ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಬಿಯರ್ ದರ ಹೆಚ್ಚಳಕ್ಕೆ ಅಬಕಾರಿ ಇಲಾಖೆ ಸಿದ್ದತೆ!

ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಮೂಲ ಘೋಷಿತ ದರದ ಶೇಕಡ 185ರಿಂದ ಶೇ 195ಕ್ಕೆ ಏರಿಕೆ ಮಾಡಲು ಸಿದ್ಧತೆ
Published 22 ಜನವರಿ 2024, 15:27 IST
Last Updated 23 ಜನವರಿ 2024, 3:05 IST
ಅಕ್ಷರ ಗಾತ್ರ

ಬೆಂಗಳೂರು: ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು (ಎಇಡಿ) ಶೇಕಡ ಹತ್ತರಷ್ಟು ಹೆಚ್ಚಿಸಲು ಅಬಕಾರಿ ಇಲಾಖೆ ಮುಂದಾಗಿದ್ದು, 650 ಮಿ.ಲೀ. ಅಳತೆಯ ಪ್ರತಿ ಬಾಟಲಿ ಬಿಯರ್‌ನ ದರದಲ್ಲಿ ₹ 8ರಿಂದ ₹ 10ರವರೆಗೆ ಹೆಚ್ಚಳವಾಗಲಿದೆ.

ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಮೂಲ ಘೋಷಿತ ದರದ ಶೇಕಡ 185ರಿಂದ ಶೇ 195ಕ್ಕೆ ಏರಿಕೆ ಮಾಡಲು ಅವಕಾಶ ಕಲ್ಪಿಸಿ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳಿಗೆ ತಿದ್ದುಪಡಿ ತರಲು ಇಲಾಖೆ ಸಿದ್ಧತೆ ನಡೆಸಿದೆ. ಇದಕ್ಕಾಗಿ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು–2024ರ ಕರಡನ್ನು ಶನಿವಾರ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

2023ರ ಜುಲೈ ತಿಂಗಳಲ್ಲಿ ಭಾರತೀಯ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 20ರಷ್ಟು ಮತ್ತು ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಶೇ 10ರಷ್ಟು ಹೆಚ್ಚಳ ಮಾಡಲಾಗಿತ್ತು. ಆರು ತಿಂಗಳಲ್ಲೇ ಮತ್ತೊಮ್ಮೆ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆ ಏರಿಕೆಗೆ ಪ್ರಕ್ರಿಯೆ ಆರಂಭಿಸಲಾಗಿದೆ.

ಹೆಚ್ಚುವರಿ ಅಬಕಾರಿ ತೆರಿಗೆ ಏರಿಕೆಗೆ ಅವಕಾಶ ಕಲ್ಪಿಸುವ ಕರಡು ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಲು ಶನಿವಾರದಿಂದ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಆಸಕ್ತರು ಹಣಕಾಸು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಲು ಅವಕಾಶವಿದೆ.

‘ಜನವರಿ ಕೊನೆಯ ವಾರ ಅಥವಾ ಫೆಬ್ರುವರಿ ಮೊದಲ ವಾರ ಹೊಸ ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. 650 ಮಿ.ಲೀ. ಅಳತೆಯ ಪ್ರತಿ ಬಾಟಲ್‌ ಬಿಯರ್‌ನ ದರದಲ್ಲಿ ₹ 8ರಿಂದ ₹ 10ರವರೆಗೂ ಏರಿಕೆಯಾಗಲಿದೆ’ ಎಂದು ಅಬಕಾರಿ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT