ಗುರುವಾರ , ಅಕ್ಟೋಬರ್ 29, 2020
26 °C
10 ದಿನ ಕಡ್ಡಾಯ ಚಿಕಿತ್ಸೆ ನಿಯಮ ಬದಲಿಸುವಂತೆ ಕೋರಿಕೆ

ಕೋವಿಡ್‌: ಏಳೇ ದಿನಗಳಲ್ಲಿ ಬಿಡುಗಡೆಗೆ ಅವಕಾಶ ಕೊಡಿ ಎಂದು ಬಿಬಿಎಂಪಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ನಿಂದ ಬಳಲುತ್ತಿರುವವರಿಗೆ ತಕ್ಷಣ ಹಾಸಿಗೆಗಳು ಸಿಗದೇ ಇರುವ ದೂರುಗಳು ಬರುತ್ತಿದ್ದು, ಹಾಸಿಗೆ ಲಭ್ಯ ಕೊರತೆ ನೀಗಿಸಲು ಬಿಬಿಎಂಪಿ ನಾನಾ ಮಾರ್ಗೋಪಾಯಗಳನ್ನು ಹುಡುಕುತ್ತಿದೆ. ಹೆಚ್ಚುವರಿ ಹಾಸಿಗೆಗಳ ಹುಡುಕುವ ಬದಲು ಇರುವ ಹಾಸಿಗೆಗಳು ತೀರಾ ಅಗತ್ಯ ಇರುವ ರೋಗಿಗಳ ಚಿಕಿತ್ಸೆಗೆ ಲಭ್ಯವಾಗುವಂತೆ ಮಾಡಲು ಮುಂದಾಗಿದೆ.

ಕೋವಿಡ್‌ ರೋಗಿಯು ಸರ್ಕಾರದ ಶಿಫಾರಸಿನ ಮೇರೆಗೆ ಆಸ್ಪತ್ರೆಗೆ ದಾಖಲಾದರೆ ಕನಿಷ್ಠ 10 ದಿನ ಚಿಕಿತ್ಸೆ ಪಡೆಯುವುದು ಕಡ್ಡಾಯ ಎಂಬ ನಿಯಮವಿದ್ದು, ಇದನ್ನು ಮಾರ್ಪಾಡು ಮಾಡಬೇಕು. ಬೇಗ ಗುಣಮುಖರಾದವರು ಏಳು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಬಿಬಿಎಂಪಿ ಕೋರಿದೆ. 

‘ಕೋವಿಡ್‌ನ ಲಘು ಲಕ್ಷಣ ಹೊಂದಿರುವ ಅನೇಕರು, ಭವಿಷ್ಯದಲ್ಲಿ ಅಪಾಯ ಆಗುವುದು ಬೇಡ ಎಂಬ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಂತಹವರು ದಾಖಲಾದ ಒಂದೆರಡು ದಿನಗಳಲ್ಲೇ ಗುಣಮುಖರಾಗುತ್ತಿದ್ದಾರೆ. ಅವರು ಮನೆಗೆ ಮರಳಲು ಬಯಸಿದರೂ ಚಾಲ್ತಿಯಲ್ಲಿರುವ ನಿಯಮ ಅದಕ್ಕೆ ಅವಕಾಶ ಕಲ್ಪಿಸುತ್ತಿಲ್ಲ. ಹಾಗಾಗಿ ಬೇಗನೇ ಗುಣಮುಖರಾದವರು ಏಳು ದಿನಗಳ ಒಳಗೆ ಬಿಡುಗಡೆ  ಆಗುವುದಕ್ಕೆ ಅವಕಾಶ ಕಲ್ಪಿಸುವಂತೆ ನಿಯಮ ತಿದ್ದುಪಡಿ ಮಾಡಬೇಕು ಎಂದು ಸರ್ಕಾರವನ್ನು ಕೋರಿದ್ದೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗೆ ಹಾಸಿಗೆಗಳ ಕೊರತೆ ಭಾರಿ ಪ್ರಮಾಣದಲ್ಲೇನಿಲ್ಲ. ಹಾಗಿದ್ದರೂ, ರೋಗಿಗಳ ಸಂಖ್ಯೆ ಹೆಚ್ಚಳವಾದರೆ, ಅವರ ತುರ್ತು ಚಿಕಿತ್ಸೆಗೆ ಸಾಕಷ್ಟು ಹಾಸಿಗೆಗಳು ಲಭ್ಯ ಇರುವಂತೆ ನೋಡಿಕೊಳ್ಳಬೇಕು. ಒಮ್ಮೆ ಚಿಕಿತ್ಸೆಗೆ ದಾಖಲಾದವರು ಕಡ್ಡಾಯವಾಗಿ 10 ದಿನ ಆಸ್ಪತ್ರೆಯಲ್ಲೇ ಇರಬೇಕು ಎಂಬ ನಿಯಮದಲ್ಲಿ ಮಾರ್ಪಾಡು ಮಾಡಿದರೆ ನಗರದ ಆಸ್ಪತ್ರೆಗಳಲ್ಲಿ ಶೇ 20ರಷ್ಟು ಹಾಸಿಗೆಗಳು ಹೆಚ್ಚುವರಿಯಾಗಿ ಲಭ್ಯವಾಗಬಹುದು ಎಂಬ ನಿರೀಕ್ಷೆ ಇದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು