ಭಾನುವಾರ, ಸೆಪ್ಟೆಂಬರ್ 19, 2021
26 °C
ಭಕ್ತರ ದರ್ಶನಕ್ಕೆ ವಿಶೇಷ ವ್ಯವಸ್ಥೆ * ಕೋವಿಡ್‌ ನಿಯಮಗಳ ಪಾಲನೆ

ಗುರು ಪೂರ್ಣಿಮಾ: ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಗುರು ಪೂರ್ಣಿಮಾ ಪ್ರಯುಕ್ತ ನಗರದ ದೇವಸ್ಥಾನಗಳಲ್ಲಿ ಶನಿವಾರ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ದೇವರಿಗೆ ವಿಶೇಷ ಅಲಂಕಾರಗಳನ್ನು ಮಾಡಿದ್ದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಬಂದು ದರ್ಶನ ಮಾಡಿಕೊಂಡರು.

ಭಕ್ತಾದಿಗಳ ಸುರಕ್ಷತಾ ದೃಷ್ಟಿಯಿಂದ ದೇವಸ್ಥಾನಗಳಲ್ಲಿ ಬ್ಯಾರಿಕೇಡ್‌ಗಳನ್ನು ಜೋಡಿಸುವ ಮೂಲಕ ಅಂತರ ಕಾಯ್ದುಕೊಂಡು, ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೆಲವು ದೇವಸ್ಥಾನ ಮಂಡಳಿಗಳು ಭಕ್ತರಿಗೆ ಸೋಂಕು ನಿವಾರಕ ದ್ರಾವಣ ನೀಡುವ ಹಾಗೂ ದೇಹದ ಉಷ್ಣಾಂಶ ತಪಾಸಣೆ ನಡೆಸುವ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್‌ ಧರಿಸಿದ್ದವರಿಗೆ ಮಾತ್ರ ದೇವಾಲಯದ ಒಳಗೆ ಪ್ರವೇಶ ಕಲ್ಪಿಸಲಾಗಿತ್ತು.

ಕೆಲವು ದೇವಸ್ಥಾನಗಳಲ್ಲಿ ದೂರದಿಂದಲೇ ದೇವರ ದರ್ಶನ ಮಾಡುವಂತೆ ಭಕ್ತರಿಗೆ ಸೂಚಿಸಲಾಗಿತ್ತು. ಗುರು ಪೂರ್ಣಿಮಾ ಅಂಗವಾಗಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ನಡೆಯಿತು. ವಿಶೇಷ ಭಜನೆಗಳು, ಸಂಗೀತ ಕಾರ್ಯಕ್ರಮಗಳೂ ಏರ್ಪಾಡಾಗಿದ್ದವು.

ಮಲ್ಲೇಶ್ವರ, ಯಶವಂತಪುರ, ರಾಜಾನುಕುಂಟೆ, ಆರ್‌.ಟಿ.ನಗರ, ನಾಯಂಡಹಳ್ಳಿ, ತ್ಯಾಗರಾಜನಗರದ ಶ್ರೀಸಾಯಿ ಬಾಬಾ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಉದ್ದಂಡಹಳ್ಳಿಯ ಸಾಯಿಬಾಬಾ ಮಂದಿರದಲ್ಲಿ ಸದ್ಗುರು ಸಾಯಿ ಭಜನಾ ಮಂಡಳಿಯಿಂದ ಭಜನೆ ಹಾಗೂ ದೀಪೋತ್ಸವ ವಿಶೇಷವಾಗಿತ್ತು.

ಜಯನಗರದ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಹಿರಿಯ ವ್ಯವಸ್ಥಾಪಕ ಆರ್.ಕೆ.ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ಗುರು ಪೂರ್ಣಿಮಾ ಪ್ರಯುಕ್ತ ರಾಯರ ಬೃಂದಾವನಕ್ಕೆ ಕ್ಷೀರಾಭಿಷೇಕ ನಡೆಯಿತು. ಹೂವಿನ ಅಲಂಕಾರ ಹಾಗೂ ಗುರುರಾಯರ ಪಾದಪೂಜೆ, ಪುಷ್ಪಾರ್ಚನೆ, ಕನಕಾಭಿಷೇಕಗಳನ್ನು ಭಕ್ತರು ಕಣ್ತುಂಬಿಕೊಂಡರು. ಸತ್ಯನಾರಾಯಣ ವ್ರತಗಳಲ್ಲಿ ಭಾಗವಹಿಸಿದರು.

ವಿಶೇಷ ಪೂಜೆ ಸಲ್ಲಿಸಿದ ಅಶ್ವತ್ಥನಾರಾಯಣ: ಗುರು ಪೂರ್ಣಿಮಾ ಪ್ರಯುಕ್ತ ಉಪಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಮಲ್ಲೇಶ್ವರದ ಯತಿರಾಜ ಮಠಕ್ಕೆ ಭೇಟಿ ನೀಡಿ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿಯ ಆಶೀರ್ವಾದ ಪಡೆದರು. ರಾಜಾಜಿನಗರದ ಶನಿ ಮಹಾತ್ಮ ದೇವಸ್ಥಾನ, ಸಂಪಿಗೆ ರಸ್ತೆಯ ಸಾಯಿ ಮಂದಿರಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು