ಬೆಂಗಳೂರು: ನಗರದಲ್ಲಿ ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ರಸ್ತೆಗಳು ಹೊಳೆಯಂತಾಗಿವೆ. ಪೂರ್ವಭಾಗದಲ್ಲಿನ ಬಡಾವಣೆಗಳು ಕೆರೆಗಳಂತಾಗಿದ್ದು, ಕೆರೆಗಳ ಕೋಡಿ ಹರಿದು ಹೋಗಲು ಜಾಗವಿಲ್ಲದ ಕಾರಣ ಮಳೆ ನಿಂತರೂ ಬಡಾವಣೆಗಳಿಗೆ ನೀರು ನುಗ್ಗುವುದು ನಿಂತಿಲ್ಲ. ರಸ್ತೆಗಳಲ್ಲಿ ಕಿಲೋಮೀಟರ್ಗಟ್ಟಲೆ ವಾಹನಗಳ ದಟ್ಟಣೆ ಇತ್ತು.

ಭಾನುವಾರ ರಾತ್ರಿ ಪೂರ್ತಿ ಸುರಿದಿದ್ದು, ನಗರದಲ್ಲಿ 140 ಮಿ.ಮೀ. ಮಳೆಯಾಗಿದೆ. ನಗರದ ಎಲ್ಲ ಭಾಗಗಳಲ್ಲೂ ಮಳೆಯಾಗಿದೆ. ಆದರೆ ಪೂರ್ವ ಭಾಗ ಮಾತ್ರ ನಲುಗಿಹೋಗಿದೆ. ಇಲ್ಲಿನ ರಸ್ತೆ, ಬಡಾವಣೆ, ಕೆರೆ, ರಾಜಕಾಲುವೆಗಳ ಎಲ್ಲೆಲ್ಲೂ ನೀರೋ ನೀರು. ರಸ್ತೆ, ಬಡಾವಣೆ ಸೇರಿ ಮನೆಗಳ ಪಾರ್ಕಿಂಗ್ ಸ್ಥಳದಲ್ಲಿರುವ ಬೈಕ್, ಕಾರುಗಳು ನೀರಿನಲ್ಲಿ ಮುಳುಗಿಹೋಗಿವೆ.

ಮಹದೇವಪುರ ಭಾಗದ ಮಾರತ್ ಹಳ್ಳಿ, ಬೆಳ್ಳಂದೂರು, ಯಮಲೂರು, ಸರ್ಜಾಪುರ ಸುತ್ತಮುತ್ತಲಿನ ಪ್ರದೇಶಗಳು ಮಳೆಯಿಂದ ಹೆಚ್ಚು ಸಂಕಷ್ಟಕ್ಕೆ ಒಳಗಾಗಿವೆ. ನೀರು ಯಾವ ಭಾಗಕ್ಕೆ ಹರಿಯುತ್ತದೆ, ಇಲ್ಲಿಂದ ಯಾವ ಭಾಗಕ್ಕೆ ಹೋಗುತ್ತದೆ ಎಂಬುದರ ಅರಿವೇ ಇಲ್ಲದಂತಾಗಿತ್ತು. ರಸ್ತೆಯ ಇಕ್ಕೆಲಗಳು, ಚರಂಡಿಗಳು, ರಾಜಕಾಲುವೆಗಳು ಎಲ್ಲವೂ ನೀರಿನಲ್ಲಿ ಮುಳುಗಿಹೋಗಿದ್ದು, ಎಲ್ಲಿ ಯಾವುದು ಇದೆ ಎಂದೇ ಅಂದಾಜಿಸಲಾಗದೆ ಜನರು ಸಂಚರಿಸಿ ಸಂಕಷ್ಟ ಎದುರಿಸಿದರು. ದ್ವಿಚಕ್ರ ವಾಹನ ಸವಾರರಂತೂ ಬಿದ್ದು ಎದ್ದು ಸಂಚರಿಸಿದರು.

‘ಪೂರ್ವಭಾಗದ ನಿವಾಸಿಗಳು ಸ್ಥಳೀಯ ಆಡಳಿತವನ್ನು ಎಷ್ಟು ತರಾಟೆಗೆ ತೆಗೆದುಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ಬಂದಕೂಡಲೇ ಇಲ್ಲಿ ಸಮಸ್ಯೆ ಹೆಚ್ಚಾಗುತ್ತದೆ. ಕೆರೆ ಕೋಡಿ ನಿಲ್ಲದೆ ಬಡಾವಣೆಗಳಿಗೆ ನೀರು ಬರುವುದೂ ದಿನಗಟ್ಟಲೆ ನಿಲ್ಲುವುದಿಲ್ಲ. ಮನೆ ಬಿಟ್ಟು ಬೇರೆಲ್ಲೋ ಇರುವಂತಾಗಿದೆ’ ಎಂದು ನಿವಾಸಿ ರಾಜಮೋಹನ್ ಅಳಲು ತೋಡಿಕೊಂಡರು.

ಯಮಲೂರು ಕೆರೆ ತುಂಬಿಹೋಗಿ ಕೋಡಿ ಹರಿಯುತ್ತಿದೆ. ಯಮಲೂರು ಹಾಗೂ ಮಾರತ್ಹಳ್ಳಿ ಮುಖ್ಯರಸ್ತೆಯ ಮೇಲ್ಭಾಗದಲ್ಲಿರುವ ಈ ಕೆರೆಯಿಂದ ಅತಿ ಹೆಚ್ಚು ನೀರು ಹೊರಬರುತ್ತಿದೆ. ರಾಜಕಾಲುವೆ ಉಕ್ಕಿಹರಿಯುತ್ತಿದೆ. ಹೀಗಾಗಿ ಐಟಿ ಕಂಪನಿಗಳಿರುವ 77 ಡಿಗ್ರಿ ಟೌನ್ ಸೆಂಟರ್, ಎಚ್ಎಎಲ್ ತೇಜಸ್ ವಿಭಾಗದ ಕಟ್ಟಡ ಹಾಗೂ ಪಾರ್ಕಿಂಗ್ ಸ್ಥಳ ನೀರಿನಿಂದ ಜಲಾವೃತವಾಗಿವೆ. ಮಾರತ್ಹಳ್ಳಿ ಮುಖ್ಯರಸ್ತೆಯಲ್ಲಿ ಸುಮಾರು 75 ಅಡಿ ಇರುವ ರಾಜಕಾಲುವೆ ಒಂದು ಸ್ಥಳದಲ್ಲಿ ಕಿರಿದಾಗಿ, ಚರಂಡಿಯಂತೆ ಕಾಣುತ್ತಿದೆ. ಕೊನೆಯಲ್ಲಿ ಅದು ಹೂಳು, ಕಾಂಕ್ರೀಟ್ನಿಂದ ತುಂಬಿಹೋಗಿದೆ. ಹೀಗಾಗಿ ನೀರು ರಸ್ತೆ, ಸಂಕೀರ್ಣಗಳಲ್ಲಿ ತುಂಬಿಹೋಗಿದೆ. ಈ ನೀರು ಮತ್ತಷ್ಟು ಐಟಿ ಕಂಪನಿಗಳಿರುವ ಬೆಳ್ಳಂದೂರು ಭಾಗದ ಇಕೊ ಸ್ಪೇಸ್ ಕಡೆಗೆ ನುಗ್ಗುತ್ತಿದೆ.

ಮಾರತ್ಹಳ್ಳಿ, ದೊಡ್ಡನೆಕ್ಕುಂದಿ, ವರ್ತೂರು, ಮಾರತ್ಹಳ್ಳಿ, ಬೆಳ್ಳಂದೂರು, ಪುಲಕೇಶಿನಗರ, ರಾಜಮಹಲ್ ಗುಟ್ಟಹಳ್ಳಿ, ಸಂಪಂಗಿರಾಮನಗರದಲ್ಲಿ ಭಾನುವಾರ ರಾತ್ರಿ, ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಇದರಿಂದ ಬಡಾವಣೆಗಳತ್ತ ಸಾಗುವ ನೀರಿನ ರಭಸವೂ ಹೆಚ್ಚಾಗಿದೆ.

ಟ್ರ್ಯಾಕ್ಟರ್ಗಳಿಂದ ವಸೂಲಿ!

ರಸ್ತೆಗೆ ತಾಕೀತೇನೋ ಎಂಬಂತೆ ಹಾರುತ್ತಿದ್ದ ವಿಮಾನಗಳ ಕೆಳಗೆ ಎಚ್ಎಎಲ್ ತೇಜಸ್ ವಿಭಾಗದ ಕಟ್ಟಡ ಮಳೆ ನೀರಿನಿಂದ ತುಂಬಿಹೋಗಿತ್ತು. ಹೊಳೆಯಂತಾಗಿದ್ದ ರಸ್ತೆಯಲ್ಲಿ ಐಟಿ ಉದ್ಯೋಗಿಗಳು, ಸ್ಥಳೀಯರು ಟ್ರ್ಯಾಕ್ಟರ್ನಲ್ಲಿ ಸಾಗುತ್ತಿದ್ದದ್ದು, ಅಭಿವೃದ್ಧಿಗಾಗಿ ಪ್ರಕೃತಿಯನ್ನು ಹಾಳುಗೆಡವಿದ ಫಲ ಎನ್ನುವುದನ್ನು ಸಾರುವಂತಿತ್ತು.

ಮಾರತ್ಹಳ್ಳಿ ಮುಖ್ಯರಸ್ತೆಯಿಂದ ಯಮಲೂರಿಗೆ ಹೋಗುವ ಮಾರ್ಗ ಜಲಾವೃತವಾಗಿದ್ದು, ಕಾರು, ಬೈಕುಗಳಲ್ಲಿ ಸಂಚರಿಸುವುದು ಸಾಧ್ಯವಿರಲಿಲ್ಲ. ಭಾನುವಾರ ಬೆಳಿಗ್ಗೆಯಿಂದ ಟ್ರ್ಯಾಕ್ಟರ್ಗಳನ್ನೇ ಅವಲಂಬಿಸಬೇಕಾಗಿತ್ತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಹುತೇಕ ಟ್ರ್ಯಾಕ್ಟರ್ಗಳಲ್ಲೂ ಉಚಿತ ಪ್ರಯಾಣವಿತ್ತು. ಬಿಸಿಲೇರುತ್ತಿದ್ದಂತೆ ಕೆಲವು ಟ್ರ್ಯಾಕ್ಟರ್ನವರು ತಲಾ ₹50 ಶುಲ್ಕ ವಿಧಿಸಲು ಆರಂಭಿಸಿದರು. ‘ಕೊಡಲ್ಲ, ಅಷ್ಟೊಂದಾ, ಬೇಡ ಬಿಡಿ’ ಎನ್ನುವವರು ಇರಲಿಲ್ಲ. ‘ಸುತ್ತಿ ಬಳಸಿ ಹೋದರೆ ನೂರಾರು ರೂಪಾಯಿ ವೆಚ್ಚವಾಗುತ್ತದೆ. ಟ್ರ್ಯಾಕ್ಟರ್ನವರಿಗೆ ಡೀಸಲ್ ಖರ್ಚಿಗಾದರೂ ಆಗಲಿ ಬಿಡಿ. ಏನೂ ಸಮಸ್ಯೆ ಇಲ್ಲ’ ಎಂದು ಕೆಲವರು ಸಮಾಧಾನದ ಮಾತನಾಡಿದರು. ಕೆಲ ಸ್ಥಳೀಯ ಮುಖಂಡರು ಉಚಿತವಾಗಿ ಟ್ರ್ಯಾಕ್ಟರ್ ಸೇವೆ ಒದಗಿಸಿದರು.

ಆಹಾರ ವಿತರಿಸದಿದ್ದರೆ ₹500 ದಂಡ

‘ಯಮಲೂರಿನಲ್ಲಿರುವ ಮಾರತ್ಹಳ್ಳಿ ಮುಖ್ಯರಸ್ತೆಗೆ ಆಹಾರ ತಂದುಕೊಡದಿದ್ದರೆ ₹500 ದಂಡ ಹಾಕುತ್ತಾರೆ. ಅದಕ್ಕೇ ಈ ನೀರಿನಲ್ಲಾದರೂ ಹೋಗಲೇಬೇಕು. ಆದರೆ ಈ ಟ್ರ್ಯಾಕ್ಟರ್ನವರು ಕರೆದುಕೊಂಡು ಹೋಗುತ್ತಿದ್ದಾರೆ. ಇವರಿಗೆ ಒಳ್ಳೆಯದಾಗಲಿ’ ಎಂದು ಆಹಾರವನ್ನು ಮನೆಗೆ ಡಿಲಿವರಿ ಮಾಡುವ ವ್ಯಕ್ತಿ ಅಳಲಿನ ನಡುವೆಯೂ ಪ್ರತಿಕ್ರಿಯಿಸಿದರು.

‘ರಸ್ತೆ ತುಂಬಾ ನೀರಿದೆ, ಆ ರೆಸ್ಟೊರೆಂಟ್ನಿಂದ ಆಹಾರ ತಂದು ಕೊಡಲು ಸಾಧ್ಯವಾಗುವುದಿಲ್ಲ ಎಂದು ನಾನು ನಮ್ಮ ಸಂಸ್ಥೆಯವರಿಗೆ ಹೇಳಿದೆ. ಆದರೆ, ತಂದುಕೊಡಲೇಬೇಕು. ಇಲ್ಲದಿದ್ದರೆ ₹500 ಫೈನ್ ಹಾಕುವುದಾಗಿ ಎಚ್ಚರಿಸಿದರು. ಹೀಗಾಗಿ ಟ್ರ್ಯಾಕ್ಟರ್ನಲ್ಲಿ ಹೋಗುತ್ತಿದ್ದೇನೆ’ ಎಂದರು.

ಇದಲ್ಲದೆ ಈ ಭಾಗದಲ್ಲಿ ಫುಡ್ ಡಿಲಿವರಿ ಬಾಯ್ಸ್ ‘ಯುಲು’ ಬ್ಯಾಟರಿ ವಾಹನಗಳ ಮೊರೆಹೋಗಿದ್ದರು.

ನಿವಾಸಿಗಳಿಲ್ಲದ ವಿಲಾಸಿ ಬಡಾವಣೆಗಳು..

ಸರ್ಜಾಪುರ–ಬೆಳ್ಳಂದೂರು ಮುಖ್ಯರಸ್ತೆಯಲ್ಲಿರುವ ಕೆಲವು ಐಷಾರಾಮಿ ಬಡಾವಣೆಗಳು ಜನರಹಿತವಾಗಿದ್ದವು. ಆದರೆ, ಮನೆ, ಕ್ಲಬ್, ಮಳಿಗೆ ಹಾಗೂ ವಾಹನಗಳಲ್ಲಿ ನೀರು ತುಂಬಿಹೋಗಿದೆ. ಹೀಗಾಗಿ ಅಧಿಕಾರಿಗಳು ಅಗ್ನಿಶಾಮಕ ದಳದ ಸಹಾಯದಿಂದ ಬೋಟ್ ಹಾಗೂ ಟ್ರ್ಯಾಕ್ಟರ್ಗಳಲ್ಲಿ ಜನರನ್ನು ಅಲ್ಲಿಂದ ಹೊರತಂದಿದ್ದಾರೆ.

ರೈನ್ಬೊ ಡ್ರೈವ್, ಸನ್ನಿ ಬ್ರೂಕ್ಸ್, ಕಂಟ್ರಿ ಸೈಡ್ ಐಷಾರಾಮಿ ಬಡಾವಣೆಗಳಲ್ಲಿದ್ದ ಜನರನ್ನು ಹೊರತಲಾಗಿದೆ. ಆದರೆ ನೀರನ್ನು ಅಲ್ಲಿಂದ ಹೊರಹಾಕುವ ಸಾಹಸಕ್ಕೆ ಯಾರೂ ಕೈಹಾಕಿರಲಿಲ್ಲ. ‘ನೀರು ಎಷ್ಟಿದೆ? ಎಲ್ಲಿ ಹಳ್ಳವಿದೆ ಎಂಬುದು ಗೊತ್ತಾಗುವುದಿಲ್ಲ. ಕಾಲುವೆಗಳು ಇಲ್ಲದ್ದರಿಂದ ನೀರು ಹೋಗಲು ಸ್ಥಳವಿಲ್ಲ’ ಎಂದು ಅಗ್ನಿಶಾಮಕ ದಳ ಹಾಗೂ ಸಂಚಾರ ಪೊಲೀಸರು ತಿಳಿಸಿದರು.

‘ಇವರಿಗೆಲ್ಲ ಗೊತ್ತಾಗಬೇಕು. ಈ ಮಳೆ ಸರಿಯಾಗಿ ಪಾಠ ಕಲಿಸಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಂಡು ಐಷಾರಾಮಿ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ. ಕೆರೆ ಕೋಡಿ ಹಾಗೂ ಮಳೆ ನೀರು ಎಲ್ಲಿ ಹೋಗಬೇಕು? ಈಗ ಮಳೆ ನೀರು ಅದರ ಜಾಗ ಕಂಡುಕೊಂಡಿದೆ. ಅವರಿಂದ ಸುತ್ತಮುತ್ತಲಿನವರಿಗೂ ತೊಂದರೆ’ ಎಂದು ಸರ್ಜಾಪುರದ ನಿವಾಸಿ ರಾಜಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.