ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಾಂಧಿ ಬಜಾರ್‌ ಉಳಿಸಿ’ ಹೋರಾಟಕ್ಕೆ ಸಜ್ಜು

ಮನಸ್ಸು ಒಡೆದ ‘ಮನಸ್ಸು ಗಾಂಧಿ ಬಜಾರ್’: ಆರೋಪ
Last Updated 6 ಜನವರಿ 2023, 19:45 IST
ಅಕ್ಷರ ಗಾತ್ರ

ಬೆಂಗಳೂರು: ‘ಮನಸ್ಸು ಗಾಂಧಿ ಬಜಾರ್’ ಇಲ್ಲಿನ ಜನರ ಮನಸ್ಸನ್ನು ಒಡೆದು ಹಾಕಿ, ನಾಗರಿಕರಿಗೆ ತೊಂದರೆ ಕೊಡುವ ಯೋಜನೆಯಾಗಿದೆ’ ಎಂದು ನೈಜ ಹೋರಾಟಗಾರರ ವೇದಿಕೆಯ ಎಚ್‌.ಎಂ. ವೆಂಕಟೇಶ್ ದೂರಿದರು.

ನೈಜ ಹೋರಾಟಗಾರರ ವೇದಿಕೆ, ಜನಾಧಿಕಾರ ಸಂಘರ್ಷ ಪರಿಷತ್, ಹಳ್ಳಿ ಮಕ್ಕಳ ಸಂಘಟನೆ, ಮಾಹಿತಿ ಅಧ್ಯಯನ ಕೇಂದ್ರ ಇನ್ನಿತರ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಪ್ರಜಾ ನ್ಯಾಯವೇದಿಕೆ’ಯ ಸದಸ್ಯರು ಶುಕ್ರವಾರ ಗಾಂಧಿಬಜಾರ್‌ನಲ್ಲಿ ಕಾಮಗಾರಿ ಸ್ಥಳ ಪರಿಶೀಲನೆ ನಡೆಸಿ ನಿವಾಸಿಗಳ, ವ್ಯಾಪಾರಸ್ಥರ ಬೀದಿ ಬದಿ ವ್ಯಾಪಾರಿಗಳ ಸಮಸ್ಯೆಯನ್ನು ಆಲಿಸಿದರು.

‘ಗಾಂಧಿ ಬಜಾರ್ ಉಳಿಸಿ ಹೋರಾಟ ಸಮಿತಿ’ ಎಂಬ ಘೋಷಣೆಯಡಿ ಮುಂದಿನ ದಿನಗಳಲ್ಲಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಎಚ್‌.ಎಂ. ವೆಂಕಟೇಶ್‌ ತಿಳಿಸಿದರು.

‘ಗಾಂಧಿ ಬಜಾರಿನ 70 ಅಡಿ ರಸ್ತೆಯನ್ನು 20 ಅಡಿಗೆ ಕಡಿಮೆ ಮಾಡಿ ಕೇವಲ ಪಾದಚಾರಿಗಳ ಮಾರ್ಗವನ್ನಾಗಿ ಪರಿವರ್ತಿಸಲಾಗುತ್ತಿದೆ. ಬೆಂಗಳೂರು ದಕ್ಷಿಣದಿಂದ ಉತ್ತರದ ಕಡೆಗೆ ಸಂಪರ್ಕಿಸುವ ಗಾಂಧಿ ಬಜಾರ್ ರಸ್ತೆಯನ್ನು ಸಂಚಾರ ಮುಕ್ತಗೊಳಿಸಿ ಪಾದಚಾರಿ ಮಾರ್ಗವಾಗಿಸುವುದರಿಂದ 125 ವರ್ಷಗಳಿಗೂ ಹೆಚ್ಚು ಕಾಲದಿಂದ ಇಲ್ಲಿ ವಾಸಿಸುತ್ತಿರುವವರು, ವ್ಯಾಪಾರಕ್ಕಾಗಿ ಬರುವ ಬೆಂಗಳೂರಿನ ವಿವಿಧ ಭಾಗಗಳ ಜನಸಾಮಾನ್ಯರಿಗೆ ಈ ಯೋಜನೆಯು ತೊಂದರೆ ಉಂಟು ಮಾಡುತ್ತಿದೆ’ ಎಂದು ದೂರಿದರು.

‘ಬಿಬಿಎಂಪಿ ಇಲ್ಲಿ ನಡೆಸುತ್ತಿರುವ ಕಾಮಗಾರಿ ಬಗ್ಗೆ ಮಾಹಿತಿ ಫಲಕವನ್ನೂ ಹಾಕಿಲ್ಲ. ನಾಗರಿಕರನ್ನು ಕತ್ತಲೆಯಲ್ಲಿಟ್ಟು ಕಾಮಗಾರಿ ನಡೆಸಲಾಗುತ್ತದೆ’ ಎಂದು ಆರೋಪಿಸಿದರು.

‘ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿ ಎಲೆಕ್ಟ್ರಾನಿಕ್ ಗೇಟ್‌ಗಳನ್ನು ಅಳವಡಿಸಿ ಇಲ್ಲಿನ ನಿವಾಸಿಗಳಿಗೆ ಪಾಸ್‌ಗಳನ್ನು ವಿತರಿಸಿ ಅವರ ವಾಹನ ಮಾತ್ರ ಬರುವಂತೆ ನೋಡಿಕೊಳ್ಳಲಾಗುತ್ತದೆ ಎಂಬ ಮಾಹಿತಿ ಇದೆ. ಇದರಿಂದ ಇಲ್ಲಿನ ನಿವಾಸಿಗಳ ಸ್ವಾತಂತ್ರ್ಯವನ್ನೇ ಹರಣ ಮಾಡಿದಂತಾಗುತ್ತದೆ’ ಎಂದರು.

‘ಗಾಂಧಿ ಬಜಾರ್ ಮೊದಲಿನಂತೆಯೇ ಜನರ ಆಕರ್ಷಣೆಯ ಕೇಂದ್ರವಾಗಿರಲಿ. ವೈಟ್ ಟಾಪಿಂಗ್ ಕಾರ್ಯ ನಡೆಯಲಿ. ಮೊದಲಿನಂತೆ ದ್ವಿಮುಖ ಸಂಚಾರವಿರಲಿ ಎಂಬುದು ಇಲ್ಲಿನ ನಾಗರಿಕರು, ವ್ಯಾಪಾರಿಗಳು ಮತ್ತು ಬೀದಿ ವ್ಯಾಪಾರಿಗಳ ಮುಖ್ಯ ಬೇಡಿಕೆ’ ಎಂದರು.‌

ಪೊಲೀಸ್ ಮಾಜಿ ಕಮಿಷನರ್ ಭಾಸ್ಕರ್ ರಾವ್ ಬೆಂಬಲ ವ್ಯಕ್ತಪಡಿಸಿದರು. ವ್ಯಾಸರಾಜ ಮಠದ ಸ್ವಾಮೀಜಿ, ರಾಮಕೃಷ್ಣಾಶ್ರಮದ ಮಠದ ಸ್ವಾಮೀಜಿ ಜನರ ಪರವಾಗಿ ನಿಂತು ಹೋರಾಟಕ್ಕೆ ಮುಂದಾಗಿರುವುದಾಗಿ ತಿಳಿಸಿದ್ದಾರೆ ಎಂದರು.

‌ವಿವಿಧ ಸಂಘಟನೆಗಳ ಸದಸ್ಯರಾದ ಆದರ್ಶ ಅಯ್ಯರ್, ನಾಗೇಶ್ವರ್ ಬಾಬು, ವಾಸುದೇವಮೂರ್ತಿ, ಪ್ರಕಾಶ್ ಬಾಬು, ವಿಶ್ವನಾಥ್, ಶಂಕರ್, ಲೋಕೇಶ್, ಸ್ಥಳೀಯ ವ್ಯಾಪಾರಿಗಳ ಒಕ್ಕೂಟ ಮತ್ತು ರೆಸಿಡೆನ್ಶಿಯಲ್ ವೆಲ್‌ಫೇರ್‌ ಅಸೋಸಿಯೇಷನ್‌ನ ಗುರುಪ್ರಸಾದ್, ವೆಂಕಟೇಶ್, ಬೆಣ್ಣೆ ಸುಧೀಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT