ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಮತಗಳಿಲ್ಲದೇ ಎಚ್‌ಡಿಕೆ ಗೆದ್ದರಾ? ಜಮೀರ್‌ ಪ್ರಶ್ನೆ

Published 24 ಸೆಪ್ಟೆಂಬರ್ 2023, 12:57 IST
Last Updated 24 ಸೆಪ್ಟೆಂಬರ್ 2023, 12:57 IST
ಅಕ್ಷರ ಗಾತ್ರ

ಬೆಂಗಳೂರು: ಅಪಾರವಾಗಿ ಗೌರವಿಸುವ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರು, ಕೋಮುವಾದಿ ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದವರು. ಆದರೆ ಕುಮಾರಸ್ವಾಮಿ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಗೌಡರು ನಂಬಿ, ಪಾಲಿಸಿಕೊಂಡು ಬಂದ ತತ್ವ ಸಿದ್ಧಾಂತವನ್ನು ಬಲಿ ಕೊಟ್ಟಿದ್ದಾರೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಆರೋಪಿಸಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಜಮೀರ್‌ ಅಹಮದ್‌ ಖಾನ್‌ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಮುಸ್ಲಿಂ ಸಮುದಾಯದ ಜತೆ ನಾನು ನಿಂತಿದ್ದೆ. ಆದರೆ ಆ ಸಮುದಾಯ ಜೆಡಿಎಸ್ ಜತೆ ನಿಲ್ಲಲಿಲ್ಲ ಎಂದು ಹೇಳುವ ಎಚ್. ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಯಾರ ಮತಗಳಿಂದ ಗೆದ್ದಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.

ತಮ್ಮ(ಕುಮಾರಸ್ವಾಮಿ) ಹೇಳಿಕೆಯಿಂದ ನಾಡಿನ ಮುಸ್ಲಿಂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ಮುಸ್ಲಿಂ ಸಮುದಾಯ ಮತ ನೀಡಿರದಿದ್ದರೆ ತಾವು ಗೆಲ್ಲುತ್ತಿದ್ದರೆ? ಎಂಬುದನ್ನು ಕುಮಾರಸ್ವಾಮಿ ಎದೆ ಮುಟ್ಟಿಕೊಂಡು ಹೇಳಲಿ. ಎಚ್. ಡಿ. ರೇವಣ್ಣ, ತುರುವೇಕೆರೆ ಕೃಷ್ಣಪ್ಪ, ಚಿ.ನಾ ಹಳ್ಳಿ ಸುರೇಶ್ ಬಾಬು, ನಾಗನಗೌಡ ಕಂದಕೂರು, ದೇವದುರ್ಗ ಕರೆಮ್ಮ ಅವರಿಗೆ ಮುಸ್ಲಿಂ ಸಮುದಾಯ ಮತ ಹಾಕಿಲ್ಲ ಎಂದು ಹೇಳಲಿ ಎಂದು ಜಮೀರ್‌ ಕಿಡಿಕಾರಿದ್ದಾರೆ.

ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಅವರು ದೊಡ್ಡ ಅಂತರದಲ್ಲಿ ಗೆಲ್ಲಲಿಲ್ಲ, ಅಲ್ಲಿ ಮುಸ್ಲಿಂ ಸಮುದಾಯ ಒಟ್ಟಾಗಿ ಮತ ಕೊಟ್ಟಿದ್ದಕ್ಕೆ ಗೆದ್ದಿದ್ದು ಇಲ್ಲದಿದ್ದರೆ ಸೋಲುತ್ತಿದ್ದರು. ಮುಸ್ಲಿಂ ಸಮುದಾಯ ಜೆಡಿಎಸ್‌ಗೆ ಮತ ಕೊಟ್ಟಿದ್ದಕ್ಕೆ ವಿಧಾನಸಭಾ ಚುನಾವಣೆಯಲ್ಲಿ 19 ಸ್ಥಾನ ಪಡೆದಿದೆ. ಇಲ್ಲದಿದ್ದರೆ 5 ರಿಂದ 6 ಸ್ಥಾನ ಬರುತ್ತಿತ್ತು ಎಂದು ಜಮೀರ್‌ ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT