ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಮಾಡದ್ದಕ್ಕೆ ಗೌರವ್ ಗುಪ್ತಗೆ ಹೈಕೋರ್ಟ್ ತರಾಟೆ

ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿ
Last Updated 27 ಅಕ್ಟೋಬರ್ 2021, 21:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿನ ಅನಧಿಕೃತ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.

2019ರಲ್ಲಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಋತುರಾಜ ಅವಸ್ತಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠ, ‘ನಿಮ್ಮನ್ನು ರಕ್ಷಿಸಲು ನಾವಿದ್ದೇವೆ. ಆದರೆ, ಕ್ರಮ ಕೈಗೊಳ್ಳಲು ನೀವು ಹೆದರುವುದೇಕೆ? ನೀವು ಅತೀ ಮುಖ್ಯ ಹುದ್ದೆಯಲ್ಲಿದ್ದೀರಿ ಮತ್ತು ನೀವು ಕೆಲಸ ಮಾಡುತ್ತೀರಿ ಎಂದು ನಾವು ನಿರೀಕ್ಷೆ ಮಾಡಿದ್ದೇವೆ. ಹೋಗಿ ಕೆಲಸ ಮಾಡಿ’ ಎಂದು ನ್ಯಾಯಾಲಯಕ್ಕೆ ಹಾಜರಾಗಿದ್ದ ಗೌರವ್ ಗುಪ್ತ ಅವರಿಗೆ ಸೂಚನೆ ನೀಡಿತು.

‘ಯೋಜನಾ ನಕ್ಷೆ ಉಲ್ಲಂಘಿಸಿ ನಿರ್ಮಿಸಿರುವ 4,279 ಕಟ್ಟಡಗಳನ್ನು ಗುರುತಿಸಲಾಗಿದೆ. ಇನ್ನೂ 2,591 ಕಟ್ಟಡಗಳ ಸಮೀಕ್ಷೆ ಬಾಕಿ ಇದೆ’ ಎಂದು ಗೌರವ್ ಗುಪ್ತ ಪ್ರಮಾಣ ಪತ್ರ ಸಲ್ಲಿಸಿದರು. ಯೋಜನೆ ರೂಪಿಸದೆ, ಅನುಮತಿ ಪಡೆಯದೆ ನಿರ್ಮಾಣ ಆಗಿರುವ ಕಟ್ಟಡಗಳ ಸಮೀಕ್ಷೆಯನ್ನೇ ನಡೆಸಿಲ್ಲ ಎಂಬುದನ್ನು ಪೀಠ ಗಮನಿಸಿತು.

‘ಪ್ರಮಾಣಪತ್ರದಲ್ಲಿ ಇರುವ ಮಾಹಿತಿ ಬಗ್ಗೆ ತೃಪ್ತಿ ಇಲ್ಲ. ಈ ಸಂಬಂಧ 2019ರಲ್ಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎರಡು ವರ್ಷ ಕಳೆದರೂ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಕಟ್ಟುನಿಟ್ಟಿನ ಕ್ರಮಕೈಗೊಳ್ಳುವುದಾಗಿ ಮುಖ್ಯ ಆಯುಕ್ತರು ಭರವಸೆ ನೀಡಿದ ಬಳಿಕ ಪ್ರಕರಣವನ್ನು ಡಿ.9ಕ್ಕೆ ಪೀಠ ಮುಂದೂಡಿತು. ‘ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಿರುವ ಬಗ್ಗೆ ಮುಂದಿನ ವಿಚಾರಣೆ ವೇಳೆಗೆ ವಿವರ ಸಲ್ಲಿಸಬೇಕು’ ಎಂದು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT