ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಘಟ್ಟ ಹುಲ್ಲುಗಾವಲು: ಆತಂಕ ಬೇಡ –ವನ್ಯಜೀವಿ ಮಂಡಳಿ ಸದಸ್ಯರ ಪ್ರತಿಪಾದನೆ

Last Updated 9 ನವೆಂಬರ್ 2022, 20:19 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು ಮೀಸಲು ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವುದರಿಂದ ಸ್ಥಳೀಯರಿಗೆ ಅಥವಾ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುವುದಿಲ್ಲ ಎಂದುವನ್ಯಜೀವಿ ಮಂಡಳಿ ಸದಸ್ಯರು ಪ್ರತಿಪಾದಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿರುವ ಎಂಟು ಸದಸ್ಯರು,ಜೀವ ವೈವಿಧ್ಯಕ್ಕೆ ಖ್ಯಾತಿಯಾಗಿರುವ ಹೆಸರಘಟ್ಟ ಪ್ರದೇಶವನ್ನು ಪ್ರಸ್ತುತ ಪರಿಸ್ಥಿತಿ ಮತ್ತು ಭವಿಷ್ಯದ ದೃಷ್ಟಿಯಿಂದ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಹೆಸರಘಟ್ಟ ಹುಲ್ಲುಗಾವಲು ಪ್ರಮುಖ ಜಲಾಯನ ಪ್ರದೇಶವಾಗಿದೆ. ಜೀವ ವೈವಿಧ್ಯದ ಈ ಪ್ರದೇಶದಿಂದ ಹಲವು ಪ್ರಯೋಜನಗಳಾಗಿವೆ. ಇದು ಸಂಶೋಧನೆಗೂ ಮಹತ್ವದ ಸ್ಥಳವಾಗಿದೆ. ಮೀಸಲು ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವುದರಿಂದ ಈಗಿರುವ ಜನರ ಬದುಕಿನ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಹುಲ್ಲುಗಾವಲು ಪ್ರದೇಶವನ್ನು ವ್ಯರ್ಥವಾದ ಜಾಗ ಎಂದು ಪರಿಗಣಿಸಬಾರದು. ಹುಲ್ಲುಗಾವಲು ಪ್ರದೇಶವು ಅರಣ್ಯದಷ್ಟೇ ಮಹತ್ವ ಹೊಂದಿದ್ದು, ಕಾರ್ಬನ್‌ ಹೀರಿಕೊಳ್ಳುತ್ತದೆ. ಈ ಮೂಲಕ ತಾಪಮಾನ ಹೆಚ್ಚುವುದು ಮತ್ತು ಹವಾಮಾನ ಬದಲಾವಣೆ ಕಡಿಮೆ ಮಾಡಲು ನೆರವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ.

ಈ ಹುಲ್ಲುಗಾವಲು ಪ್ರದೇಶವು 100ಕ್ಕೂ ಹೆಚ್ಚು ಪಕ್ಷಿಗಳ ತಾಣವಾಗಿದೆ. ಕೆಲವು ಅಳಿವಿನ ಅಂಚಿನಲ್ಲಿರುವ ಪಕ್ಷಿಗಳಿವೆ. ಈ ಪ್ರದೇಶದ ಸಂರಕ್ಷಣೆಯಿಂದ ಸ್ಥಳೀಯ ಜನರನ್ನು ಒಕ್ಕಲೆಬ್ಬಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಡೀ 5100 ಎಕರೆ ಪ್ರದೇಶವು ರಾಜ್ಯ ಸರ್ಕಾರಕ್ಕೆ ಸೇರಿದೆ ಮತ್ತು 3500 ಎಕರೆ ಪ್ರದೇಶದಲ್ಲಿ ಸರ್ಕಾರಿ ಸಂಸ್ಥೆಗಳಿವೆ. ಉಳಿದಿರುವ ಪ್ರದೇಶವು ಕೆರೆಯನ್ನು ಒಳಗೊಂಡಿದೆ. ಹೀಗಾಗಿ ಯಾರನ್ನು ಒಕ್ಕಲೆಬ್ಬಿಸುವುದಿಲ್ಲ. ಈಗಿರುವ ಎಲ್ಲ ಬಳಕೆದಾರರು ಮುಕ್ತವಾಗಿ ಈ ಪ್ರದೇಶವನ್ನು ಬಳಸಲು ಅವಕಾಶ ಕಲ್ಪಿಸಬಹುದಾಗಿದೆ. ಈಗಿರುವಂತೆ ಈ ಪ್ರದೇಶವನ್ನು ಬಳಸಬಹುದಾಗಿದೆ ಎಂದು ವಿವರಿಸಿದ್ದಾರೆ.

ಈ ಪ್ರದೇಶವುಬೆಂಗಳೂರಿಗೆ ‘ಜಲ ಭದ್ರತೆ’ ಒದಗಿಸುವಲ್ಲಿ ಮಹತ್ವದ ಪಾತ್ರವಹಿಸಲಿದೆ. ಜತೆಗೆ,ಕೃಷಿ ಉತ್ಪನ್ನಗಳ ಇಳುವರಿ ಹೆಚ್ಚಲಿದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ವನ್ಯಜೀವಿ ಮಂಡಳಿ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸುವಂತೆ ಸೂಚಿಸಲಾಗಿತ್ತು.

‘ನಿರ್ಬಂಧಗಳನ್ನು ವಿಧಿಸುವುದಿಲ್ಲ’
‘ಮೀಸಲು ಸಂರಕ್ಷಿತ ಪ್ರದೇಶ ಘೋಷಣೆಯಾಗುವುದರಿಂದ ಸ್ಥಳೀಯರನ್ನು ಒಕ್ಕಲೆಬ್ಬಿಸುವುದಿಲ್ಲ. ಸಂರಕ್ಷಿತ ಪ್ರದೇಶವನ್ನು ನಿರ್ವಹಿಸುವಲ್ಲಿ ಸ್ಥಳೀಯ ಸಮುದಾಯಗಳಿಗೆ ಅವಕಾಶಗಳಿರುತ್ತವೆ. ರಾಜ್ಯ ಸರ್ಕಾರ ಸಂರಕ್ಷಣಾ ಮೀಸಲು ನಿರ್ವಹಣೆ ಸಮಿತಿ (ಸಿಆರ್‌ಎಂಸಿ) ಅನ್ನು ರಚಿಸಲಿದೆ’ ಎಂದುವನ್ಯಜೀವಿ ಮಂಡಳಿ ಸದಸ್ಯ ಸಿದ್ಧಾರ್ಥ ಗೋಯಂಕ್‌ ತಿಳಿಸಿದ್ದಾರೆ.

‘ಈ ಪ್ರದೇಶದಲ್ಲಿ ಬಫರ್‌ ವಲಯ ಅಥವಾ ಪರಿಸರ ಸೂಕ್ಷ್ಮ ವಲಯ ಇರುವುದಿಲ್ಲ ಮತ್ತುಹೊಸದಾಗಿ ಯಾವುದೇ ವನ್ಯಜೀವಿಗಳ ಸಾಕಾಣಿಕೆಗೆ ಅವಕಾಶ ಕಲ್ಪಿಸುವುದಿಲ್ಲ. ಈಗಿರುವ ಸ್ಥಳೀಯ ವಿವಿಧ ಜಾತಿಯ ಪ್ರಾಣಿ ಪಕ್ಷಿಗಳಿಗೆ ಮಾತ್ರ ನೆಲೆಯಾಗಲಿದ್ದು, ಸಂರಕ್ಷಣೆಗೆ ಆದ್ಯತೆ ದೊರೆಯಲಿದೆ’ ಎಂದು ವಿವರಿಸಿದ್ದಾರೆ.

‘ಸ್ಥಳೀಯರಿಗೆ ಸಾರ್ವಜನಿಕ ರಸ್ತೆ ಮತ್ತು ಇತರ ಮಾರ್ಗಗಳ ಬಳಸಲು ಅವಕಾಶ ಸಿಗಲಿದೆ. ರೈತರು ಮತ್ತು ಮೀನುಗಾರರ ಬದುಕಿಗೂ ಭದ್ರತೆ ದೊರೆಯಲಿದೆ. ಜಾನುವಾರುಗಳನ್ನು ಮೇಯಿಸಲು ಮತ್ತು ಮೀನು ಹಿಡಿಯಲು ನಿರ್ಬಂಧ ವಿಧಿಸಲಾಗುತ್ತದೆ ಎನ್ನುವ ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಸಂರಕ್ಷಣೆ ಮೀಸಲು ಪ್ರದೇಶದಲ್ಲಿ ಈಗಿರುವಂತೆ ಎಲ್ಲ ಚಟುವಟಿಕೆಗಳು ನಡೆಯಲಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT