ಬುಧವಾರ, ನವೆಂಬರ್ 30, 2022
17 °C
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕಾರ್ಯಕ್ರಮ l ಹೈಕೋರ್ಟ್ ವಿಭಾಗೀಯ ಪೀಠದ ಆದೇಶ

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ: ಸರ್ಕಾರಕ್ಕೆ ಅಧಿಕಾರ ನೀಡಿದ ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಾಮರಾಜ ಪೇಟೆಯ ಈದ್ಗಾ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯ ಕ್ರಮ ಆಯೋಜಿಸಲು ಬಯಸುವವರಿಗೆ ಅನುಮತಿ ನೀಡುವ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಆದೇಶಿಸಿದೆ.

ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಪ್ರಶ್ನಿಸಿ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಲ್ಲಿಸಿದ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಆರಾಧೆ ಮತ್ತು ಎಸ್‌.ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

‘ಏಕಸದಸ್ಯ ನ್ಯಾಯಪೀಠ ನೀಡಿರುವ ನಿರ್ದೇಶನಗಳಲ್ಲಿ ಯಾವುದೇ ಬದ ಲಾವಣೆ ಇರುವುದಿಲ್ಲ. ಆದಾಗ್ಯೂ, ಈದ್ಗಾ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ
ಗಳನ್ನು ನಡೆಸಲು ಅನುಮತಿ ಕೋರಿ ಬೆಂಗಳೂರು ಜಿಲ್ಲಾಧಿಕಾರಿ ಸ್ವೀಕರಿಸಿರುವ ಮನವಿ ಪತ್ರಗಳನ್ನು ಇದೇ 31ರಿಂದ ಸೀಮಿತ ಅವಧಿಗೆ ಪರಿಗಣಿಸಿ ಸರ್ಕಾರ ಸೂಕ್ತ ಆದೇಶ ಹೊರಡಿಸಬಹುದು’ ಎಂದು ವಿಭಾಗೀಯ ನ್ಯಾಯಪೀಠ
ಸ್ಪಷ್ಟಪಡಿಸಿದೆ.

‘ವಿಭಾಗೀಯ ನ್ಯಾಯಪೀಠ ವ್ಯಕ್ತ ಪಡಿಸುತ್ತಿರುವ ಈ ಆದೇಶದ ಅಭಿ ಪ್ರಾಯಗಳು ಕೇವಲ ಮಧ್ಯಂತರ ಪರಿ ಹಾರ ಕುರಿತ ಮನವಿಗೆ ಸಂಬಂಧಿಸಿ ದೆಯೇ ಹೊರತಾಗಿ ಏಕಸದಸ್ಯ ನ್ಯಾಯಪೀಠದ ಮುಂದಿರುವ ರಿಟ್‌ ಅರ್ಜಿ ಅಥವಾ ಈ ಮೇಲ್ಮನವಿಯ ಅಂಶಗಳಿಗೆ ಅನ್ವಯಿಸುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಮೇಲ್ಮನವಿ ಯಾಕೆ?: 'ಮೈದಾನದ ಮಾಲೀಕತ್ವ ಕಂದಾಯ ಇಲಾಖೆಗೆ ಸೇರಿದೆ‘ ಎಂಬ ಸರ್ಕಾರದ ಆದೇಶವನ್ನು ಪ್ರಶ್ನಿಸಿ ವಕ್ಫ್‌ ಮಂಡಳಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಮತ್ತು ಬೆಂಗಳೂರು ಜಿಲ್ಲೆ ವಕ್ಫ್‌ ಸಲಹಾ ಸಮಿತಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಹೇಮಂತ ಚಂದನ ಗೌಡರ ಅವರಿದ್ದ ಏಕಸದಸ್ಯ ನ್ಯಾಯ ಪೀಠ, ಗುರುವಾರವಷ್ಟೇ (ಆ.25) ವಿಚಾರಣೆ ನಡೆಸಿ ಮಧ್ಯಂತರ ಆದೇಶ ಹೊರಡಿಸಿತ್ತು.

‘ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರು ರಮ್ಜಾನ್ ಮತ್ತು ಬಕ್ರೀದ್ ದಿನದಂದು  ಮೈದಾನದಲ್ಲಿ ಪಾರ್ಥನೆ ಸಲ್ಲಿಸಬಹುದು. ಈ ಎರಡು ದಿನಗಳನ್ನು ಹೊರತು ಪಡಿಸಿ ಬೇರಾವುದೇ ದಿನ ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಬಿಬಿಎಂಪಿ ಮತ್ತು ಸರ್ಕಾರ ಮೈದಾನದಲ್ಲಿ ಗಣ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಆಚರಣೆಗೆ ಅನುಮತಿ ನೀಡಬಹುದು, ಮೈದಾನವನ್ನು ಆಟದ ಬಳಕೆಗೆ ಮಾತ್ರ ವೇ ಸೀಮಿತಗೊಳಿಸಬೇಕು’ ಎಂದು ಏಕಸದಸ್ಯ ನ್ಯಾಯಪೀಠ ನಿರ್ದೇಶಿಸಿತ್ತು.

‘ಧಾರ್ಮಿಕ ಸಹಿಷ್ಣುತೆ ಭಾರತದ ಮೂಲ ಲಕ್ಷಣ’

‘ಭಾರತ ಧಾರ್ಮಿಕ, ಭಾಷಾ, ಪ್ರಾದೇಶಿಕ ಮತ್ತು ವಿವಿಧ ವರ್ಗಗಳ ವೈಶಿಷ್ಟ್ಯತೆ ಹೊಂದಿರುವ ದೇಶ. ಧಾರ್ಮಿಕ ಸಹಿಷ್ಣುತೆ ಈ ದೇಶದ ನಾಗರಿಕತೆಯ ಮೂಲ ಲಕ್ಷಣವಾಗಿದೆ.
ಭಾರತದ ಸಂವಿಧಾನವೂ ಸಮಾಜದ ವಿವಿಧ ವರ್ಗಗಳ ನಡುವೆ ಸಹೋದರತ್ವವನ್ನೇ ಸಲಹುತ್ತದೆ. ಪ್ರಕರಣದ ವಿಶೇಷ ಅಂಶಗಳನ್ನು ಪರಿಗಣಿಸಿಯೇ ಈ ಹಂತದಲ್ಲಿ ಏಕಸದಸ್ಯ ನ್ಯಾಯಪೀಠದ ಆದೇಶವನ್ನು ಮಾರ್ಪಾಡು ಮಾಡಲಾಗುತ್ತಿದೆ’ ಎಂದು ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠವು ಹೇಳಿದೆ.

‘ಬದ್ಧತೆ ಪ್ರದರ್ಶಿಸಿದ ಸರ್ಕಾರ’

‘ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ನಿನ್ನೆಯಷ್ಟೇ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶದಿಂದ ನಮಗೆ ಆಘಾತವಾಗಿತ್ತು. ಇವತ್ತು ಸರ್ಕಾರ ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಮೂಲಕ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ’ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ಮತ್ತು ಜಂಟಿ ಕಾರ್ಯದರ್ಶಿ ಜೆ.ಎಸ್‌.ಶಶಾಂಕ ಹೇಳಿದರು.

‘ವಕ್ಫ್‌ ಮಂಡಳಿ ಸರ್ಕಾರದ ಅಧೀನದಲ್ಲಿರುವ ಸಂಸ್ಥೆ. ಆದರೆ ಮಂಡಳಿಯೇ ಸರ್ಕಾರದ ಮೇಲೆ ಕೇಸು ಹಾಕಿದೆ. ಆದ್ದರಿಂದ ಸರ್ಕಾರವು ಕೂಡಲೇ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಅಥವಾ ಸಿಇಒ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು