ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿ ರ‍್ಯಾಂಪ್: ಸರ್ವಿಸ್ ರಸ್ತೆ ಬಂದ್

ವಿಮಾನ ನಿಲ್ದಾಣ ರಸ್ತೆಯಲ್ಲಿ ದಟ್ಟಣೆ: ಜುಲೈ 15ರವರೆಗೆ ಕಾಮಗಾರಿ
Published : 1 ಜುಲೈ 2023, 23:45 IST
Last Updated : 1 ಜುಲೈ 2023, 23:45 IST
ಫಾಲೋ ಮಾಡಿ
Comments

ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ ಬಳಿ ನಿತ್ಯವೂ ಉಂಟಾಗುವ ಸಂಚಾರ ದಟ್ಟಣೆ ತಗ್ಗಿಸಲು ಹೊಸದೊಂದು ರ‍್ಯಾಂಪ್ ನಿರ್ಮಿಸಲಾಗುತ್ತಿದ್ದು, ಇದರ ಕಾಮಗಾರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ಸರ್ವಿಸ್ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿರುವ ಹೆಬ್ಬಾಳ ಮೇಲ್ಸೇತುವೆ ಬಳಿ ದಟ್ಟಣೆ ಸಾಮಾನ್ಯವಾಗಿದೆ. ಎಸ್ಟಿಮ್ ಮಾಲ್‌ನಿಂದ ಹೆಬ್ಬಾಳ ಪೊಲೀಸ್ ಠಾಣೆಯವರೆಗೆ ಬೆಳಿಗ್ಗೆ ಹಾಗೂ ಸಂಜೆ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ.

ಹೆಬ್ಬಾಳ ಪೊಲೀಸ್ ಠಾಣೆ ಎದುರು ಪಾದಚಾರಿಗಳು ರಸ್ತೆ ದಾಟಲು ಸುರಂಗ ಮಾರ್ಗ ಮಾಡಲಾಗಿದೆ. ಆದರೆ, ಹಲವರು ಈ ಮಾರ್ಗ ಬಳಸುತ್ತಿಲ್ಲ. ರಸ್ತೆಯನ್ನು ಅಪಾಯಕಾರಿ ರೀತಿಯಲ್ಲಿ ದಾಟುತ್ತಿದ್ದಾರೆ. ಇದೇ ಸ್ಥಳದಲ್ಲಿ ಅಪಘಾತಗಳು ಸಂಭವಿಸಿ, ಪಾದಚಾರಿಗಳು ಮೃತಪಟ್ಟಿರುವ ಬಗ್ಗೆ ಪ್ರಕರಣಗಳೂ ದಾಖಲಾಗಿವೆ.

‘ಹೆಬ್ಬಾಳ ಮೇಲ್ಸೇತುವೆಗೆ ಹೆಚ್ಚುವರಿಯಾಗಿ ಹೊಸದೊಂದು ರ‍್ಯಾಂಪ್ ನಿರ್ಮಿಸುವ ಕಾಮಗಾರಿ ಆರಂಭವಾಗಿದೆ. ಇದರಿಂದ ದಟ್ಟಣೆ ಹಾಗೂ ಅಪಘಾತ ಕಡಿಮೆಯಾಗುವ ವಿಶ್ವಾಸವಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.

‘ಹೆಬ್ಬಾಳ ಠಾಣೆ ಎದುರಿನ ಮುಖ್ಯರಸ್ತೆ ಹಾಗೂ ಸರ್ವೀಸ್ ರಸ್ತೆಗೆ ಹೊಂದಿಕೊಂಡು ಕಾಮಗಾರಿ ನಡೆಯುತ್ತಿದೆ. ಸರ್ವಿಸ್ ರಸ್ತೆಯಲ್ಲಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಮುಖ್ಯರಸ್ತೆಯ ಅರ್ಧ ಭಾಗದಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದೆ’ ಎಂದರು.

‘ಜುಲೈ 15ರೊಳಗಾಗಿ ಕಾಮಗಾರಿ ಮುಕ್ತಾಯವಾಗುವ ನಿರೀಕ್ಷೆ ಇದೆ. ಅದಾದ ನಂತರವೇ ಸರ್ವೀಸ್ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುವುದು’ ಎಂದು ಪೊಲೀಸರು ತಿಳಿಸಿದರು.

ಸಂಚಾರ ದಟ್ಟಣೆ: ವಿಮಾನ ನಿಲ್ದಾಣದ ಕಡೆಯಿಂದ ಹಾಗೂ ಹೊರವರ್ತುಲ ರಸ್ತೆಯಿಂದ ನಗರಕ್ಕೆ ಬರುವ ಬಹುತೇಕ ವಾಹನಗಳು, ಹೆಬ್ಬಾಳ ಮೇಲ್ಸೇತುವೆ ಮೂಲಕ ಸಂಚರಿಸುತ್ತವೆ. ಸದ್ಯ ಕಾಮಗಾರಿ ನಡೆಯುತ್ತಿರುವುದರಿಂದ ಈ ಭಾಗದಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿದ್ದು, ವಿಪರೀತ ದಟ್ಟಣೆ ಕಂಡುಬರುತ್ತಿದೆ.

ಮುಖ್ಯರಸ್ತೆಯ ಬದಿ ಕಾಮಗಾರಿ ನಡೆಯುವ ಸ್ಥಳದ ಸುತ್ತಮುತ್ತ ಕಬ್ಬಿಣದ ಬ್ಯಾರಿಕೇಡ್‌ಗಳನ್ನು ನಿಲ್ಲಿಸಲಾಗಿದೆ. ಮೇಲ್ಸೇತುವೆಯಿಂದ ಬರುವ ವಾಹನಗಳು, ಹೆಬ್ಬಾಳ ಪೊಲೀಸ್ ಠಾಣೆ ಎದುರು ನಿಧಾನವಾಗಿ ಸಂಚರಿಸುತ್ತಿವೆ. ಹೀಗಾಗಿ, ಮೇಲ್ಸೇತುವೆಯಲ್ಲೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.

‘ಎಸ್ಟಿಮ್ ಮಾಲ್‌ನಿಂದ ಬ್ಯಾಪ್ಟಿಸ್ಟ್ ಆಸ್ಪತ್ರೆಯವರೆಗೆ ಮೇಲ್ಸೇತುವೆ ನಿರ್ಮಿಸುವ ಯೋಜನೆ ಇತ್ತು. ಆದರೆ, ಹೆಬ್ಬಾಳ ಠಾಣೆಯವರೆಗೆ ಮಾತ್ರ ಕಾಮಗಾರಿ ನಡೆದಿತ್ತು. ಕೆಲ ತಾಂತ್ರಿಕ ಕಾರಣಗಳಿಂದ, ಹೆಚ್ಚುವರಿ ರ‍್ಯಾಂಪ್ ನಿರ್ಮಾಣಕ್ಕೆ ಸಾಧ್ಯವಾಗಿರಲಿಲ್ಲ. ಇದೀಗ, ಎಲ್ಲ ಅಡೆತಡೆಗಳು ನಿವಾರಣೆಯಾಗಿವೆ. ಹೆಚ್ಚುವರಿ ರ‍್ಯಾಂಪ್ ನಿರ್ಮಾಣ ಕೆಲಸವೂ ಭರದಿಂದ ಸಾಗುತ್ತಿದೆ’ ಎಂದು ಬಿಡಿಎ ಮೂಲಗಳು ಹೇಳಿವೆ.

‘ಸದ್ಯ ಸೇವೆಗೆ ಲಭ್ಯವಿರುವ ಮೇಲ್ಸೇತುವೆಗೆ ಹೊಂದಿಕೊಂಡು ಈ ಹೆಚ್ಚುವರಿ ರ‍್ಯಾಂಪ್ ನಿರ್ಮಿಸಲಾಗುತ್ತಿದೆ. ಇದರಿಂದ ಸ್ಥಳೀಯರ ಸಂಚಾರಕ್ಕೆ ಹೆಚ್ಚು ಅನುಕೂಲವಾಗಲಿದೆ. ಜೊತೆಗೆ, ಮೇಲ್ಸೇತುವೆಯಲ್ಲಿ ಉಂಟಾಗುವ ದಟ್ಟಣೆಯೂ ಕಡಿಮೆಯಾಗಲಿದೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT