವಾಸಿ
‘ಸ್ವಚ್ಛತೆ ಕಾಪಾಡಲಿ’ ಮಾರುಕಟ್ಟೆಯಲ್ಲಿ ಸ್ವಚ್ಛತೆ ಇಲ್ಲ. ಬಿಬಿಎಂಪಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ರೈತರಿಗೆ ಹೆಚ್ಚಿನ ಟೆಂಡರ್‌ಗಿಂತ ಅಧಿಕ ಸುಂಕ ವಿಧಿಸಲಾಗುತ್ತದೆ. ಸರಿಯಾದ ಜಾಗದಲ್ಲಿ ವ್ಯಾಪಾರ ಮಾಡಲು ರೈತರಿಗೆ ಮತ್ತು ವ್ಯಾಪಾರಿಗಳಿಗೆ ಸ್ಥಳವೂ ದೊರೆಯುತ್ತಿಲ್ಲ. ಮಾರುಕಟ್ಟೆಗೆ ಬರಲು ಸಮೀಪದಲ್ಲಿ ಇರುವ ಸ್ಕೈವಾಕ್‌ ನಿರ್ಮಿಸಲಾಗಿದೆ. ಆದರೆ ಇದು ಉಪಯೋಗಕ್ಕೂ ಬರುತ್ತಿಲ್ಲ. ವಾಹನ ನಿಲ್ದಾಣ ಮಾಡಲು ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದರಿಂದ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತದೆ.
– ದಿಲೀಪ್‌ ಆಮ್‌ ಆದ್ಮಿ ಪಕ್ಷದ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT