ಗುರುವಾರ , ಅಕ್ಟೋಬರ್ 21, 2021
22 °C

ಪತ್ರಕರ್ತ, ರಂಗಕರ್ಮಿ ಗುಡಿಹಳ್ಳಿ ನಾಗರಾಜ ಇನ್ನಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ರಕರ್ತ, ರಂಗಕರ್ಮಿ ಗುಡಿಹಳ್ಳಿ ನಾಗರಾಜ (67) ನಿಧನರಾದರು. ಅವರು ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕು ಗುಡಿಹಳ್ಳಿಯವರಾದ ನಾಗರಾಜ ಅವರು, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಇಂಗ್ಲಿಷ್ ಪದವಿ ಪಡೆದು, ಹರಪನಹಳ್ಳಿಯಲ್ಲಿ ಮೂರು ವರ್ಷ ಉಪನ್ಯಾಸಕರಾಗಿದ್ದರು. 1983ರಲ್ಲಿ ‘ಪ್ರಜಾವಾಣಿ’ ಪತ್ರಿಕಾ ಸಮೂಹ ಸೇರಿದ ಅವರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸುದ್ದಿ ಸಂಪಾದಕರಾಗಿ ನಿವೃತ್ತರಾಗಿದ್ದರು.

ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. 

ಬೆಂಗಳೂರಿನ ಗೋವಿಂದರಾಜನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ. ನಾಗರಾಜ್‌ ಅವರ ಅಂತ್ಯಸಂಸ್ಕಾರವನ್ನು ದಾವಣಗೆರೆ ಜಿಲ್ಲೆಯ ಕೆರೆಗುಡಿಹಳ್ಳಿಯಲ್ಲಿ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.   

ರಂಗಭೂಮಿ ಮತ್ತು ಗುಡಿಹಳ್ಳಿ: ರಂಗಭೂಮಿ ಕುರಿತ ಗುಡಿಹಳ್ಳಿ ಬರಹಗಳು ಗಮನಾರ್ಹವಾದವು. ಹದಿನೈದಕ್ಕೂ ಹೆಚ್ಚು ರಂಗಕೃತಿಗಳನ್ನು ಬರೆದಿದ್ದಾರೆ. ರಾಜ್ಯದ ನಾಲ್ಕು ರಂಗ ತಂಡಗಳ ನೇತೃತ್ವವನ್ನೂ ವಹಿಸಿಕೊಂಡಿದ್ದರು. ಇತ್ತೀಚೆಗೆ ‘ರಂಗ ನೇಪಥ್ಯ’ ಎಂಬ ಮಾಸ ಪತ್ರಿಕೆ ಪ್ರಕಟಿಸುತ್ತಿದ್ದರು. 

‘ರಂಗನಾಟಕ ಪ್ರಯೋಗ ಸಾರ್ಥಕತೆ’, ‘ತೆರೆ ಸರಿದಾಗ’ (ಮಾಲತಿಶ್ರೀ ಮೈಸೂರು ಆತ್ಮಕತೆ), ‘ರಂಗಸಿರಿ’ (ಮರಿಯಮ್ಮನಹಳ್ಳಿ ಡಾ.ನಾಗರತ್ನಮ್ಮ ಆತ್ಮಕತೆ), ‘ಗುಬ್ಬಿ ವೀರಣ್ಣ’, ‘ಡಾ.ಲಕ್ಷ್ಮಣದಾಸ್’, ‘ಗಾನಕೋಗಿಲೆ’, ‘ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು’, ‘ಮೇಕಪ್‍ಮನ್ ಸುಬ್ಬಣ್ಣ’, ‘ರಂಗನೇವರಿಕೆ’, ‘ರಂಗಸಂದರ್ಶನ’, ‘ರಂಗದಿಗ್ಗಜರು’, ‘ಚಿಂದೋಡಿ ಲೀಲಾ’, ‘ಕಲಾಗ್ರಾಮ’, ‘ಜನಪರ ರಂಗಭೂಮಿ’, ‘ರಂಗಸೆಲೆ’ ಇವು ಅವರ ಪ್ರಮುಖ ಕೃತಿಗಳು.

ಕರ್ನಾಟಕ ನಾಟಕ ಅಕಾಡೆಮಿಯ ಜಿಲ್ಲಾ ರಂಗಮಾಹಿತಿ ಮಾಲಿಕೆ, ಹಾಗೂ ರಂಗಸಂಪನ್ನರು ಮಾಲಿಕೆಯ 40 ಕೃತಿಗಳು, ‘ವೃತ್ತಿ ರಂಗದ ಮಹತ್ತರ ನಾಟಕಗಳು’ (ರಾಮಕೃಷ್ಣ ಮರಾಠೆ ಜತೆಗೆ), ‘ಶತಮಾನದ ಶಕಪುರುಷ ಏಣಗಿ ಬಾಳಪ್ಪ’ (ಈ ಮೂರೂ ಸರಣಿ ನಾಟಕ ಅಕಾಡೆಮಿ ಪ್ರಕಟಣೆ), ‘ಪಿ.ಬಿ.ಧುತ್ತರಗಿ ಆಯ್ದ ನಾಟಕಗಳು’ (ಪುಸ್ತಕ ಪ್ರಾಧಿಕಾರದ ಪ್ರಕಟಣೆ) ಸೇರಿದಂತೆ ಹಲವಾರು ಸಂಪಾದಿತ ಕೃತಿಗಳು ಪ್ರಕಟವಾಗಿವೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ, ಪ್ರೆಸ್‍ಕ್ಲಬ್ ಉಪಾಧ್ಯಕ್ಷ, ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಾಗಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.

ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ, ಮುರುಘರಾಜೇಂದ್ರ, ನಾಟಕ ಅಕಾಡೆಮಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು